HEALTH TIPS

RSS ಅಂಗಸಂಸ್ಥೆಗಳ ಬುಡಕಟ್ಟು ಸಮಾವೇಶದ ಪ್ರತಿನಿಧಿಗಳಿಗೆ ವಸತಿ ಕಲ್ಪಿಸಲು ದಿಲ್ಲಿ ಸರಕಾರಿ ಶಾಲೆಗಳ ಬಳಕೆ!

ನವದೆಹಲಿ: ಕೆಂಪು ಕೋಟೆಯಲ್ಲಿ ರವಿವಾರ (ಮೇ 24) ಆಯೋಜಿಸಲಾಗಿದ್ದ ಬೃಹತ್ ಬುಡಕಟ್ಟು ಸಮುದಾಯಗಳ ಸಮಾವೇಶ 'ಜನಜಾತಿ ಸಾಂಸ್ಕೃತಿಕ ಸಮಾಗಮ'ದಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳಿಗೆ ವಸತಿ ಸೌಕರ್ಯ ಕಲ್ಪಿಸಲು ದಿಲ್ಲಿಯ ಕನಿಷ್ಠ 72 ಸರ್ಕಾರಿ ಶಾಲೆಗಳನ್ನು ಬಳಸಿಕೊಳ್ಳಲಾಗಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸಂಯೋಜಿತ ಸಂಸ್ಥೆಗಳಾದ 'ಜನಜಾತಿ ಸುರಕ್ಷಾ ಮಂಚ್' (JSM), 'ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ' (ABVKA) ಮತ್ತು ಮತ್ತೊಂದು ಸ್ವಯಂಸೇವಾ ಸಂಸ್ಥೆಯಾದ 'ಜನಜಾತಿ ಜಾಗೃತಿ ಸಮಿತಿ' ಜಂಟಿಯಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಸಮಾವೇಶದ ಮುಖ್ಯ ಭಾಷಣಕಾರರಾಗಿದ್ದರು.

ಬುಡಕಟ್ಟು ಸಮುದಾಯದ ಹೋರಾಟಗಾರ ಹಾಗೂ ಜನನಾಯಕ ಬಿರ್ಸಾ ಮುಂಡಾ ಅವರ 150ನೇ ಜನ್ಮ ಜಯಂತಿಯ ಸ್ಮರಣಾರ್ಥ ಈ ಸಮಾವೇಶವನ್ನು ಆಯೋಜಿಸಲಾಗಿತ್ತು. ಆದರೆ, "ಈ ಸಮಾವೇಶದ ಹಿಂದಿರುವ ಮೂಲ ಸಿದ್ಧಾಂತವೇ ಆದಿವಾಸಿಗಳ ಹಿತಾಸಕ್ತಿಗೆ ವಿರುದ್ಧವಾಗಿದೆ" ಎಂದು ವಾದಿಸಿ, ಹಲವು ಆದಿವಾಸಿ ಸಂಘಟನೆಗಳು ಮತ್ತು ಕಾರ್ಯಕರ್ತರು ಈ ಕಾರ್ಯಕ್ರಮವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಇದನ್ನು 'ಜನಜಾತೀಯ ಮಹಾಕುಂಭ' ಎಂದು ಬಣ್ಣಿಸಿದರು. 550 ಬುಡಕಟ್ಟು ಸಮುದಾಯಗಳಿಗೆ ಸೇರಿದ ಸುಮಾರು 1.5 ಲಕ್ಷಕ್ಕೂ ಹೆಚ್ಚು ಜನರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು ಎಂದು ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ ಹೇಳಿದೆ.

ಬುಡಕಟ್ಟು ಸಮುದಾಯಗಳಲ್ಲಿ ನಡೆಯುವ ಮತಾಂತರವನ್ನು ವಿರೋಧಿಸಲು 2006ರಲ್ಲಿ 'ಜನಜಾತಿ ಸುರಕ್ಷಾ ಮಂಚ್' ಅನ್ನು ಸ್ಥಾಪಿಸಲಾಗಿತ್ತು. 'ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ'ವು ಬುಡಕಟ್ಟು ಸಮುದಾಯಗಳ ನಡುವೆ ಅವರ ಸಂಸ್ಕೃತಿಯನ್ನು ರಕ್ಷಿಸಲು ಹಾಗೂ ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳಿಗೆ ಆಗುವ ಮತಾಂತರವನ್ನು ತಡೆಯಲು ಕೆಲಸ ಮಾಡುತ್ತಿದೆ. ಈ ಎರಡೂ ಸಂಸ್ಥೆಗಳು RSSನೊಂದಿಗೆ ನಂಟು ಹೊಂದಿವೆ.

ಈ ಸಮಾವೇಶವನ್ನು ವಿರೋಧಿಸುತ್ತಿರುವವರು, RSS ಅಂಗಸಂಸ್ಥೆಗಳು "ಸತತವಾಗಿ 'ಆದಿವಾಸಿ' ಎಂಬ ಪದವನ್ನು ಬಳಸುವುದನ್ನು ತಪ್ಪಿಸುತ್ತವೆ. ಇದರ ಬದಲಿಗೆ ಬುಡಕಟ್ಟು ಸಮುದಾಯಗಳನ್ನು 'ಜನಜಾತಿಗಳು' ಅಥವಾ 'ವನವಾಸಿಗಳು' ಎಂದು ಕರೆಯುತ್ತವೆ" ಎಂಬುದನ್ನು ಎತ್ತಿ ತೋರಿಸಿದ್ದಾರೆ. ಜಂಟಿ ಹೇಳಿಕೆಗೆ ಸಹಿ ಹಾಕಿರುವ ಕಾರ್ಯಕರ್ತರ ಪ್ರಕಾರ, ಈ ಸಂಸ್ಥೆಗಳು ಆದಿವಾಸಿಗಳನ್ನು ಹಿಂದೂ ಸಾಮಾಜಿಕ ವ್ಯವಸ್ಥೆಯ ಭಾಗವೆಂದೇ ಪರಿಗಣಿಸುತ್ತವೆ ಮತ್ತು "ಸರ್ನಾ ಸನಾತನ ಏಕ್" (ಸರ್ನಾ ಮತ್ತು ಸನಾತನ ಒಂದೇ) ನಂತಹ ಘೋಷಣೆಗಳನ್ನು ಉತ್ತೇಜಿಸುತ್ತವೆ ಎಂದಿದ್ದಾರೆ.

'The Wire' ಮಾಧ್ಯಮಕ್ಕೆ ಲಭ್ಯವಾಗಿರುವ ದಿಲ್ಲಿ ಶಿಕ್ಷಣ ನಿರ್ದೇಶನಾಲಯದ ಅಧಿಕೃತ ಪ್ರಕಟಣೆಯ ಪ್ರಕಾರ, "ಗುರುತಿಸಲಾದ 72 ಶಾಲೆಗಳಲ್ಲಿ ಮೇ 21ರಿಂದ ಮೇ 25ರವರೆಗೆ ಪ್ರತಿನಿಧಿಗಳು ಮತ್ತು ಅತಿಥಿಗಳಿಗೆ ವಸತಿ ಸೌಕರ್ಯಗಳನ್ನು ಕಲ್ಪಿಸಲು ಜನಜಾತಿ ಸುರಕ್ಷಾ ಮಂಚ್ ಗೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರವು ಅನುಮತಿ ನೀಡಿದೆ" ಎಂದು ತಿಳಿದುಬಂದಿದೆ. ಶಾಲಾ ಆವರಣವನ್ನು ಕಟ್ಟುನಿಟ್ಟಾಗಿ ಅನುಮೋದಿತ ಉದ್ದೇಶಕ್ಕಾಗಿ ಮತ್ತು ನಿರ್ದಿಷ್ಟಪಡಿಸಿದ ಅವಧಿಗೆ ಮಾತ್ರ ಬಳಸಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದ್ದು, ಕಾರ್ಯಕ್ರಮದ ವ್ಯವಸ್ಥೆಗಳಿಗೆ ಅಗತ್ಯವಾದ ಸಮನ್ವಯ ಮತ್ತು ಸಹಕಾರವನ್ನು ನೀಡುವಂತೆ ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿತ್ತು.

ಪ್ರತಿನಿಧಿಗಳ ವಾಸ್ತವ್ಯಕ್ಕೆ ಶಾಲೆಗಳನ್ನು ಬಳಸಲು ಅನುಮತಿ ನೀಡಲಾಗಿದ್ದರೂ, ಶಾಲೆಗಳಲ್ಲಿರುವ ಸ್ಮಾರ್ಟ್ ಕ್ಲಾಸ್ ರೂಮ್ ಗಳು, ಲ್ಯಾಬ್ ಮತ್ತು ಗ್ರಂಥಾಲಯಗಳನ್ನು ಯಾವುದೇ ಕಾರಣಕ್ಕೂ ಬಳಸಬಾರದು ಎಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು.

ಖಾಸಗಿ ಸಂಸ್ಥೆಯೊಂದು ಆಯೋಜಿಸಿದ್ದ ಇಂತಹ ಸೈದ್ಧಾಂತಿಕ ಕಾರ್ಯಕ್ರಮಕ್ಕಾಗಿ ಶಾಲೆಗಳನ್ನು ಬಳಸಿಕೊಂಡಿರುವುದು ಶಿಕ್ಷಕರಲ್ಲಿ ತೀವ್ರ ಕಳವಳ ಮೂಡಿಸಿದೆ.

ಈ ಪಟ್ಟಿಯಲ್ಲಿದ್ದ ಕೆಲವು ಶಾಲೆಗಳ ಶಿಕ್ಷಕರು 'The Wire' ಜತೆ ಮಾತನಾಡಿದ್ದು, "ಸಮಾವೇಶಕ್ಕೆ ಬರುವ ಪ್ರತಿನಿಧಿಗಳಿಗೆ ವಾಸ್ತವ್ಯ ಕಲ್ಪಿಸಲು ವಾರಾಂತ್ಯದಲ್ಲೇ ತರಗತಿ ಕೊಠಡಿಗಳು ಮತ್ತು ಶಾಲೆಯ ಆವರಣವನ್ನು ಸಂಪೂರ್ಣವಾಗಿ ಮರುಹೊಂದಿಸಲಾಗಿತ್ತು" ಎಂದು ತಿಳಿಸಿದ್ದಾರೆ. ಹೆಸರು ಹೇಳಲಿಚ್ಛಿಸದ ಉತ್ತರ ದಿಲ್ಲಿಯ ಸರ್ಕಾರಿ ಶಾಲೆಯೊಂದರ ಶಿಕ್ಷಕರೊಬ್ಬರು, "ಕಾರ್ಯಕ್ರಮಕ್ಕೂ ಮುನ್ನವೇ ಶಾಲಾ ಕ್ಯಾಂಪಸ್ನೊಳಗೆ ಟೆಂಟ್ ಗಳು, ಬೆಡ್ಗಳು ಮತ್ತು ಬೆಡ್ಶೀಟ್ ಗಳ ವ್ಯವಸ್ಥೆ ಮಾಡಲಾಗಿತ್ತು" ಎಂದು ಹೇಳಿದ್ದಾರೆ.

"ಶಾಲೆಯ ಆವರಣದಲ್ಲಿ ಉಳಿದುಕೊಳ್ಳುವ ಅತಿಥಿಗಳಿಗಾಗಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಶನಿವಾರ ಸಂಜೆ ನಮಗೆ ಮಾಹಿತಿ ನೀಡಲಾಯಿತು. ತರಗತಿಗಳಲ್ಲಿ ಹಾಸಿಗೆ ಹಾಸಲಾಗಿತ್ತು. ತಾತ್ಕಾಲಿಕವಾಗಿ ಟೆಂಟ್ ಗಳ ಮಾದರಿಯ ವ್ಯವಸ್ಥೆಯನ್ನೂ ಮಾಡಲಾಗಿತ್ತು" ಎಂದು ಶಿಕ್ಷಕರು ವಿವರಿಸಿದ್ದಾರೆ.

ಸರ್ಕಾರಿ ಶಾಲೆಗಳನ್ನು ಖಾಸಗಿ ಬಳಕೆಗೆ ನೀಡಿದ್ದು ಹೇಗೆ? ಈ ಕಾರ್ಯಕ್ರಮದ ಆಯೋಜನೆಯಲ್ಲಿ ದಿಲ್ಲಿ ಸರ್ಕಾರದ ಪಾತ್ರವೇನಾದರೂ ಇದೆಯೇ? ಎಂದು ಪ್ರಶ್ನಿಸಿ 'The Wire' ದಿಲ್ಲಿ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರು, ಶಿಕ್ಷಣ ಸಚಿವರು ಮತ್ತು ಇಲಾಖೆಯ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಇಲ್ಲಿವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದೆ.

ಆನ್ ಲೈನ್ ಗೆ ಬದಲಾದ ತರಗತಿಗಳು

ಸಮಾವೇಶ ನಡೆದ ದಿನಗಳಲ್ಲಿ ಕೆಲವು ತರಗತಿಗಳನ್ನು ಆನ್ಲೈನ್ ಮೋಡ್ ಗೆ ಬದಲಾಯಿಸಲಾಗಿತ್ತು ಎಂದು ಶಿಕ್ಷಕರೊಬ್ಬರು ಆಪಾದಿಸಿದ್ದಾರೆ. ಅವರ ಪ್ರಕಾರ, ಆರಂಭದಲ್ಲಿ ಶಾಲಾ ಸಿಬ್ಬಂದಿಗೆ ಕೇವಲ ಮೌಖಿಕವಾಗಿ ಈ ಮಾಹಿತಿ ನೀಡಲಾಗಿತ್ತು. ಈ ಕಾರ್ಯಕ್ರಮದ ಸ್ವರೂಪವೇನು ಎಂಬುದರ ಕುರಿತು ಶಿಕ್ಷಕರಿಗೆ ತಕ್ಷಣಕ್ಕೆ ಯಾವುದೇ ಅಧಿಕೃತ ಲಿಖಿತ ಮಾಹಿತಿ ಸಿಕ್ಕಿರಲಿಲ್ಲ. ನಂತರವಷ್ಟೇ ಇಮೇಲ್ ಮೂಲಕ ಬಂದಿದ್ದ ಅಧಿಕೃತ ಸುತ್ತೋಲೆ ಅವರ ಗಮನಕ್ಕೆ ಬಂದಿದೆ.

"ಮೊದಲಿಗೆ ನಮಗೆ ಹೆಚ್ಚುವರಿ ತರಗತಿಗಳನ್ನು ಮೂರು ದಿನಗಳ ಕಾಲ ಆನ್ಲೈನ್ನಲ್ಲಿ ನಡೆಸಲಾಗುವುದು ಎಂದು ಹೇಳಲಾಗಿತ್ತು. ಆಮೇಲಷ್ಟೇ ಇದು 'ಜನಜಾತಿ ಸಮಾಗಮ' ಕಾರ್ಯಕ್ರಮಕ್ಕೆ ಸಂಬಂಧಿಸಿದ್ದು ಎಂಬ ವಿಷಯ ನಮಗೆ ಗೊತ್ತಾಯಿತು" ಎಂದು ಶಿಕ್ಷಕರು ಹೇಳಿದ್ದಾರೆ. ಸದ್ಯ ಶಾಲೆಗಳಿಗೆ ಬೇಸಿಗೆ ರಜೆ ಇದ್ದು, 9, 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಗತಿಗಳು ನಡೆಯುತ್ತಿವೆ.

ಇದು ಸರ್ಕಾರದ ಅಧಿಕೃತ ಕಾರ್ಯಕ್ರಮವೇ ಅಥವಾ ಖಾಸಗಿ ಕಾರ್ಯಕ್ರಮವೇ ಎಂದು ಶಾಲೆಯ ಆಂತರಿಕ ವಲಯದಲ್ಲಿ ಪ್ರಶ್ನಿಸಿದಾಗ, ನಮಗೆ ಕೇವಲ ಫೋನ್ ಕಾಲ್ ಗಳ ಮೂಲಕ ಮೇಲಧಿಕಾರಿಗಳಿಂದ ಸೂಚನೆಗಳು ಬಂದಿವೆ ಎಂದು ಶಾಲಾ ಆಡಳಿತ ಮಂಡಳಿ ಸಮರ್ಥಿಸಿಕೊಂಡಿದೆ ಎಂದೂ ಶಿಕ್ಷಕರು ಗಂಭೀರ ಆರೋಪ ಮಾಡಿದ್ದಾರೆ.

"ಆರಂಭದಲ್ಲಿ ಯಾವುದೇ ಅಧಿಕೃತ ಮಾಹಿತಿ ಸಿಗದ ಕಾರಣ ಗೊಂದಲ ನಿರ್ಮಾಣವಾಗಿತ್ತು. RSS ಅಂಗಸಂಸ್ಥೆಗೆ ಸೇರಿದ ಕಾರ್ಯಕ್ರಮಕ್ಕಾಗಿ ಸರ್ಕಾರಿ ಶಾಲೆಗಳನ್ನು ಈ ರೀತಿ ಬಳಸಿಕೊಳ್ಳುವುದು ಎಷ್ಟು ಸರಿ ಎಂದು ಕೆಲವು ಶಿಕ್ಷಕರು ಪ್ರಶ್ನಿಸಿದ್ದರು." ಸದ್ಯ ಈ ವಿವಾದಕ್ಕೆ ಸಿಲುಕಿರುವ ಶಾಲೆಯೊಂದರಲ್ಲೇ ಸುಮಾರು 1,700 ಪ್ರತಿನಿಧಿಗಳಿಗೆ ವಸತಿ ಕಲ್ಪಿಸಲಾಗಿತ್ತು ಎನ್ನಲಾಗಿದೆ.

ದಿಲ್ಲಿಯ ಕೆಲವು ಸರ್ಕಾರಿ ಶಾಲೆಗಳ ಮುಂಭಾಗದಲ್ಲಿ ಕಾರ್ಯಕ್ರಮಕ್ಕೆ ಬರುವ ಪ್ರತಿನಿಧಿಗಳನ್ನು ಸ್ವಾಗತಿಸುವ ಬೃಹತ್ ಬ್ಯಾನರ್ಗಳನ್ನು ಅಳವಡಿಸಿರುವ ಫೋಟೋಗಳು ಲಭ್ಯವಾಗಿವೆ. ಈ ಬ್ಯಾನರ್ಗಳಲ್ಲಿ 'ಜನಜಾತಿ ಸುರಕ್ಷಾ ಮಂಚ್' ಮತ್ತು 'ಜನಜಾತಿ ಜಾಗೃತಿ ಸಮಿತಿ' ಹೆಸರುಗಳ ಜೊತೆಗೆ, "ದೇಶದಾದ್ಯಂತ ಆಗಮಿಸುತ್ತಿರುವ ಎಲ್ಲಾ ಬುಡಕಟ್ಟು ಅತಿಥಿಗಳಿಗೆ ದಿಲ್ಲಿ ಸರ್ಕಾರ ಮತ್ತು ದಿಲ್ಲಿ ಪ್ರವಾಸೋದ್ಯಮ ಇಲಾಖೆಯ ಪರವಾಗಿ ಹಾರ್ದಿಕ ಸ್ವಾಗತ" ಎಂದು ಬರೆಯಲಾಗಿದೆ.

ಹೀಗೆ ಬ್ಯಾನರ್ಗಳ ಮೇಲೆ ದಿಲ್ಲಿ ಸರ್ಕಾರದ ಅಧಿಕೃತ ಲೋಗೋ ಮತ್ತು ಹೆಸರುಗಳನ್ನು ಬಳಸಿರುವುದು, ಈ ಕಾರ್ಯಕ್ರಮದ ಆಯೋಜನೆಯಲ್ಲಿ ಸರ್ಕಾರದ ಪಾತ್ರ ಎಷ್ಟು ದೊಡ್ಡದಿದೆ ಎಂಬ ಬಗ್ಗೆ ಶಿಕ್ಷಕರಲ್ಲಿ ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.

'ದಿ ವೈರ್' ಜೊತೆ ಮಾತನಾಡಿದ ಶಿಕ್ಷಕರೊಬ್ಬರು, "ಸೈದ್ಧಾಂತಿಕ ಅಥವಾ ರಾಜಕೀಯ ಸಂಘಟನೆಗಳಿಗೆ ಸೇರಿದ ಕಾರ್ಯಕ್ರಮಗಳಿಗಾಗಿ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯಗಳನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಬಳಸಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ. "ಸರ್ಕಾರಿ ಶಾಲೆಗಳಲ್ಲಿ ಈ ಹಿಂದೆಯೂ ಸಾರ್ವಜನಿಕ ಕಲ್ಯಾಣ ಯೋಜನೆಗಳ ಕಾರ್ಯಕ್ರಮಗಳು ನಡೆದಿವೆ. ಆದರೆ, ಈ ಕಾರ್ಯಕ್ರಮದ ಆಯೋಜಕರ ರಾಜಕೀಯ ಮತ್ತು ಸೈದ್ಧಾಂತಿಕ ಹಿನ್ನೆಲೆಯನ್ನು ನೋಡಿದರೆ ಇದು ಸಂಪೂರ್ಣ ಭಿನ್ನವಾಗಿ ಕಾಣುತ್ತಿದೆ" ಎಂದು ಹೇಳಿದ್ದಾರೆ.

ರವಿವಾರ ತಮ್ಮ ಭಾಷಣದಲ್ಲಿ ಅಮಿತ್ ಶಾ ಅವರು ಈ ಕಾರ್ಯಕ್ರಮವನ್ನು ಖಾಸಗಿಯಾಗಿ ಹಮ್ಮಿಕೊಳ್ಳಲಾಗಿದ್ದರೂ ಸಹ, ತಾವು ದೇಶದ ಗೃಹ ಸಚಿವರಾಗಿಯೇ ಇಲ್ಲಿ ಮಾತನಾಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಏಕರೂಪ ನಾಗರಿಕ ಸಂಹಿತೆ (UCC) ವಿಚಾರವಾಗಿ ಬುಡಕಟ್ಟು ಸಮುದಾಯಗಳನ್ನು 'ವಿಭಜಿಸಲು' ಸಂಚು ನಡೆಯುತ್ತಿದೆ ಎಂದು ಆರೋಪಿಸಿದ ಶಾ, ಯಾವುದೇ ಕಾರಣಕ್ಕೂ ಬುಡಕಟ್ಟು ಸಮುದಾಯಗಳಿಗೆ ಯುಸಿಸಿ ಅನ್ವಯವಾಗದಂತೆ ತಾವೇ ಖುದ್ದಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.

"ಯುಸಿಸಿ ಜಾರಿಯಾದರೆ ಬುಡಕಟ್ಟು ಸಮುದಾಯಗಳ ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಕಸಿದುಕೊಳ್ಳಲಾಗುತ್ತದೆ ಎಂಬ ತಪ್ಪು ಸಂದೇಶ ರವಾನಿಸಲು ದೊಡ್ಡದೊಂದು ಪಿತೂರಿ ನಡೆಯುತ್ತಿದೆ. ಇಂದು ಈ ಮಹಾಕುಂಭದ ವೇದಿಕೆಯಲ್ಲಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಗೃಹ ಸಚಿವನಾಗಿ ನಾನು ನಿಮಗೆ ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಭರವಸೆ ನೀಡುತ್ತಿದ್ದೇನೆ. ಯಾವುದೇ ಬುಡಕಟ್ಟು ಪ್ರದೇಶದಲ್ಲಾಗಲಿ ಅಥವಾ ಯಾವುದೇ ಬುಡಕಟ್ಟು ವ್ಯಕ್ತಿಗಾಗಲಿ ಯುಸಿಸಿ ಅನ್ವಯಿಸುವುದಿಲ್ಲ. ಇದು ಬುಡಕಟ್ಟು ಜನರ ಯಾವುದೇ ಹಕ್ಕುಗಳ ಮೇಲೆ ಹಸ್ತಕ್ಷೇಪ ಮಾಡುವುದಿಲ್ಲ" ಎಂದು ಅಮಿತ್ ಶಾ ಹೇಳಿದ್ದಾರೆ.

►ವ್ಯವಸ್ಥೆಯ ಉಸ್ತುವಾರಿ ವಹಿಸಿದ್ದು ಸ್ಥಳೀಯ ಬಿಜೆಪಿ-RSS ನಾಯಕರು

ಸ್ಥಳೀಯ ಬಿಜೆಪಿ ಮತ್ತು RSS ನಾಯಕರು ಶಾಲೆಗಳೊಂದಿಗೆ ನೇರ ಸಂಪರ್ಕ ಸಾಧಿಸಿ, ಪ್ರತಿನಿಧಿಗಳ ವಾಸ್ತವ್ಯದ ಪ್ರತಿಯೊಂದು ವ್ಯವಸ್ಥೆಯ ಉಸ್ತುವಾರಿ ವಹಿಸಿದ್ದಾರೆ ಎಂದು 'The Wire' ವರದಿಯಲ್ಲಿ ಉಲ್ಲೇಖಿಸಿದೆ.

ಹಲವಾರು ಶಾಲೆಗಳಲ್ಲಿ ಮಾಡಲಾಗಿದ್ದ ಈ ವ್ಯವಸ್ಥೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ಮೂಲವೊಂದು 'ದಿ ವೈರ್'ಗೆ ನೀಡಿರುವ ಮಾಹಿತಿ ಪ್ರಕಾರ, ಈ ಇಡೀ ಕಾರ್ಯಕ್ರಮದ ಅವಧಿಯಲ್ಲಿ ದಿಲ್ಲಿ ಸರ್ಕಾರಿ ಶಾಲೆಗಳಲ್ಲಿ ಸುಮಾರು 50,000ಕ್ಕೂ ಹೆಚ್ಚು ಬುಡಕಟ್ಟು ಜನರಿಗೆ ವಸತಿ ಕಲ್ಪಿಸಲಾಗಿತ್ತು.

ಆದರೆ, ಇಷ್ಟೊಂದು ದೊಡ್ಡ ಮಟ್ಟದ ಜನರಿಗೆ ಊಟ, ನೀರು ಮತ್ತು ಇತರ ಲಾಜಿಸ್ಟಿಕ್ಸ್ ವ್ಯವಸ್ಥೆಗಳಿಗಾಗಿ ಹಣ ಎಲ್ಲಿಂದ ಬಂತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೆಲವು ಸ್ಥಳೀಯ ನಾಯಕರುಗಳೇ ಈ ನಿಧಿಯನ್ನು ಒದಗಿಸಿದ್ದಾರೆ ಅಥವಾ ಅದಕ್ಕಾಗಿ ಹಣದ ವ್ಯವಸ್ಥೆ ಮಾಡಿದ್ದಾರೆ. ಕಾರ್ಯಕ್ರಮದ ವೆಚ್ಚವನ್ನು ಭರಿಸಲು ಸ್ಥಳೀಯ ಅಂಗಡಿಕಾರರಿಂದ ದೇಣಿಗೆ ಅಥವಾ 'ಚಂದಾ' ಸಂಗ್ರಹಿಸಲಾಗಿತ್ತು. ಇದರಿಂದಲೇ ಕಾರ್ಯಕ್ರಮದ ಖರ್ಚು-ವೆಚ್ಚಗಳಿಗೆ ಭಾರಿ ಪ್ರಮಾಣದ ಹಣ ಒದಗಿಬಂದಿತ್ತು ಎಂದು ಮೂಲಗಳು ಹೇಳಿವೆ.

ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಪ್ರತಿನಿಧಿಗಳಿಗೆ ಊಟ, ಕುಡಿಯುವ ನೀರು, ಸ್ನಾನದ ಸೌಕರ್ಯ ಸೇರಿದಂತೆ ಎಲ್ಲಾ ಮೂಲಭೂತ ಅಗತ್ಯಗಳ ವ್ಯವಸ್ಥೆಯನ್ನು ಶಾಲಾ ಆವರಣದ ಒಳಗಡೆಯೇ ಮಾಡಿಕೊಡಲಾಗಿತ್ತು.

►ಕಲಿಸುವ ಕೆಲಸ ಹೊರತುಪಡಿಸಿ ಉಳಿದೆಲ್ಲವನ್ನೂ ಮಾಡುತ್ತೇವೆ

ದಕ್ಷಿಣ ದಿಲ್ಲಿಯ ಸರ್ಕಾರಿ ಶಾಲೆಯೊಂದರ ಶಿಕ್ಷಕಿಯೊಬ್ಬರು (ಇವರ ಶಾಲೆ ಆಯ್ಕೆಯಾಗಿದ್ದ ಆ 72 ಶಾಲೆಗಳ ಪಟ್ಟಿಯಲ್ಲಿ ಇರಲಿಲ್ಲ) 'The Wire' ಜೊತೆ ಮಾತನಾಡುತ್ತಾ, ಇತ್ತೀಚಿನ ದಿನಗಳಲ್ಲಿ ಶಾಲೆಗಳನ್ನು ಮತ್ತು ಶಿಕ್ಷಕರನ್ನು ಶಿಕ್ಷಣಕ್ಕೆ ಸಂಬಂಧಿಸಿರದ ಇತರ ಕೆಲಸಗಳಿಗಾಗಿ ಹೆಚ್ಚೆಚ್ಚು ಬಳಸಿಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

"ನನ್ನ ಶಾಲೆಯಲ್ಲಿ ಇಂತಹ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ. ಆದರೆ ಈ ಕಾರ್ಯಕ್ರಮದ ಬಗ್ಗೆ ನನಗೆ ಗೊತ್ತಿದೆ. ಇದು ನಿಜಕ್ಕೂ ತೀವ್ರ ಕಳವಳಕಾರಿ ಸಂಗತಿ" ಎಂದಿದ್ದಾರೆ ಆ ಶಿಕ್ಷಕಿ.

"ಈ ಕಾರ್ಯಕ್ರಮ RSS ಬೆಂಬಲಿತವಾಗಿತ್ತು. ಅವರು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. ಹೀಗಿರುವಾಗ ಇದಕ್ಕಿಂತ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ?" ಬೋಧನೆಗೆ ಸಂಬಂಧಿಸಿರದ ಇಂತಹ ಕೆಲಸಗಳಿಗಾಗಿ ಶಾಲೆಗಳನ್ನು ಮತ್ತು ಶಿಕ್ಷಕರನ್ನು ನಿಯೋಜಿಸುತ್ತಿರುವುದು ಇದೇ ಮೊದಲೇನಲ್ಲ ಎಂದು ಅವರು ತಿಳಿಸಿದ್ದಾರೆ.

"ಉದಾಹರಣೆಗೆ, ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅವಧಿಯಲ್ಲಿಯೂ ಸಹ, ಸರ್ಕಾರದ ಕಾರ್ಯಕ್ರಮಗಳಲ್ಲಿ ಜನಸಂದಣಿಯನ್ನು ಹೆಚ್ಚಿಸಲು ಶಿಕ್ಷಕರನ್ನು ಬಸ್ಗಳಲ್ಲಿ ಕರೆದೊಯ್ಯಲಾಗುತ್ತಿತ್ತು. ಆದರೆ ಆ ಕಾರ್ಯಕ್ರಮಗಳು ಕನಿಷ್ಠ ಸರ್ಕಾರಕ್ಕೆ ಸಂಬಂಧಪಟ್ಟವುಗಳಾಗಿದ್ದವು. ಆದರೆ ಈ ಬಾರಿ, ಸಾರ್ವಜನಿಕ ಶಾಲೆಯ ಆವರಣವನ್ನೇ ನಿರ್ದಿಷ್ಟ ಸಿದ್ಧಾಂತವನ್ನು ಹೊಂದಿರುವ ಮತ್ತು ಆಡಳಿತ ಪಕ್ಷದ ಮಾತೃಸಂಸ್ಥೆಯಾಗಿರುವ ಸಂಘಟನೆಯೊಂದಕ್ಕೆ ಬಿಟ್ಟುಕೊಡಲಾಗಿದೆ" ಎಂದು ಅವರು ಆಕ್ಷೇಪಿಸಿದ್ದಾರೆ.

ಆಡಳಿತಾತ್ಮಕ ಮತ್ತು ಶೈಕ್ಷಣಿಕೇತರ ಕೆಲಸಗಳ ಅಬ್ಬರದಲ್ಲಿ ಬೋಧನೆ ಮತ್ತು ಕಲಿಕೆ ಸಂಪೂರ್ಣವಾಗಿ ಮೂಲೆಗುಂಪಾಗುತ್ತಿರುವುದನ್ನು ಪ್ರಸ್ತಾಪಿಸಿದ ಅವರು, ಸರ್ಕಾರದ ಆದ್ಯತೆಗಳ ಬಗ್ಗೆಯೇ ಪ್ರಶ್ನೆ ಎತ್ತಿದ್ದಾರೆ.

"ನಾನು ಪ್ರಸ್ತುತ ಜನಗಣತಿ ಕರ್ತವ್ಯದಲ್ಲಿ ಬ್ಯುಸಿಯಾಗಿದ್ದೇನೆ. ಇದಕ್ಕೂ ಮುನ್ನ ನಾವು SIR ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ನಿರತರಾಗಿದ್ದೆವು. ಈ ಕಾರಣದಿಂದಾಗಿ, ಈ ಶೈಕ್ಷಣಿಕ ವರ್ಷದಲ್ಲಿ ನಾನು ಇದುವರೆಗೆ ಒಂದೇ ಒಂದು ತರಗತಿಯನ್ನೂ ತೆಗೆದುಕೊಂಡಿಲ್ಲ," ಎಂದು ಅವರು ತಮ್ಮ ಅಸಹಾಯಕತೆ ಬಿಚ್ಚಿಟ್ಟಿದ್ದಾರೆ.

"ನನ್ನಂತೆಯೇ ಹಲವರು ಈ ವೃತ್ತಿಯನ್ನು ಇಷ್ಟಪಟ್ಟು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಅವರು ಈಗ ನಮಗೆ ಪಾಠ ಮಾಡಲು ಬಿಡುತ್ತಿಲ್ಲ. ಶಿಕ್ಷಕರು ಮತ್ತು ಶಾಲೆಗಳಿಂದ ಬೋಧನೆಯನ್ನು ಹೊರತುಪಡಿಸಿ ಉಳಿದೆಲ್ಲಾ ಕೆಲಸಗಳನ್ನೂ ಮಾಡಿಸಿಕೊಳ್ಳಲಾಗುತ್ತಿದೆ. ಇವೇ ಸರ್ಕಾರದ ಇಂದಿನ ಆದ್ಯತೆಗಳಾಗಿವೆ ಮತ್ತು ಇದು ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯ ದುಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries