ನಾಸಿಕ್: ನಾಸಿಕ್ನಲ್ಲಿ ಜ್ಯೋತಿಷ್ಯದ ಹೆಸರಿನಲ್ಲಿ 150ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ವಿಡಿಯೋ ಮಾಡಿ ಜೈಲು ಪಾಲಾಗಿರುವ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರನ್ನು ಮಂಗಳವಾರ ಜಾರಿ ನಿರ್ದೇಶನಾಲಯ ಬಂಧಿಸಿದೆ.
ಅತ್ಯಾಚಾರ ಮತ್ತು ವಂಚನೆ ಆರೋಪದ ನಂತರ ಇದೀಗ 70 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅಶೋಕ್ ಖರತ್ ಅವರನ್ನು ಇಂದು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ.
ನ್ಯಾಯಾಂಗ ಬಂಧನದಲ್ಲಿರುವ ಖರತ್ ಅವರನ್ನು ನಾಸಿಕ್ ಜೈಲಿನಿಂದ ಪ್ರೊಡಕ್ಷನ್ ವಾರಂಟ್ ಮೇಲೆ ವಿಶೇಷ ಪಿಎಂಎಲ್ಎ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಯನ್ನು ಇಡಿ ವಶಕ್ಕೆ ನೀಡಿದೆ.
ಕಡ್ಡಾಯ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಇಡಿ ಅವರನ್ನು ಔಪಚಾರಿಕವಾಗಿ ಬಂಧಿಸಿತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬುಧವಾರ ಮತ್ತೆ ವಿಶೇಷ ಪಿಎಂಎಲ್ಎ ನ್ಯಾಯಾಲಯದ ಮುಂದೆ ಖರತ್ ಅವರನ್ನು ಹಾಜರುಪಡಿಸಲಾಗುವುದು. ಆಗ ಇಡಿ ಈ ವಿಷಯದ ಕುರಿತು ಹೆಚ್ಚಿನ ತನಿಖೆಗಾಗಿ ರಿಮಾಂಡ್ ಗೆ ಕೋರಲಿದೆ ಎಂದು ಅವರು ತಿಳಿಸಿದ್ದಾರೆ.

