ಮುಂಬೈ: ಬ್ಯಾಂಕಾಕ್ನಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ 28 ವರ್ಷದ ರೂಪದರ್ಶಿ ಒಬ್ಬರನ್ನು ಇಲ್ಲಿನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಬಂಧಿತ ಮಹಿಳೆಯನ್ನು ಹರ್ಷಾ ಸನ್ನಿ ಎಂದು ಗುರುತಿಸಲಾಗಿದೆ.
ಇವರು 'ಮಿಸಸ್ ಕೇರಳ 2025' ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಯಾಗಿದ್ದರು ಎನ್ನಲಾಗಿದೆ.
ರೂಪದರ್ಶಿ ಸನ್ನಿ ಬಳಿಯಿದ್ದ ಬ್ಯಾಗ್ನಿಂದ 11 ಕೆ.ಜಿ ತೂಕದ ಹೈಡ್ರೋಪೋನಿಕ್ ಗಾಂಜಾವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಗಾಂಜಾಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದ್ದು ಇದರ ಅಂದಾಜು ಮೌಲ್ಯ ₹11.82 ಕೋಟಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಮಧ್ಯರಾತ್ರಿ ಬ್ಯಾಂಕಾಕ್ನಿಂದ ಏರ್ ಇಂಡಿಯಾ ವಿಮಾನದ ಮೂಲಕ ಹರ್ಷ ಸನ್ನಿ ಮುಂಬೈಗೆ ಬಂದಿಳಿದಿದ್ದರು. ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಹರ್ಷ ಸನ್ನಿ ಗಾಂಜಾ ತಂದಿರುವುದು ಪತ್ತೆಯಾಯಿತು. ನಿಷೇಧಿತ ಮಾದಕ ವಸ್ತುವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹರ್ಷ ಸನ್ನಿ ವಿರುದ್ಧ ಮಾದಕ ವಸ್ತು ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.

