HEALTH TIPS

ಒಮಾನ್ ಕರಾವಳಿಯಲ್ಲಿ ಅಮೆರಿಕ ನಡೆಸಿದ ದಾಳಿಯಲ್ಲಿ ಕಾಣೆಯಾಗಿದ್ದ ನಾವಿಕನ ಪತ್ತೆಗಾಗಿ ತಂದೆಯ ಮನವಿ; ಇಸ್ರೇಲ್ ಪರ ಅವರೇ ಬರೆದಿದ್ದ ಹಳೆಯ ಪೋಸ್ಟ್ ಗಳು ವೈರಲ್

ನವದೆಹಲಿ: ಒಮಾನ್ ಕರಾವಳಿಯಲ್ಲಿ ವಾಣಿಜ್ಯ ಹಡಗು 'ಸೆಟ್ಬೆಲ್ಲೊ' ಮೇಲೆ ಅಮೆರಿಕ ನಡೆಸಿದ ದಾಳಿಯ ಮೃತಪಟ್ಟ ಮೂವರು ಭಾರತೀಯ ಸಿಬ್ಬಂದಿ ಪೈಕಿ ಒಬ್ಬರ ತಂದೆಯಾದ ರಾಜೇಶ್ ಶರ್ಮಾ ಅವರು, ಆರಂಭದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದ ಅವರ ಮಗನನ್ನು ಹುಡುಕಿಕೊಡುವಂತೆ ಮಾಡಿದ ಮನವಿ ಹಾಗೂ ಅವರ ಹಳೆಯ ಪೋಸ್ಟ್ ಗಳು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ.

ಪತ್ರಕರ್ತ ಆದಿತ್ಯ ರಾಜ್ ಕೌಲ್ ಅವರು ಜೂನ್ 10ರಂದು ಮಾಡಿದ್ದ ಪೋಸ್ಟ್ ನಲ್ಲಿ, ಒಮಾನ್ ಕರಾವಳಿಯಲ್ಲಿ ವಾಣಿಜ್ಯ ಹಡಗು 'ಸೆಟ್ಬೆಲ್ಲೊ' ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರವು ದಿಲ್ಲಿಯಲ್ಲಿರುವ ಅಮೆರಿಕದ ಹಿರಿಯ ರಾಜತಾಂತ್ರಿಕ ಅಧಿಕಾರಿ ಜೇಸನ್ ಮೀಕ್ಸ್ ಅವರ ಗಮನ ಸೆಳೆದಿದೆ. ಹಡಗಿನಲ್ಲಿದ್ದ 24 ಭಾರತೀಯ ಸಿಬ್ಬಂದಿಗಳ ಪೈಕಿ 21 ಮಂದಿಯನ್ನು ರಕ್ಷಿಸಲಾಗಿದ್ದು, ಮೂವರು ಇನ್ನೂ ಕಾಣೆಯಾಗಿದ್ದಾರೆ ಎಂದು ಅವರು ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದರು. ಭಾರತ ಸರ್ಕಾರವು ಈ ದಾಳಿಯನ್ನು ಈಗಾಗಲೇ ಖಂಡಿಸಿದೆ ಎಂದೂ ಅವರು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಜೇಶ್ ಶರ್ಮಾ, ಕಾಣೆಯಾಗಿರುವ ಮೂವರು ಸಿಬ್ಬಂದಿಯಲ್ಲಿ ತಮ್ಮ ಪುತ್ರ ಆದಿತ್ಯ ಶರ್ಮಾ ಕೂಡ ಒಬ್ಬರು ಎಂದು ಪ್ರತಿಕ್ರಿಯಿಸಿದ್ದರು. 'ಕಾಣೆಯಾಗಿರುವ ಮೂವರು ಸಿಬ್ಬಂದಿಯಲ್ಲಿ ಒಬ್ಬನ ತಂದೆ ನಾನು. ಆದಿತ್ಯ ಶರ್ಮಾ ನನ್ನ ಮಗ. ದಯವಿಟ್ಟು ಅವನನ್ನು ಪತ್ತೆಹಚ್ಚಲು ಸಹಾಯ ಮಾಡಿ' ಎಂದು ಅವರು ಮನವಿ ಮಾಡಿದ್ದಾರೆ.

ಹಡಗಿನಲ್ಲಿ ಹಿರಿಯ ಅಧಿಕಾರಿಯೊಬ್ಬರಿಂದ ಪುತ್ರ ಶೋಷಣೆಗೆ ಒಳಗಾಗಿದ್ದನು ಎಂದು ಆರೋಪಿಸಿರುವ ಅವರು, 'ಎಪ್ರಿಲ್ ನಲ್ಲಿಯೇ ಈ ಹಡಗನ್ನು ತೊರೆಯಲು ಅವನು ಬಯಸಿದ್ದ. ಇದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇವೆ' ಎಂದು ತಿಳಿಸಿದ್ದರು.

► ಮುನ್ನಲೆಗೆ ಬಂದ ಹಳೆಯ ಪೋಸ್ಟ್ ಗಳು

ರಾಜೇಶ್ ಶರ್ಮಾ ಅವರ ಮನವಿ ವೈರಲ್ ಆದ ಬಳಿಕ, 2023ರ ಅಕ್ಟೋಬರ್ ನಲ್ಲಿ ಇಸ್ರೇಲ್-ಹಮಾಸ್ ಯುದ್ಧ ಆರಂಭವಾದ ಸಂದರ್ಭದಲ್ಲಿ ಅವರು ಮಾಡಿದ್ದ ಹಲವು ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಜನರು ಮರುಹಂಚಿಕೊಳ್ಳಲು ಆರಂಭಿಸಿದರು.

2023ರ ಅಕ್ಟೋಬರ್ 11ರಂದು ಪತ್ರಕರ್ತೆ ಸಬಾ ನಖ್ವಿ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದ ರಾಜೇಶ್ ಶರ್ಮಾ, 'ಇಸ್ರೇಲ್ ಈಗ ಇಡೀ ಗಾಝಾವನ್ನು ಜನಾಂಗೀಯವಾಗಿ ಶುದ್ಧೀಕರಿಸಬೇಕು ಮತ್ತು ಅದನ್ನು ಮುಸ್ಲಿಮೇತರ ಪ್ರದೇಶವನ್ನಾಗಿ ಮಾಡಬೇಕು. ಅಲ್ಲಿ ಶಾಂತಿ ಕಾಪಾಡಿಕೊಳ್ಳಲು ಇದು ಏಕೈಕ ಪರಿಹಾರ' ಎಂದು ಬರೆದಿದ್ದರು.

ಅದೇ ಪೋಸ್ಟ್ನಲ್ಲಿ ಅವರು ಇಸ್ರೇಲ್ ನ ಗುಪ್ತಚರ ಸಂಸ್ಥೆ ಮೊಸಾದ್ ಹಾಗೂ ಇಸ್ರೇಲ್ ರಕ್ಷಣಾ ಪಡೆ (IDF)ಗೆ ಧನ್ಯವಾದ ಸಲ್ಲಿಸಿದ್ದರು.

2023ರ ಅಕ್ಟೋಬರ್ 8ರಂದು ಪ್ರಕಟಿಸಿದ್ದ ಮತ್ತೊಂದು ಪೋಸ್ಟ್ನಲ್ಲಿ, 'ಇಸ್ರೇಲ್ ಬಳಿ ಶಸ್ತ್ರಾಸ್ತ್ರಗಳಿವೆ ಹಾಗೂ ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ಬೆಂಬಲವಿದೆ. ಹಮಾಸ್ ಅನ್ನು ಸೋಲಿಸಿ ನಿರ್ಮೂಲನೆ ಮಾಡಲಾಗುವುದು' ಎಂದು ಹೇಳಿದ್ದರು. ಅದೇ ದಿನ ಕವಿ ತಮೀಮ್ ಬರ್ಗೂತಿ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದ ಅವರು, 'ಇಸ್ರೇಲ್ ಹಮಾಸ್ ಮಾತ್ರವಲ್ಲ, ಲೆಬನಾನ್ ನನ್ನೂ ಧೂಳೀಪಟ ಮಾಡಲಿದೆ. ಇರಾನ್ ನ ಭವಿಷ್ಯವೂ ಅಪಾಯದಲ್ಲಿದೆ. ಅದು ಮುಂದಿನ ಲಿಬಿಯಾ ಆಗಲಿದೆ' ಎಂದು ಬರೆದಿದ್ದರು.

ಇನ್ನೊಂದು ಪೋಸ್ಟ್ನಲ್ಲಿ '#IndiaStandWithIsrael' ಹ್ಯಾಷ್ಟ್ಯಾಗ್ ಬಳಸಿ, 'ಇಸ್ರೇಲ್ ಬಲಿಷ್ಠವಾಗಿದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

►ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ

ರಾಜೇಶ್ ಶರ್ಮಾ ಅವರ ಹಳೆಯ ಪೋಸ್ಟ್ಗಳನ್ನು ಉಲ್ಲೇಖಿಸಿ ಹಲವು ಜನರು ಮಾರ್ಮಿಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

'ಸಂದೀಪ್ ಮನುಧಾನೆ' ಎಂಬವರು, 'ಶರ್ಮಾ ಅವರ ಪುತ್ರ ಕಾಣೆಯಾಗಿರುವುದು ದುರಂತ. ಆದರೆ ಅವರು ಹಿಂದೆ ಗಾಝಾದಲ್ಲಿನ ಅಮಾಯಕರ ಸಾವಿಗೆ ಮತ್ತು ಯುದ್ಧಕ್ಕೆ ಬೆಂಬಲ ನೀಡಿದ್ದರು. ದ್ವೇಷವು ದ್ವೇಷವನ್ನೇ ಹುಟ್ಟುಹಾಕುತ್ತದೆ. ಹಿಂಸೆಯು ಹಿಂಸೆಯನ್ನೇ ಹುಟ್ಟುಹಾಕುತ್ತದೆ' ಎಂದು ಬರೆದಿದ್ದಾರೆ.

'ರೌದ್ರ' ಎಂಬವರು, 'ಕರ್ಮ ಪ್ರತೀಕಾರ ತೀರಿಸಿಕೊಳ್ಳಲು ವಿಚಿತ್ರ ಮಾರ್ಗವನ್ನು ಹುಡುಕುತ್ತದೆ. ನಿಮ್ಮ ಹಳೆಯ ಪೋಸ್ಟ್ ಗಳನ್ನು ನೋಡಿದರೆ ನೀವು ಯುದ್ಧ ಮತ್ತು ಹಿಂಸೆಗೆ ಬೆಂಬಲ ನೀಡುತ್ತಿದ್ದಿರಿ. ಅಂತಹ ಹಿಂಸೆಯ ಪರಿಣಾಮ ನಿಮ್ಮ ಕುಟುಂಬವನ್ನೂ ತಟ್ಟಬಹುದು ಎಂದು ಬಹುಶಃ ಯೋಚಿಸಿರಲಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.

'ಕೇಟೊ8' ಎಂಬವರು, 'ತಂದೆಯಾಗಿ ಅವರ ನೋವಿನ ಬಗ್ಗೆ ಸಹಾನುಭೂತಿ ಇದೆ. ಆದರೆ ಅವರ ಹಿಂದಿನ ಹೇಳಿಕೆಗಳು ಅತ್ಯಂತ ಆಕ್ಷೇಪಾರ್ಹವಾಗಿದ್ದವು. ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು' ಎಂದು ಹೇಳಿದ್ದಾರೆ.

ಈ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ. ಕೆಲವರು ಮೃತಪಟ್ಟಿರುವ ನಾವಿಕ ಮತ್ತು ಅವರ ಕುಟುಂಬದ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದು, ರಾಜಕೀಯ ಅಥವಾ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಈ ಸಂದರ್ಭದಲ್ಲಿ ಮುಂದಿಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನೂ ಕೆಲವರು, ರಾಜೇಶ್ ಶರ್ಮಾ ಅವರ ಹಿಂದಿನ ಪೋಸ್ಟ್ಗಳು ಯುದ್ಧ, ಹಿಂಸೆ ಹಾಗೂ ಜನಾಂಗೀಯ ದ್ವೇಷವನ್ನು ಬೆಂಬಲಿಸುವಂತಿದ್ದವು ಎಂದು, ಅವರ ಇಂದಿನ ಮನವಿಯ ಹಿನ್ನೆಲೆಯಲ್ಲಿ ಆ ಹೇಳಿಕೆಗಳನ್ನು ಪ್ರಶ್ನಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries