ನವದೆಹಲಿ: ಟಿಎಂಸಿಯ ಭಿನ್ನಮತೀಯ ಸಂಸದರು, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರನ್ನು ಸೋಮವಾರ ಭೇಟಿ ಮಾಡಿ, ಬಂಡಾಯ ಸಂಸದರ ಗುಂಪನ್ನು 'ನೈಜ ಟಿಎಂಸಿ' ಎಂದು ಗುರುತಿಸಿ ಮಾನ್ಯತೆ ನೀಡಬೇಕು ಎಂದು ಮನವಿ ಮಾಡಲಿದ್ದಾರೆ.
'ಜೂನ್ 8ರಿಂದಲೇ ಸಹಿ ಸಂಗ್ರಹಿಸುವ ಪ್ರಕ್ರಿಯೆ ಆರಂಭಿಸಲಾಗಿದೆ.
ಈವರೆಗೆ 19 ಸಂಸದರು ಸಹಿ ಹಾಕಿದ್ದಾರೆ. ನಮ್ಮ ಬಣಕ್ಕೆ ನೈಜ ಟಿಎಂಸಿ ಎಂಬ ಮಾನ್ಯತೆ ನೀಡುವುದಕ್ಕೆ ಸಂಬಂಧಿಸಿದಂತೆ ಈಗಾಗ ಸ್ಪೀಕರ್ ಅವರಿಗೆ ಪತ್ರ ಬರೆದಿದ್ದೇವೆ' ಎಂದು ಕೂಚ್ ಬಿಹಾರ್ ಕ್ಷೇತ್ರದ ಸಂಸದ ಜಗದೀಶ್ ಚಂದ್ರ ಬರ್ಮಾ ಬಾಸುನಿಯಾ ಅವರು ತಿಳಿಸಿದ್ದಾರೆ.
ಅಭಿಷೇಕ್ ಬ್ಯಾನರ್ಜಿ ಕುರಿತಂತೆ ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಬಾಸುನಿಯಾ, 'ನಾನು ಕಲ್ಯಾಣ್ ಅವರ ಹೇಳಿಕೆಯನ್ನು ಬೆಂಬಲಿಸುತ್ತೇನೆ. ಅವರು ಸರಿಯಾಗಿಯೇ ಹೇಳಿದ್ದಾರೆ' ಎಂದು ಹೇಳಿದ್ದಾರೆ.
ಬಂಡಾಯ ಸಂಸದರದ್ದು ಎನ್ನಲಾದ ಪತ್ರವು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪತ್ರದಲ್ಲಿ ಕಾಕೋಲಿ ಘೋಷ್ ದಸ್ತೀದಾರ್, ಸತಾಬ್ದಿ ರಾಯ್, ಶರ್ಮಿಳಾ ಸರ್ಕಾರ್, ಬಾಸುನಿಯಾ ಮತ್ತು ಆಸಿತ್ ಮಾಲ್ ಅವರ ಹೆಸರುಗಳಿವೆ.
ಸಂಸದೆ ಕಾಕೋಲಿ ಘೋಷ್ ನೇತೃತ್ವದಲ್ಲಿ ಬಂಡಾಯ ಎದ್ದಿರುವ ಸಂಸದರ ಗುಂಪು ಈಗಾಗಲೇ ಎನ್‌ಡಿಎಗೆ ಬೆಂಬಲವನ್ನು ಘೋಷಿಸಿದೆ.

