ನವದೆಹಲಿ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮಗಳನ್ನು ಉಲ್ಲಂಘಿಸಿ ದಾರಿ ತಪ್ಪಿಸುವ ಬ್ರಾಂಡ್ ಹೆಸರು, ವ್ಯಾಪಾರ ಹೆಸರು ಹಾಗೂ ಉತ್ಪನ್ನಗಳ ಬಗ್ಗೆ ತಪ್ಪು ಪ್ರತಿಪಾದನೆ ಮಾಡಿದ ಆರೋಪದಡಿ 14 ಆಹಾರ ಉದ್ಯಮ ಸಂಸ್ಥೆಗಳಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ರವಿವಾರ ನೋಟಿಸ್ ಜಾರಿ ಮಾಡಿದೆ.
ನೋಟಿಸ್ ಜಾರಿಯಾಗಿರುವ ಸಂಸ್ಥೆಗಳಲ್ಲಿ ಇಮಾಮಿ ಹೆಲ್ತಿ ಆಯಂಡ್ ಟೇಸ್ಟಿ, ಹೆಲ್ತ್ ಏಡ್, ಟ್ರೂವಿ, ದಿ ಹೆಲಿ ಫ್ಯಾಕ್ಟರಿ, ಹೆಲ್ತಿ ಮಾಸ್ಟರ್, ಹೆಲ್ತಿ ಚಾಯ್ಸ್, ಪ್ಲಾನ್ ಬಿ, ನ್ಯೂಹರ್ಬ್, ಆರ್ಗಾನಿಕ್ ವಿಸ್ಡಮ್, ಶೈನ್ ಆರ್ಗಾನಿಕ್, ಟು ಬ್ರದರ್ಸ್ ಆರ್ಗಾನಿಕ್ ಫಾರ್ಮ್ಸ್, ವರ್ಲ್ಡ್ ಆಫ್ ಆರ್ಗಾನಿಕ್, ಸ್ಟೋರಿಯಾ ಹಾಗೂ ಅಯೋಟಾ ವಾಟರ್ ಸೇರಿವೆ.
ಉತ್ಪನ್ನಗಳ ಹೆಸರು ಹಾಗೂ ಪ್ರಚಾರದಲ್ಲಿ 'ಆರ್ಗಾನಿಕ್' ಮತ್ತು 'ಹೆಲ್ತಿ' ಮುಂತಾದ ಪದಗಳನ್ನು ಬಳಸಿರುವುದಕ್ಕಾಗಿ ಈ ನೋಟಿಸ್ ನೀಡಲಾಗಿದೆ. ಈ ಉತ್ಪನ್ನಗಳಲ್ಲಿ ಬ್ರೆಡ್, ಅವಲಕ್ಕಿ, ಜೀವಸತ್ವ ಪೂರಕಗಳು, ಪಿಜ್ಜಾ ಬೇಸ್ ಗಳು, ಚಿಪ್ಸ್, ಎಣ್ಣೆ, ತುಪ್ಪ ಹಾಗೂ ಕುಡಿಯುವ ನೀರು ಸೇರಿವೆ.
ತನ್ನ ನೋಟಿಸ್‌ನಲ್ಲಿ FSSAI ''ಗ್ರಾಹಕರನ್ನು ವಂಚಿಸುವುದನ್ನು ತಡೆಯಲು ಲೇಬಲಿಂಗ್ ಮತ್ತು ಪ್ರದರ್ಶನಕ್ಕೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು'' ಎಂದು ಆಹಾರ ಉದ್ಯಮ ಸಂಸ್ಥೆಗಳಿಗೆ ನಿರ್ದೇಶಿಸಿದೆ.

