ಮುಜಾಫರಾಬಾದ್/ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದ್ದು ಗುರುವಾರ ನಡೆದ ಪ್ರತಿಭಟನೆ ವೇಳೆ ಪಾಕಿಸ್ತಾನ ಸೇನೆ ಗುಂಡಿನ ದಾಳಿ ನಡೆಸಿದ್ದು 16 ಜನರು ಮೃತಪಟ್ಟಿದ್ದಾರೆ.
ಕೇವಲ ಎರಡು ದಿನಗಳ ಹಿಂದಷ್ಟೇ ನಡೆದಿದ್ದ ಹಿಂಸಾಚಾರದಲ್ಲಿ 30 ಮಂದಿ ಮೃತಪಟ್ಟಿದ್ದರು.
ಮುಜಾಫರಾಬಾದ್ನ ಹಿಂದ್ಗಾ ಮೈದಾನದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಪಾಕಿಸ್ತಾನ ಸೇನೆ ಗುಂಡಿನ ದಾಳಿ ನಡೆಸಿದೆ.
ಗೋಧಿ ಹಿಟ್ಟು, ಅಕ್ಕಿ, ವಿದ್ಯುತ್ ಸೇರಿದಂತೆ ಮೂಲಭೂತ ಹಕ್ಕುಗಳಿಗಾಗಿ ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾ ನಿರತರ ಮೇಲೆ ಪಾಕ್ ಸೇನೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದರಿಂದ ಇಡೀ ಪ್ರದೇಶ ರಣರಂಗವಾಗಿ ಮಾರ್ಪಟ್ಟಿತು ಎಂದು ವರದಿಗಳು ತಿಳಿಸಿವೆ.
ಪಾಕ್ ಆಕ್ರಮಣದ ವಿರುದ್ಧ ಆಕ್ರೋಶ...
ಪಾಕಿಸ್ತಾನದ ನಿರಂತರ ಆಕ್ರಮಣ ಮತ್ತು ತಾರತಮ್ಯ ನೀತಿಗಳ ವಿರುದ್ಧ ಪ್ರತಿಭಟಿಸಲು ರಾವಲ್ ಕೋಟ್ನಲ್ಲಿ ಸುಮಾರು 70 ಸಾವಿರ ಜನ ಜಮಾಯಿಸಿದ್ದರು. ಮಂಗಳವಾರವಷ್ಟೇ ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ನಡೆದಿದ್ದ ಘರ್ಷಣೆಯಲ್ಲಿ 30 ಮಂದಿ ಮೃತಪಟ್ಟು, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಪಾಕ್ ಸೇನೆಯ ದಾಳಿ ಖಂಡಿಸಿ ಹಾಗೂ ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಪಿಒಕೆ ಜನರು ಇಂದು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸೇನೆ ದಾಳಿ ಮಾಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪಿಒಕೆ ಪ್ರಾಂತ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನಜೀವನ ದುಸ್ತರವಾಗಿದೆ. ತಮಗೆ ಪಾಕಿಸ್ತಾನ ಸರ್ಕಾರದಿಂದ ಮುಕ್ತಿ ಬೇಕು ಮತ್ತು ಕನಿಷ್ಠ ಸೌಕರ್ಯಗಳು, ಅಗ್ಗದ ದರದಲ್ಲಿ ಆಹಾರ ಧಾನ್ಯ, ವಿದ್ಯುತ್ ಒದಗಿಸಬೇಕು ಎಂದು ಆಗ್ರಹಿಸಿ ಕಳೆದ ಕೆಲವು ದಿನಗಳಿಂದ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.

