ನವದೆಹಲಿ: ಜೂನ್ 2ನೇ ವಾರ ಮುಗಿದರೂ ಇನ್ನೂ ಭಾರತದಲ್ಲಿ ಮುಂಗಾರು ಮಳೆಯ ಸಂಪೂರ್ಣವಾಗಿ ಪ್ರವೇಶಿಸಿಲ್ಲ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈವರೆಗೂ ವಾಡಿಕೆ ಮಳೆಗಿಂತ ಶೇ 28ರಷ್ಟು ಮಳೆ ಕೊರತೆ ಎದುರಾಗಿದೆ.
ನೈರುತ್ಯ ಮುಂಗಾರು ಪ್ರವೇಶ ನಿಧಾನವಾಗಿರುವ ಕಾರಣದಿಂದ ಹಲವು ರಾಜ್ಯಗಳಲ್ಲಿ ಕೃಷಿ ಚಟುವಟಿಕೆಗಳಿಗೂ ಹಿನ್ನಡೆಯಾಗಿದೆ.
ಅದರಲ್ಲೂ ಪೂರ್ವ ಹಾಗೂ ಮಧ್ಯ ಭಾರತ ಹಲವು ಭಾಗಗಳಲ್ಲಿ ಮುಂಗಾರು ಕೊರತೆ ಆತಂಕಕ್ಕೆ ದಾರಿ ಮಾಡಿಕೊಟ್ಟಿದೆ.
ಭಾರತೀಯ ಹವಾಮಾನ ಇಲಾಖೆಯ( ಐಎಂಡಿ) ಪ್ರಕಾರ, ದೇಶದಾದ್ಯಂತ ಜೂನ್ 4ರಿಂದ 14ರವರೆಗೆ ಸರಾಸರಿ 34.3 ಮಿ.ಮೀ ನಷ್ಟು ಮಳೆಯಾಗಿದೆ. ಈ ಅವಧಿಯಲ್ಲಿ ಸರಾಸರಿ 47.4 ಮಿ.ಮೀನಷ್ಟು ಮಳೆಯಾಗಬೇಕಿತ್ತು. ಇದರಿಂದ ಕೊರತೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮೂರನೇ ವಾರದಲ್ಲಿ ಸರಿದೂಗುವ ವಿಶ್ವಾಸವನ್ನು ಇಟ್ಟುಕೊಳ್ಳಲಾಗಿದೆ.
ಜಿಲ್ಲಾವಾರು ಮಳೆ ಪ್ರಮಾಣದ ನಕ್ಷೆಯನ್ನು ಗಮನಿಸಿದರೆ ಭಾರತದ ಕೇಂದ್ರ, ಪೂರ್ವದ ಜತೆಗೆ ಪರ್ಯಾಯ ದ್ವೀಪದ ಕೆಲವು ಭಾಗಗಳಲ್ಲಿ ಮಳೆಯ ಕೊರತೆಯಾಗಿದೆ. ಆದರೆ, ಕೆಲವು ಭಾಗದಲ್ಲಿ ಹೆಚ್ಚಿನ ಮಳೆಯಾಗಿರುವ ಮಾಹಿತಿಯಿದ್ದರೂ ಒಟ್ಟಾರೆ ಪ್ರಮಾಣದಲ್ಲಿ ಕೊರತೆಯುಂಟಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ನೀಡಿರುವ ವಾರದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ದಕ್ಷಿಣ ಭಾರತದ ಕೇರಳಂ ಮೂಲಕ ಮೊದಲ ವಾರದಲ್ಲಿಯೇ ಮುಂಗಾರು ಪ್ರವೇಶಿಸಿದರೂ ಆನಂತರ ನಿಧಾನವಾಗಿದೆ. ಎಲ್ ನಿನೋ ಸಹಿತ ಕೆಲವು ಮಾರುತಗಳ ಕಾರಣದಿಂದಲೂ ಮುಂಗಾರಿನಲ್ಲಿ ಹಿನ್ನಡೆಯಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಬಂಗಾಳಕೊಲ್ಲಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಹವಾಮಾನ ವ್ಯವಸ್ಥೆಗಳು ಒಳನಾಡಿಗೆ ಚಲಿಸಲು ಆಗದೇ ಸಮಸ್ಯೆಗೆ ಕಾರಣವಾಗಿವೆ. ಬಲವಾದ ಚಲನೆಯ ಕಾರ್ಯವಿಧಾನವಿಲ್ಲದೆ, ಮಳೆ-ಧಾರಣ ವ್ಯವಸ್ಥೆಗಳು ದುರ್ಬಲವಾಗಿವೆ. ಇದು ದೇಶದೊಳಗೆ ತೇವಾಂಶವನ್ನು ಆಳವಾಗಿ ಹರಡುವ ಬದಲು ಸೀಮಿತ ಪ್ರದೇಶಗಳಲ್ಲಿ ಉಳಿದು ಮಳೆ ಕೊರತೆಗೆ ದಾರಿ ಮಾಡಿಕೊಟ್ಟಿವೆ.
ಜೂನ್ 20ರ ನಂತರ ನೈರುತ್ಯ ಮುಂಗಾರು ಚುರುಕುಗೊಳ್ಳುವ ನಿರೀಕ್ಷೆಯನ್ನು ಹವಾಮಾನ ತಜ್ಞರು ಇಟ್ಟುಕೊಂಡಿದ್ದಾರೆ. ಮೂರನೇ ವಾರದ ನಂತರ ಮುಂಗಾರು ಚುರುಕುಗೊಂಡರೂ ಜುಲೈನಲ್ಲಿ ಕೃಷಿ ಚಟುವಟಿಕೆಗಳು ಸಹಜ ಸ್ಥಿತಿಗೆ ಬರಬಹುದು ಎನ್ನುವ ನಿರೀಕ್ಷೆಯಿದೆ.

