ನವದೆಹಲಿ: 1997ರಲ್ಲಿ ₹500 ಬೆಲೆಬಾಳುವ ಗಡಿಯಾರದ ವಿಚಾರಕ್ಕೆ ನೆರೆಹೊರೆಯವರ ನಡುವೆ ನಡೆದ ಜಗಳದಿಂದ ಉದ್ಭವಿಸಿದ ಮೂರು ದಶಕಗಳ ಕ್ರಿಮಿನಲ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಇತ್ಯರ್ಥಪಡಿಸಿದೆ.
ನ್ಯಾಯಮೂರ್ತಿಗಳಾದ ಉಜ್ವಲ್ ಭುಯಾನ್ ಮತ್ತು ಅರುಣ್ ಪಲ್ಲಿ ಅವರಿದ್ದ ಪೀಠವು, ಕೊಲೆಯಲ್ಲದ ಅಪರಾಧಿಕ ನರಹತ್ಯೆಗೆ ಶಿಕ್ಷೆಯನ್ನು ವಿಧಿಸುವ ಭಾರತೀಯ ದಂಡ ಸಂಹಿತೆಯೆ (ಐಪಿಸಿ) ಸೆಕ್ಷನ್ 304ರ ಅಡಿಯಲ್ಲಿ ಮೂವರು ಆರೋಪಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಮುಕ್ತಾಯಗೊಳಿಸಿದೆ.
ಮೇಲ್ಮನವಿ ಬಾಕಿ ಇರುವಾಗಲೇ ಮೂವರು ಆರೋಪಿಗಳಲ್ಲಿ ಇಬ್ಬರು ಮೃತಪಟ್ಟಿದ್ದು, ಉಳಿದಿರುವ ಒಬ್ಬರ ವಯಸ್ಸು 60 ದಾಟಿದೆ ಎಂದು ನ್ಯಾಯಪೀಠ ಗಮನಿಸಿದೆ.
ಏನಿದು ಪ್ರಕರಣ?
ಪದಮ್ ಸಿಂಗ್ ಅವರು ತಮ್ಮ ಪಕ್ಕದ ಮನೆಯವರಾದ ಮನುವಾ ಅವರಿಗೆ ₹500ಕ್ಕೆ ಒಂದು ಗಡಿಯಾರವನ್ನು ಮಾರಾಟ ಮಾಡಿದ್ದರು. ಆ ಗಡಿಯಾರವು ಮನುವಾ ಅವರಿಗೆ ಇಷ್ಟವಾಗದ ಕಾರಣ ಹಿಂತಿರುಗಿಸಲು ಯತ್ನಿಸಿದಾಗ ಜಗಳ ಆರಂಭವಾಗಿ, ತೀವ್ರ ಸ್ವರೂಪ ಪಡೆದುಕೊಂಡಿತ್ತು.
ರಾಮು ಮತ್ತು ಮಥು, ಮನುವಾ ಜೊತೆ ಸೇರಿ ಕಾಲುವೆಯ ದಂಡೆಯ ಮೇಲೆ ನಿಂತಿದ್ದ ಸಿಂಗ್ ಮೇಲೆ ಹಲ್ಲೆ ನಡೆಸಿದ್ದರು. ಮೂವರು ಅಪರಾಧಿಗಳು ಪದಮ್ ಸಿಂಗ್ ಅವರನ್ನು ಕಾಲುವೆಗೆ ತಳ್ಳಿದ್ದರು.
ಈಗ ಬದುಕಿರುವ ಅರ್ಜಿದಾರ ಮಥು, ಸಿಂಗ್ ಅವರ ತಲೆಗೆ ಕಲ್ಲಿನಿಂದ ಹೊಡೆದಿದ್ದರಿಂದ ಅವರು ಕಾಲುವೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು ಎಂದು ಆರೋಪಿಸಲಾಗಿತ್ತು. ಸಿಂಗ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.
2002ರಲ್ಲಿ ಡೆಹ್ರಾಡೂನ್ ನ್ಯಾಯಾಲಯವು ಮೂವರು ಆರೋಪಿಗಳಿಗೆ ಹತ್ಯೆ ಮಾಡುವ ಉದ್ದೇಶವಿರಲಿಲ್ಲ ಎಂಬುದನ್ನು ಮನಗಂಡು ಐದು ವರ್ಷಗಳ ಕಠಿಣ ಶಿಕ್ಷೆ ವಿಧಿಸಿತ್ತು.
2012ರಲ್ಲಿ ಉತ್ತರಾಖಂಡ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು. ಅದೇ ವರ್ಷ ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.
ಈ ಘಟನೆ 1997ರ ಫೆಬ್ರುವರಿ 12ರಂದು ನಡೆದಿದ್ದು, ಮಥು ಅವರಿಗೆ ಈಗ 60 ವರ್ಷ ದಾಟಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 'ದಾಖಲೆಗಳ ಪ್ರಕಾರ, ಅಂದು ಅರ್ಜಿದಾರನಿಗೆ 33 ವರ್ಷ ವಯಸ್ಸಾಗಿತ್ತು. ಇಂದು ನಾವು 2026ರಲ್ಲಿದ್ದೇವೆ, ಅಂದಿನಿಂದ ಸುಮಾರು ಮೂರು ದಶಕಗಳು ಕಳೆದಿವೆ. ಅರ್ಜಿದಾರನಿಗೆ ಈಗ 60 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದೆ. ಮೃತ ಮತ್ತು ಆರೋಪಿಗಳ ನಡುವಿನ ಜಗಳದ ಮೂಲವನ್ನು ನಾವು ಗಮನಿಸಿದ್ದೇವೆ' ಎಂದು ನ್ಯಾಯಪೀಠ ತಿಳಿಸಿದೆ.
'ಮೃತನ ಮುಖದ ಸುತ್ತ ಅಥವಾ ತಲೆ ಬುರುಡೆಯ ಮೇಲೆ ಕಂಡುಬಂದ ಗಾಯದ ಗುರುತುಗಳು, ಕಲ್ಲಿನ ಹಾಸು ಹೊಂದಿದ್ದ ಒಣ ಕಾಲುವೆಗೆ ಬಿದ್ದಿದ್ದರಿಂದ ಉಂಟಾಗಿವೆ ಎಂಬುದು ಸ್ಪಷ್ಟವಾಗಿದೆ' ಎಂದೂ ಪೀಠ ಹೇಳಿದೆ.

