ಬದಿಯಡ್ಕ: ವ್ಯಕ್ತಿತ್ವ ರೂಪು ಮತ್ತು ಸಾಮುದಾಯಿಕ ಚಿಂತನೆಗಳ ಪೂರಕ ಬೆಳವಣಿಗೆಗೆ ಸ್ಕೌಟಿಂಗ್ ಅತ್ಯಂತ ಪರಿಣಾಮಕಾರಿ. ಆಧುನಿಕ ಸಮಾಜದ ಪಿಡುಗುಗಳಿಂದ ಮುಕ್ತರಾಗಿ ಸುಂದರ ಸಮಾಜ ಮುನ್ನಡೆಯಲು ವ್ಯಕ್ತಿ, ಸಮಾಜ ಮತ್ತು ರಾಷ್ಟ್ರ ಏಕಸೂತ್ರದಡಿ ಕಟಿಬದ್ಧವಾಗಬೇಕು. ಈ ನಿಟ್ಟಿನ ಸಮಗ್ರ ಚಿಂತನೆಗಳು ಸ್ಕೌಟಿಂಗ್ ಯೋಜನೆಯ ಆಶಯ ಎಂದು ಭಾರತ ಸ್ಕೌಟ್-ಗೈಡ್ಸ್ ನ ಕರ್ನಾಟಕ ರಾಜ್ಯಾಯುಕ್ತ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ತಿಳಿಸಿದರು.
ಅವರು ಗುರುವಾರ ನೀರ್ಚಾಲು ಸಮೀಪದ ಬನವಾಸಿಗೆ ನೀಡಿದ ವಿಶೇಷ ಭೇಟಿಯ ಸಂದರ್ಭ ಸಾರ್ವಜನಿಕರೊಂದಿಗೆ ನಡೆಸಿದ 'ಬನವಾಸಿಯಲ್ಲೊಂದು ಸಿಂಧ್ಯಾ ಸಂಜೆ' ಸಂವಾದದಲ್ಲಿ ಮಾತನಾಡಿದರು.
ಭ್ರಷ್ಟಾಚಾರಕ್ಕಿಂತಲೂ ದೊಡ್ಡ ಪಿಡುಗು ಇಂದು ಮಾದಕ ವಸ್ತುಗಳ ಬಳಕೆಯಾಗಿ ಮಾರ್ಪಟ್ಟಿದೆ. ಮಾಜಿ ಸೈನಿಕರು, ನಿವೃತ್ತ ಪೋಲೀಸರು, ನಿವೃತ್ತ ಶಿಕ್ಷಕರು, ಸಾಮಾಜಿಕ ಕಾರ್ಯಕರ್ತರೆಲ್ಲ ಜೊತೆಯಾಗಿ ಗ್ರಾಮ-ಗ್ರಾಮಗಳಲ್ಲಿ ಈ ಪಿಡುಗಿನ ವಿರುದ್ಧ ನಿರ್ಮೂಲನೆಗಾಗಿ ಕಾರ್ಯಪ್ರವೃತ್ತರಾಗಬೇಕು. ಸರ್ಕಾರಗಳಿಂದ ಮಾತ್ರ ಅದು ಸಾಧ್ಯವಾಗದು ಎಂದವರು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಇಲ್ಲಿಯ ಕನ್ನಡ ಭಾಷಿಗರ ಮೇಲಿನ ಸವಾಲುಗಳ ಬಗೆಗೆ ಕರ್ನಾಟಕ ಸರ್ಕಾರದೊಂದಿಗೆ ಚರ್ಚಿಸಿ ಕೇರಳ ಮಲೆಯಾಳಂ ಭಾಷಾ ಮಸೂದೆ ಗಡಿನಾಡ ಕನ್ನಡಿಗರ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತಹ ಕ್ರಮಕ್ಕೆ ಚರ್ಚಿಸಲಾಗುವುದು ಎಂದವರು ತಿಳಿಸಿದರು.
ಹೊ.ವೆ.ಶೇಷಾದ್ರಿಯಂತವರಿಂದ ಪ್ರೇರಣೆ ಪಡೆದು ಸಕ್ರಿಯ ರಾಜಕಾರಣದಿಂದ ದೂರವಿರಲು ನಿರ್ಧರಿಸಿ ಬಳಿಕದ ತಮ್ಮ ಸ್ಕೌಟಿಂಗ್ ಯಾತ್ರೆಯ ಬಗ್ಗೆ ಸಮಗ್ರವಾಗಿ ಅವರು ಸಂವಾದದಲ್ಲಿ ವಿವರಿಸಿದರು. ನಿರಾಡಂಬರ, ನಿಗರ್ವ, ಸರಳ ಬದುಕು, ಸ್ವಾವಲಂಬನೆಯ ದಿನಚರಿಗಳ ಬಗ್ಗೆ ಮಾತನಾಡಿದ ಅವರು, ಪ್ರತಿಯೊಬ್ಬರೂ ನಿತ್ಯ ಕಲಿಯುವ ಮನೋಭಾವದೊಂದಿಗೆ ಸಮಾಜಮುಖಿ ಚಿಂತನೆಗಳೊಂದಿಗೆ ಸಾಗುವುದೇ ಬದುಕಿನ ಮೌಲ್ಯವಾಗಿದೆ. ನಮ್ಮ ನಿರ್ಧಾರಗಳು ಕಲ್ಪನೆಗಳಷ್ಟೇ ಆಗಿದ್ದು, ನಡೆಯುವ ಕ್ರಿಯೆಗಳ ಹಿಂದೆ ಶಕ್ತಿಯೊಂದು ನಿರ್ಭಾವುಕವಾಗಿ ನಿರ್ಧರಿಸುತ್ತಾ ನಮ್ಮನ್ನು ಮುನ್ನಡೆಸುತ್ತದೆ ಎಂದು ತಮ್ಮ ಅನುಭವಗಳನ್ನು ಅವರು ಹಂಚಿಕೊಂಡರು. ಮಲ್ಲಮೂಲೆ ಕುಟುಂಬ, ಬನವಾಸಿ ಹಾಗೂ ಕಸಾಪ ಕೇರಳ ಗಡಿನಾಡ ಘಟಕದ ವತಿಯಿಂದ ಸಿಂಧ್ಯಾ ಅವರನ್ನು ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಸ್ಕೌಟಿಂಗ್ ಸಂಯೋಜಕ ಭರತ್ ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬನವಾಸಿಯ ಡಾ.ರತ್ನಾಕರ ಮಲ್ಲಮೂಲೆ ಸ್ವಾಗತಿಸಿ, ವಂದಿಸಿದರು. ಕೃತಿ ಮಲ್ಲಮೂಲೆ ಪ್ರಾರ್ಥನೆಗೈದರು.ಕರ್ನಾಟಕ ರಸ್ತೆ ಸಾರಿಗೆ ವಿಭಾಗದ ನಿವೃತ್ತ ಅಧಿಕಾರಿಗಳು, ಸ್ಥಳೀಯ ನಿವಾಸಿಗಳು, ನಿವೃತ್ತ ಪ್ರಾಧ್ಯಾಪಕರು, ಶಿಕ್ಷಕರು ಪಾಲ್ಗೊಂಡಿದ್ದರು.

.jpg)
.jpg)
