ಲುಸೆರ್ನ್: ಸ್ವಿಟ್ಜರ್ ಲ್ಯಾಂಡ್ ನಲ್ಲಿ ನಡೆದ ಅಮೆರಿಕ-ಇರಾನ್ ಮಾತುಕತೆಯ ವೇಳೆ ಸೆರೆಹಿಡಿಯಲಾದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಅದರಲ್ಲಿ ಖತರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್‌ರಹಮಾನ್ ಅಲ್ ಥಾನಿ ಅವರು ಪಾಕಿಸ್ತಾನ ಪ್ರಧಾನಿ ಶೆಹಬಾಝ್ ಷರೀಫ್ ಅವರನ್ನು ಅಭಿನಂದಿಸುವ ದೃಶ್ಯ ಕಂಡುಬಂದಿದೆ.
ಇದೇ ವೇಳೆ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರೊಂದಿಗೆ ಯಾವುದೇ ಸಂವಾದ ನಡೆಸದಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಲುಸೆರ್ನ್ ಸರೋವರದ ಮೇಲಿರುವ ಬರ್ಗೆನ್‌ಸ್ಟಾಕ್ ರೆಸಾರ್ಟ್ ನಲ್ಲಿ ರವಿವಾರ ನಡೆದ ಅಮೆರಿಕ, ಇರಾನ್, ಪಾಕಿಸ್ತಾನ ಹಾಗೂ ಖತರ್ ಪ್ರತಿನಿಧಿಗಳ ಸಭೆಯ ವೇಳೆ ಈ ದೃಶ್ಯಗಳು ದಾಖಲಾಗಿವೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಅಂತ್ಯ ಹಾಡುವ ಉದ್ದೇಶದಿಂದ ನಡೆದ ಈ ಸಭೆಯಲ್ಲಿ ರಾಜತಾಂತ್ರಿಕರು ಮಹತ್ವದ ಚರ್ಚೆ ನಡೆಸಿದ್ದರು.
ವೈರಲ್ ಆಗಿರುವ ವೀಡಿಯೊವನ್ನು ಉಲ್ಲೇಖಿಸಿ, ಕೆಲ ಸಾಮಾಜಿಕ ಮಾಧ್ಯಮ ಬಳಕೆದಾರರು ಖತರ್ ಪ್ರಧಾನಿ ಉದ್ದೇಶಪೂರ್ವಕವಾಗಿ ಜೆಡಿ ವ್ಯಾನ್ಸ್ ಅವರನ್ನು ಕಡೆಗಣಿಸಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿ ವ್ಯಾನ್ಸ್ ಅವರನ್ನು 'ಅವಮಾನಿಸಲಾಗಿದೆ' ಎಂಬ ವಾದಗಳೂ ಕೇಳಿ ಬಂದಿದೆ.
ಪ್ರಾದೇಶಿಕ ಉದ್ವಿಗ್ನತೆ ಹಲವು ದಿನಗಳಿಂದ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಟೆಹ್ರಾನ್ ನೊಂದಿಗೆ ರಾಜತಾಂತ್ರಿಕ ಸಂಪರ್ಕವನ್ನು ಮುಂದುವರಿಸಲು ಟ್ರಂಪ್ ಆಡಳಿತ ಪ್ರಯತ್ನಿಸುತ್ತಿರುವ ಸಂದರ್ಭದಲ್ಲೇ ಈ ಸಭೆ ನಡೆದಿತ್ತು. ಸಭೆಯಲ್ಲಿ ಮಾತನಾಡಿದ ಜೆಡಿ ವ್ಯಾನ್ಸ್, ಇರಾನ್ ಪ್ರಸ್ತಾವಿತ ಒಪ್ಪಂದದ ಷರತ್ತುಗಳನ್ನು ಪಾಲಿಸಿದರೆ, ಆ ದೇಶದೊಂದಿಗೆ ಸಂಬಂಧ ಸುಧಾರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿದ್ಧರಿದ್ದಾರೆ ಎಂದು ಹೇಳಿದರು.
ಅಮೆರಿಕ-ಇರಾನ್ ಮಾತುಕತೆಯಲ್ಲಿ ಮಧ್ಯವರ್ತಿಯಾಗಿರುವ ಖತರ್, ಒಪ್ಪಂದದ ಸಾಧ್ಯತೆ ಕುರಿತು ಆಶಾವಾದ ವ್ಯಕ್ತಪಡಿಸಿದ್ದು, ಇದು ಶಾಶ್ವತ ಪರಿಹಾರದತ್ತ ಮಹತ್ವದ ಹೆಜ್ಜೆಯಾಗಬಹುದು ಎಂದು ಹೇಳಿದೆ.
ವರದಿಗಳ ಪ್ರಕಾರ, ಎಲ್ಲಾ ಪಕ್ಷಗಳ ನಾಯಕರು ಒಟ್ಟಾಗಿ ಭಾಗವಹಿಸುವ ಜಂಟಿ ಫೊಟೋ ಕಾರ್ಯಕ್ರಮವನ್ನು ಆಯೋಜಿಸಲಾಗಿರಲಿಲ್ಲ. ಜೆಡಿ ವ್ಯಾನ್ಸ್ ಅವರು ಹೇಳಿಕೆ ನೀಡುವ ಮುನ್ನ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಸಂಕ್ಷಿಪ್ತವಾಗಿ ಸಭಾಂಗಣಕ್ಕೆ ಪ್ರವೇಶಿಸಿ ಶೆಹಬಾಜ್ ಷರೀಫ್ ಅವರನ್ನು ತಬ್ಬಿಕೊಂಡು ಶುಭಾಶಯ ಕೋರಿದ್ದರು. ಇದೇ ವೇಳೆ ವ್ಯಾನ್ಸ್ ಅವರು ಸಭಾಂಗಣದ ಹಿಂಭಾಗದಲ್ಲಿದ್ದು, ಅರಾಘ್ಚಿ ಅವರೊಂದಿಗೆ ಯಾವುದೇ ಸಂವಾದ ನಡೆಸಲಿಲ್ಲ.
ಮೊದಲ ಸುತ್ತಿನ ಮಾತುಕತೆ ಮುಕ್ತಾಯಗೊಂಡ ಬಳಿಕವೂ ರಾಜತಾಂತ್ರಿಕ ಚಟುವಟಿಕೆಗಳು ಮುಂದುವರಿದಿವೆ. ಸೋಮವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅರಾಘ್ಚಿ, "ಪಾಕಿಸ್ತಾನ ಮತ್ತು ಖತರ್‌ನ ಮಧ್ಯಸ್ಥಿಕೆಯಿಂದ ಲೆಬನಾನ್ ಯುದ್ಧಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ" ಎಂದು ಹೇಳಿದ್ದಾರೆ. ಮಧ್ಯವರ್ತಿಗಳು ಮಾತುಕತೆಯಲ್ಲಿ ಗಮನಾರ್ಹ ಮುನ್ನಡೆ ಸಾಧಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

