ಇಸ್ಲಾಮಾಬಾದ್: ಸಿಂಧೂ ಜಲ ಒಪ್ಪಂದದ ವಿವಾದದ ನಡುವೆ, ಪಾಕಿಸ್ತಾನದ ನೀರಿನ ಭದ್ರತೆಗೆ ಧಕ್ಕೆ ಉಂಟಾದರೆ ಭಾರತದ ವಿರುದ್ಧ ಯುದ್ಧಕ್ಕೂ ಹಿಂಜರಿಯುವುದಿಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ.
ಪಾಕಿಸ್ತಾನದ ಖಾಸಗಿ ಸುದ್ದಿ ವಾಹಿನಿ 'ಂಖಙ ನ್ಯೂಸ್'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 'ನೀರು ನಮ್ಮ ರಾಷ್ಟ್ರೀಯ ಭದ್ರತೆಯ ಅವಿಭಾಜ್ಯ ಭಾಗವಾಗಿದೆ.
ನಮ್ಮ ನೀರಿನ ಹಕ್ಕುಗಳಿಗೆ ಅಪಾಯ ಎದುರಾದರೆ ಭಾರತ ವಿರುದ್ಧ ಯುದ್ಧಕ್ಕೂ ಹೋಗುತ್ತೇವೆ' ಎಂದು ಹೇಳಿದ್ದಾರೆ.
ಭಾರತದ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರು, ಪಾಕಿಸ್ತಾನಕ್ಕೆ ಹರಿಯುವ ಸಿಂಧೂ ನದಿ ನೀರಿನ ಹರಿವನ್ನು 2028ರ ಜೂನ್ ವೇಳೆಗೆ ಸಂಪೂರ್ಣವಾಗಿ ಸ್ಥಗಿತಗೊಳಿಸಬಹುದು ಎಂದು ಹೇಳಿರುವ ವೀಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಬೆನ್ನಲ್ಲೇ ಆಸಿಫ್ ಈ ಹೇಳಿಕೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ 2025ರ ಎಪ್ರಿಲ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟ ಬಳಿಕ ಭಾರತವು 1960ರ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿತ್ತು. ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ವಿಶ್ವಾಸಾರ್ಹ ಕ್ರಮ ಕೈಗೊಳ್ಳುವವರೆಗೆ ಅಮಾನತು ಮುಂದುವರಿಯಲಿದೆ ಎಂದು ಭಾರತ ತಿಳಿಸಿತ್ತು.
ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಜಾರಿಯಲ್ಲಿರುವ ಸಿಂಧೂ ಜಲ ಒಪ್ಪಂದದ ಪ್ರಕಾರ, ಸಿಂಧೂ ನದಿ ವ್ಯವಸ್ಥೆಯ ನೀರಿನ ಸುಮಾರು ಶೇ 80ರಷ್ಟು ಭಾಗ ಪಾಕಿಸ್ತಾನಕ್ಕೆ ಹಂಚಿಕೆಯಾಗುತ್ತದೆ. ಕೃಷಿ ಮತ್ತು ನೀರಾವರಿಗಾಗಿ ಈ ನೀರನ್ನು ಪಾಕಿಸ್ತಾನ ಬಹುತೇಕ ಅವಲಂಬಿಸಿದೆ.
ಭಾರತದ ನಿರ್ಧಾರವನ್ನು ಪಾಕಿಸ್ತಾನ ವಿರೋಧಿಸುತ್ತಿದ್ದು, ನೀರಿನ ಹರಿವಿನಲ್ಲಿ ಅಡಚಣೆ ಉಂಟಾದರೆ ಲಕ್ಷಾಂತರ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ವಾದಿಸಿದೆ. ಕಳೆದ ವಾರ ಉಪಪ್ರಧಾನಿ ಇಶಾಕ್ ದಾರ್ ಅವರು ಈ ವಿಷಯದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮಧ್ಯಸ್ಥಿಕೆಯನ್ನು ಕೋರಿದ್ದರು.
ಇದೇ ತಿಂಗಳ ಆರಂಭದಲ್ಲಿ ಚೆನಾಬ್ ನದಿಯ ನೀರನ್ನು ಬೇರೆಡೆಗೆ ತಿರುಗಿಸುವ ಉದ್ದೇಶದಿಂದ ಭಾರತ ನದಿ ಜೋಡಣೆ ಯೋಜನೆ ರೂಪಿಸುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿತ್ತು. ಇದನ್ನು ಸಿಂಧೂ ಜಲ ಒಪ್ಪಂದದ ಉಲ್ಲಂಘನೆ ಎಂದು ಅದು ಹೇಳಿದೆ.

