ನವದೆಹಲಿ: ದೇಶದಲ್ಲಿ ವಿದ್ಯುತ್ ಪ್ರಸರಣ ಮೂಲಸೌಕರ್ಯ ವಿಳಂಬದ ಕಾರಣದಿಂದ ದೊಡ್ಡ ಪ್ರಮಾಣದಲ್ಲಿ ಹಸಿರು ವಿದ್ಯುತ್ ವಿಸ್ತರಣೆಗೆ ತಡೆ ಉಂಟಾಗಿದೆ.
ಹಸಿರು ವಿದ್ಯುತ್ ಚಿಂತಕರ ಕೂಟ ಎಂಬೆರ್ ಪ್ರಕಾರ, 2026ರ ಪ್ರಥಮ ತ್ರೈಮಾಸಿಕದಲ್ಲಿ ಪ್ರಸರಣ ಸಮಸ್ಯೆಯಿಂದಾಗಿ 470 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುವಷ್ಟು ಗಂಟೆಯ ಪೈಕಿ ಮೂರನೇ ಎರಡರಷ್ಟು ನಷ್ಟವಾಗಿದೆ.
ದೊಡ್ಡ ಪ್ರಮಾಣದಲ್ಲಿ ಸೌರ ವಿದ್ಯುತ್ ಮತ್ತು ಪವನ ವಿದ್ಯುತ್ ಯೋಜನೆಗಳನ್ನು ಅನುಷ್ಠಾನಗೊಳಿಸಿರುವ ರಾಜಸ್ಥಾನ ಮತ್ತು ಗುಜರಾತ್ನಲ್ಲಿ ಈ ಸಮಸ್ಯೆ ತೀವ್ರವಾಗಿದೆ. ದೇಶದ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 543 ಗಿಗಾವ್ಯಾಟ್ ಆಗಿದ್ದು, ಇದರಲ್ಲಿ 154 ಗಿಗಾವ್ಯಾಟ್ ಸೌರ ವಿದ್ಯುತ್ ಹಾಗೂ 56 ಗಿಗಾವ್ಯಾಟ್ ಪವನ ವಿದ್ಯುತ್ ಸೇರಿದೆ.
ವಿದ್ಯುತ್ ನಿಯೋಜನೆಯ ವೇಗ ಮತ್ತು ವರ್ಗಾವಣೆಗೆ ಸಿದ್ಧತೆಯ ವೇಗದ ಅಂತರವು ಈ ವಲಯದಲ್ಲಿ ಅತಿದೊಡ್ಡ ಕಾರ್ಯಾಚರಣೆ ಸಮಸ್ಯೆಯಾಗಿ ಕಾಡುತ್ತಿದೆ.
ಪ್ರಸರಣ ಸಮಸ್ಯೆಯಿಂದಾಗಿ ದೇಶದಲ್ಲಿ ನವೀಕರಿಸಬಹುದಾದ ಇಂಧನ ಮೂಲದ ವಿದ್ಯುತ್ ಉತ್ಪಾದನೆ ಕಡಿತ ಗಣನೀಯ ಮಟ್ಟದಲ್ಲಿದೆ ಎಂದು ಎಂಬೆರ್ ವಿದ್ಯುತ್ ವಿಶ್ಲೇಷಕ ದತ್ತಾತ್ರೇಯ ದಾಸ್ ಹೇಳುತ್ತಾರೆ. ಉತ್ಪಾದನೆ ಚಾಲಿತ ಪ್ರಸರಣ ಯೋಜನೆಯ ಬದಲಾಗಿ ಉತ್ಪಾದನೆ ಹಾಗೂ ಪ್ರಸರಣವನ್ನು ಏಕಕಾಲಕ್ಕೆ ಯೋಜಿಸುವ ವ್ಯವಸ್ಥೆ ಜಾರಿಗೆ ಬರಬೇಕು ಎನ್ನುವುದು ಅವರ ಅಭಿಮತ.

