ಅಯೋಧ್ಯೆ: ರಾಮಮಂದಿರದ ದೇಣಿಗೆ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಹೇಳಿಕೆಯನ್ನು ಅಯೋಧ್ಯೆ ಪೊಲೀಸರು ಮಂಗಳವಾರ ದಾಖಲಿಸಿದ್ದಾರೆ.
ತನಿಖೆಯ ನೇತೃತ್ವ ವಹಿಸಿರುವ ಸರ್ಕಲ್ ಇನ್ಸ್‌ಪೆಕ್ಟರ್ ಅಶುತೋಶ್ ತಿವಾರಿ ಅವರು ಚಂಪತ್ ರಾಯ್ ಅವರ ಅಯೋಧ್ಯೆಯ ಕರಸೇವಕಪುರಂನ ನಿವಾಸಕ್ಕೆ ತೆರಳಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ದೇಣಿಗೆ ಕಳ್ಳತನಕ್ಕೆ ಸಂಬಂಧಿಸಿದಂತೆ ಇತರ ವಿಷಯಗಳ ಬಗ್ಗೆಯೂ ವಿಚಾರಿಸಿದ್ದಾರೆ.
ಜೂನ್ 7ರಂದು ರಾಮಮಂದಿರದಲ್ಲಿ ದೇಣಿಗೆ ದುರುಪಯೋಗವಾಗಿರುವ ಬಗ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಬಿಜೆಪಿಯ ಹಲವು ನಾಯಕರು ದೇಣಿಗೆ ದುರುಪಯೋಗವಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಸಮಗ್ರ ತನಿಖೆ ನಡೆಸುವಂತೆಯೂ ಯೋಗಿ ಆದಿತ್ಯನಾಥ ಸರ್ಕಾರಕ್ಕೆ ಮನವಿ ಮಾಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿತ್ತು. ಅದಾದ ಒಂದು ವಾರಕ್ಕೆ ವರದಿ ಸಲ್ಲಿಸಿದ ಎಸ್‌ಐಟಿ, ಎಂಟು ಮಂದಿಯನ್ನು ಬಂಧಿಸಿತ್ತು.
'ಜೂನ್ 25ರಂದು ಎಫ್‌ಐಆರ್ ದಾಖಲಾಗಿದ್ದು, 8 ಆರೋಪಿಗಳಲ್ಲಿ 6 ಆರೋಪಿಗಳಿಂದ ಸುಮಾರು ₹80 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

