ನವದೆಹಲಿ: ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರು ಭಾರತದ ಸೇನಾಪಡೆಗಳ ಮುಂದಿನ ಮುಖ್ಯಸ್ಥರಾಗಲಿದ್ದಾರೆ.
ಧೀರಜ್ ಸೇಠ್ ಅವರು ಸದ್ಯ ಭಾರತೀಯ ಸೇನಾ ಉಪ ಮುಖ್ಯಸ್ಥರಾಗಿದ್ದಾರೆ. ಸೇನಾಪಡೆಗಳ ಹಾಲಿ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಜೂನ್ 30ರಂದು ನಿವೃತ್ತರಾಗಲಿದ್ದಾರೆ.
ಅಂದೇ ಧೀರಜ್ ಅವರು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ನಾಲ್ಕು ದಶಕಗಳ ಅನುಭವ: ಭಾರತೀಯ ಸೇನೆಯಲ್ಲಿ ಧೀರಜ್ ಸೇಠ್ ಅವರಿಗೆ ನಾಲ್ಕು ದಶಕಗಳ ಅನುಭವ ಇದೆ. ಕಾರ್ಯಾಚರಣೆ, ಕಾರ್ಯತಂತ್ರ, ಸಾಮರ್ಥ್ಯ ಅಭಿವೃದ್ಧಿ ಮತ್ತು ಸಾಂಸ್ಥಿಕ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಮಹಾರಾಷ್ಟ್ರದ ಖಡಕ್‌ವಾಸ್ಲಾದಲ್ಲಿರುವ ರಾಷ್ಟ್ರೀಯ ಭದ್ರತಾ ಅಕಾಡೆಮಿಯಲ್ಲಿ ಸೇನಾಧಿಕಾರಿ ತರಬೇತಿ ಮುಗಿಸಿದ್ದ ಧೀರಜ್ ಸೇಠ್ ಅವರು, 1986ರಲ್ಲಿ ಸೇನಾ ಸಶಸ್ತ್ರ ಪಡೆಗೆ ಸೇರ್ಪಡೆ ಆಗಿದ್ದರು.
ಜಮ್ಮು-ಕಾಶ್ಮೀರದಲ್ಲಿ ಒಳನುಸುಳುಕೋರರ ನಿಗ್ರಹ ಪಡೆ, ಸುದರ್ಶನ ಚಕ್ರ ತಂಡ ಸೇರಿ ಹಲವು ತಂಡಗಳನ್ನು ಮುನ್ನಡೆಸಿದ್ದಾರೆ. ದೆಹಲಿಯಲ್ಲಿ ಪ್ರಧಾನ ಕಮಾಂಡಿಂಗ್ ಅಧಿಕಾರಿಯಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸೇನಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಸೇನಾ ಕಮಾಂಡರ್ ಆಗಿ ಪದೋನ್ನತಿ ಪಡೆದಿದ್ದ ಅವರು, ಪ್ರಮುಖ ಕಾರ್ಯಾಚರಣೆಗಳ ಭಾಗವಾಗಿದ್ದರು. ಸಿಬ್ಬಂದಿ ಮತ್ತು ಕಾರ್ಯತಂತ್ರದ ಹಲವು ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಎರಡೂವರೆ ವರ್ಷಗಳವರೆಗೆ ಅತ್ಯಂತ ಕಠಿಣ ಸಂದರ್ಭಗಳಲ್ಲಿ ಸೇನಾ ಕಾರ್ಯತಂತ್ರ ನಿರ್ವಹಣೆಯ ಜವಾಬ್ದಾರಿ ನಿಭಾಯಿಸಿದ್ದರು.

