ಕಾಸರಗೋಡು: ಯೋಗಾಸನ ಕಾಸರಗೋಡು ಜಿಲ್ಲಾ ಸಂಘದ ನೇತೃತ್ವದಲ್ಲಿ ಏಳನೇ ಜಿಲ್ಲಾ ಯೋಗಾಸನ ಚಾಂಪಿಯನ್ಶಿಪ್ ಕಾಞಂಗಾಡಿನ ಚಿನ್ಮಯ ವಿದ್ಯಾಲಯದಲ್ಲಿ ಜರುಗಿತು. ಕೇರಳಂ ಚಿನ್ಮಯ ಮಿಷನ್ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತೀ ಸಮಾರಂಭ ಉದ್ಘಾಟಿಸಿ ಮಾತನಾಡಿ, ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಯೋಗಾಸನದ ಪತ್ರ ಮಹತ್ವದ್ದಾಗಿದೆ. ಯೋಗಾಸನ ಕ್ರೀಡೆಗಳ ಬೆಳವಣಿಗೆಯನ್ನು ಉತ್ತೇಜಿಸುವುದು ಮತ್ತು ಯುವ ಪೀಳಿಗೆಯಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.
ಕೇರಳದ ಯೋಗಾಸನ ಕ್ರೀಡಾ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ರವಿಶಂಕರ್ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಯೋಗಾಚಾರ್ಯ ಶಂಭು ನಂಬೂದಿರಿ ಮತ್ತು ರಾಷ್ಟ್ರೀಯ ತೀರ್ಪುಗಾರರ ತರಬೇತಿ ಪೂರ್ತಿಗೊಳಿಸಿದ ಅನಿಲ್ ಕುಮಾರ್ ಅವರನ್ನು ಸನ್ಮಾನಿಸಿದರು.
ಚಿನ್ಮಯ ವಿದ್ಯಾಲಯ ಪ್ರಾಂಶುಪಾಲ ಸಿ ಚಂದ್ರನ್ ಮತ್ತು ಯೋಗಾಸನ ಕಾಸರಗೋಡು ಸಂಘಟನೆ ಪೋಷಕ ಡಾ. ಶಿವರಾಯ ಭಟ್ ಉಪಸ್ಥಿತರಿದ್ದರು. ಅಧ್ಯಕ್ಷೆ ತೇಜ ಕುಮಾರಿ ಸ್ವಾಗತಿಸಿದರು. ಪಿ. ಅನಿಲ್ ಕುಮಾರ್ ವಂದಿಸಿದರು.
ಈ ಸಂದರ್ಭ ವಿವಿಧ ವಯೋಮಾನದ ವಿಭಾಗಗಳಲ್ಲಿ ಯೋಗಾಸನ ಸ್ಪರ್ಧೆ ನಡೆಯಿತು. ಸಾಂಪ್ರದಾಯಿಕ, ಕಲಾತ್ಮಕ, ಲಯಬದ್ಧ ಇತ್ಯಾದಿ ಸ್ಪರ್ಧಿಗಳಲ್ಲಿ ಸ್ಪರ್ಧಾಳುಗಳು ತಮ್ಮ ಕೌಶಲ್ಯ ಪ್ರದರ್ಶಿಸಿದರು. ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಿಗೆ ಅರ್ಹ ಆಟಗಾರರನ್ನು ಗುರುತಿಸಲು ಮತ್ತು ಜಿಲ್ಲೆಯಲ್ಲಿ ಯೋಗಾಸನ ಕ್ರೀಡೆಯನ್ನು ಮತ್ತಷ್ಟು ಬಲಪಡಿಸಲು ಈ ಚಾಂಪಿಯನ್ಶಿಪ್ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.



