ಕೋಲ್ಕತ್ತ: ಪಕ್ಷದ ಹಿರಿಯ ನಿಷ್ಠಾವಂತ ನಾಯಕ ಹಾಗೂ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. 'ನಿಮಗೆ ಅಭಿಷೇಕ್ ಬ್ಯಾನರ್ಜಿ ಬೇಕೋ ಅಥವಾ ಪಕ್ಷದ ನಿಷ್ಠಾವಂತರು ಬೇಕೋ ಎಂಬುದನ್ನು ನೀವೇ ನಿರ್ಧರಿಸಿ' ಎಂದಿದ್ದಾರೆ.
ನಕಲಿ ಸಹಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರ ಸಿಐಡಿ ತಮಗೆ ನೀಡಿರುವ ಸಮನ್ಸ್ ಅನ್ನು ಪ್ರಶ್ನಿಸಿ ಮತ್ತು ಬಂಧನದಂತಹ ಕಠಿಣ ಕ್ರಮಗಳಿಂದ ತಮಗೆ ಮಧ್ಯಂತರ ರಕ್ಷಣೆ ನೀಡಬೇಕು ಎಂದು ಕೋರಿ ಅಭಿಷೇಕ್ ಬ್ಯಾನರ್ಜಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಗೆ ಹಾಜರಾಗಬೇಕಿದ್ದ ಕಲ್ಯಾಣ್ ಬ್ಯಾನರ್ಜಿ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದಾರೆ. ಅಷ್ಟೇ ಅಲ್ಲದೆ, ಅಭಿಷೇಕ್ ಬ್ಯಾನರ್ಜಿ ಒಬ್ಬ ಅಹಂಕಾರಿ ಹಾಗೂ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಅನುಭವಿಸಿದ ಹೀನಾಯ ಸೋಲಿಗೆ ಅವರೇ ಮುಖ್ಯ ರೂವಾರಿ ಎಂದು ಕಲ್ಯಾಣ್ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕಲ್ಯಾಣ್ ಬ್ಯಾನರ್ಜಿ, 'ಅಭಿಷೇಕ್ ಬ್ಯಾನರ್ಜಿ ಅವರಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳಿಂದ ದೂರವಿರಲು ನಾನು ನಿರ್ಧರಿಸಿದ್ದೇನೆ. ಅವರ ಅಹಂಕಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಬುಧವಾರವಷ್ಟೇ ನಾನು ನ್ಯಾಯಮೂರ್ತಿ ಚಂದಾ ಅವರ ಪೀಠದ ಮುಂದೆ ಈ ಪ್ರಕರಣವನ್ನು ಪ್ರಸ್ತಾಪಿಸಿ, ತುರ್ತು ವಿಚಾರಣೆಗೆ ವಿನಂತಿಸಿದ್ದೆ. ಅದರಂತೆ ಗುರುವಾರ ವಿಚಾರಣೆ ನಿಗದಿಯಾಗಿತ್ತು. ಆದರೆ, ಬುಧವಾರ ರಾತ್ರಿ ನನ್ನ ಮಗನಿಗೆ ಕರೆ ಮಾಡಿದ ಅಭಿಷೇಕ್, ನನಗಿಂತ ಜೂನಿಯರ್ ಆಗಿರುವ ಬೇರೊಬ್ಬ ವಕೀಲರು ತಮ್ಮ ಪರವಾಗಿ ಹಾಜರಾಗಲಿದ್ದಾರೆ ಎಂದು ಹೇಳಿದ್ದಾರೆ' ಎಂದು ಅಸಮಾಧಾನ ಹೊರಹಾಕಿದ್ದಾರೆ.
ಅಭಿಷೇಕ್ ಬ್ಯಾನರ್ಜಿ ಅವರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, 'ನಾನು ಕಳೆದ 45 ವರ್ಷಗಳಿಂದ ವಕೀಲ ವೃತ್ತಿಯಲ್ಲಿದ್ದೇನೆ. ಅಭಿಷೇಕ್ ಬ್ಯಾನರ್ಜಿ ಅವರ ಅಹಂಕಾರವನ್ನು ನಾನು ಸಹಿಸುವುದಿಲ್ಲ. ಹಾಗಾಗಿ ನಾನು ಮಮತಾ ಬ್ಯಾನರ್ಜಿ ಅವರಿಗೆ ನೇರವಾಗಿ ಹೇಳಲು ಬಯಸುತ್ತೇನೆ, ನಿಮಗೆ ಅಭಿಷೇಕ್ ಬೇಕೋ ಅಥವಾ ಇಷ್ಟು ವರ್ಷಗಳ ಕಾಲ ಪಕ್ಷಕ್ಕೆ ನಿಷ್ಠರಾಗಿ ದುಡಿದ ನಾವೆಲ್ಲ ಬೇಕೋ ನೀವೇ ಆರಿಸಿಕೊಳ್ಳಿ. ತೃಣಮೂಲ ಕಾಂಗ್ರೆಸ್ ಇಂದು ಈ ರೀತಿಯ ದಯನೀಯ ಸ್ಥಿತಿಗೆ ತಲುಪಲು ಕೇವಲ ಅವರೊಬ್ಬರೇ ಕಾರಣ. ಆದರೂ ಅವರ ಅಹಂಕಾರ ಮಾತ್ರ ಮುಂಚಿನಂತೆಯೇ ಇದೆ' ಎಂದು ಕಿಡಿಕಾರಿದ್ದಾರೆ.
ಐಎಎನ್ಎಸ್ (IಂಓS) ವರದಿಯ ಪ್ರಕಾರ, ಕಲ್ಯಾಣ್ ಬ್ಯಾನರ್ಜಿ ಅವರ ಪುತ್ರ, 'ವಕೀಲ ಶೀರ್ಷಣ್ಯ ಬ್ಯಾನರ್ಜಿ ಹಾಗೂ ಅವರ ಕಚೇರಿಯ ಇತರ ಕಿರಿಯ ವಕೀಲರು ಸಹ ಇನ್ನು ಮುಂದೆ ಅಭಿಷೇಕ್ ಬ್ಯಾನರ್ಜಿ ಅವರಿಗೆ ಸಂಬಂಧಿಸಿದ ಯಾವುದೇ ಕಾನೂನು ವ್ಯವಹಾರಗಳಲ್ಲಿ ಭಾಗಿಯಾಗುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

