ನವದೆಹಲಿ: ದೆಹಲಿಯ ಚಾಣಕ್ಯಪುರಿಯ ಕೌಟಿಲ್ಯ ಮಾರ್ಗದಲ್ಲಿರುವ ತಮಿಳುನಾಡು ಭವನದಲ್ಲಿ ಗುರುವಾರ ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ನೀತಿ ಆಯೋಗದ ಸಭೆಗೆ ಭವನದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದಿದೆ.
ಅನಿಲ ಸೋರಿಕೆಯಿಂದಾಗಿ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ತಕ್ಷಣವೇ ಬೆಂಕಿಯನ್ನು ಹತೋಟಿಗೆ ತರಲಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಆದಾಗ್ಯೂ, ಭಾರಿ ಭದ್ರತೆ ಇರುವ ಈ ಆವರಣದಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.
ನೀತಿ ಆಯೋಗದ ಸಭೆಯಲ್ಲಿ ಸಿಎಂ ಭಾಗಿ:
ಮೂರು ದಿನಗಳ ದೆಹಲಿ ಪ್ರವಾಸದಲ್ಲಿರುವ ತಮಿಳುನಾಡು ಸಿಎಂ ವಿಜಯ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

