HEALTH TIPS

ದೇಶದ ಬಹುಮಹಡಿ ಹೋಟೆಲ್, ಆಸ್ಪತ್ರೆಗಳು ಎಷ್ಟು ಸುರಕ್ಷಿತ? ಪಾಲಿಸಬೇಕಾದ ನಿಯಮಗಳೇನು?

 ಈಚೆಗೆ ದಕ್ಷಿಣ ದೆಹಲಿಯ ಮಾಳವೀಯ ನಗರದ ಹೋಟೆಲ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 21 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ಈ ದುರಂತ ಸಂಭವಿಸಿ 24 ಗಂಟೆ ಕಳೆಯುವಷ್ಟರಲ್ಲಿ ಬಿಹಾರದ ಮುಜಾಫರ್‌ಪುರದ ಆಸ್ಪತ್ರೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ನಾಲ್ಕು ರೋಗಿಗಳು ಸಾವಿಗೀಡಾಗಿದ್ದಾರೆ.


ಇದರ ಬೆನ್ನಲ್ಲೇ ಬಹುಮಹಡಿ ಕಟ್ಟಡಗಳಿಗೆ ಇರುವ ಅಗ್ನಿ ಸುರಕ್ಷತಾ ನಿಯಮಗಳೇನು?, ಹೋಟೆಲ್‌ ಮತ್ತು ಆಸ್ಪತ್ರೆಗಳನ್ನು ಹೊಂದಿರುವ ಕಟ್ಟಡಗಳಿಗೆ ಯಾವ ಹೆಚ್ಚುವರಿ ನಿಬಂಧನೆಗಳನ್ನು ಕಡ್ಡಾಯಗೊಳಿಸಲಾಗಿದೆ? ಎಂಬುದರ ಕುರಿತಾದ ಚರ್ಚೆ ಮುನ್ನೆಲೆಗೆ ಬಂದಿದೆ.

ಮೇಲಿನ ಎರಡೂ ಪ್ರಕರಣಗಳಲ್ಲಿ ಅಗ್ನಿ ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿರುವುದನ್ನು ತಳ್ಳಿಹಾಕುವಂತಿಲ್ಲ. ಹಾಗಾದರೆ, ಬಹುಮಹಡಿ ಕಟ್ಟಡ, ಹೋಟೆಲ್‌ ಮತ್ತು ಆಸ್ಪತ್ರೆಗಳಲ್ಲಿ ಅನುಸರಿಸಬೇಕಾದ ಸುರಕ್ಷತಾ ನಿಯಮಗಳ ಬಗ್ಗೆ ತಿಳಿಯೋಣ.

ರಾಷ್ಟ್ರೀಯ ಕಟ್ಟಡ ಸಂಹಿತೆ-2016

ರಾಷ್ಟ್ರೀಯ ಕಟ್ಟಡ ಸಂಹಿತೆ-2016ರ (ಎನ್‌ಬಿಸಿ) ಅಡಿಯಲ್ಲಿ ಆಯಾ ರಾಜ್ಯ ಸರ್ಕಾರಗಳು ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದ ನಿಯಮಗಳನ್ನು ರೂಪಿಸಿವೆ ಮತ್ತು ಅಗ್ನಿಶಾಮಕ ಸೇವಾ ನಿಯಮಗಳನ್ನು ಸಿದ್ಧಪಡಿಸಿವೆ. ಎನ್‌ಬಿಸಿ 2016ರ ಭಾಗ 4ರ (ಅಗ್ನಿ ಮತ್ತು ಜೀವ ಸುರಕ್ಷತೆ) ಪ್ರಕಾರ, ಎಲ್ಲಾ ಬಹುಮಹಡಿ ಕಟ್ಟಡಗಳಿಗೆ ಈ ಕೆಳಗಿನ ನಿಬಂಧನೆಗಳನ್ನು ಕಡ್ಡಾಯಗೊಳಿಸಲಾಗಿದೆ.

* ಪ್ರತಿಯೊಂದು ಮಹಡಿಯಲ್ಲೂ ಅಗ್ನಿಶಾಮಕ ಉಪಕರಣಗಳು ಇರಬೇಕು.

* ಅಲಾರಾಂ ಜತೆಗೆ ಬೆಂಕಿ ಪತ್ತೆ ಹಚ್ಚುವ ಸ್ವಯಂಚಾಲಿತ ವ್ಯವಸ್ಥೆ ಇರಬೇಕು.

* ಪ್ರತ್ಯೇಕವಾದ ನೀರಿನ ಸಂಗ್ರಹಣೆ ಮತ್ತು ನೀರಿನ ಪಂಪ್‌ ಇರಬೇಕು.

* ಸ್ವಯಂಚಾಲಿತವಾಗಿ ನೀರು ಚಿಮುಕಿಸುವ ವ್ಯವಸ್ಥೆ ಇರಬೇಕು.

* ಹೈಡ್ರೆಂಟ್ ವ್ಯವಸ್ಥೆ ಅಳವಡಿಸಬೇಕು.

* ಪ್ರತಿ ಮಹಡಿಯಲ್ಲೂ ತುರ್ತು ದೀಪಗಳನ್ನು ಅಳವಡಿಸಬೇಕು.

* ಸುರಕ್ಷಿತವಾಗಿ ಹೊರಹೋಗಲು ಒಂದಕ್ಕಿಂತ ಹೆಚ್ಚು ಮಾರ್ಗಗಳು ಇರಬೇಕು

* ಬಹುಮಹಡಿ ಕಟ್ಟಡಗಳಲ್ಲಿ ಎರಡು ಕಡೆ ಮೆಟ್ಟಿಲುಗಳು ಇರಬೇಕು.

* ಹೊರಹೋಗಲು ಅನುಕೂಲವಾಗುವಂತೆ ಕಾರಿಡಾರ್‌ಗಳು ಸಾಕಷ್ಟು ಅಗಲವಾಗಿರಬೇಕು.

* ಮೆಟ್ಟಿಲುಗಳ ಗೋಡೆಗಳು ಬೆಂಕಿ ನಿರೋಧಕವಾಗಿರಬೇಕು.

* ನಿರ್ಗಮನ ಮಾರ್ಗಗಳನ್ನು ಸ್ಪಷ್ಟವಾಗಿ ಗುರುತಿಸಿರಬೇಕು ಮತ್ತು ಸ್ಪಷ್ಟವಾಗಿ ಕಾಣಿಸುವಂತೆ ಫಲಕಗಳನ್ನು ಅಳವಡಿಸಬೇಕು.

* ನಿರ್ಗಮನದ ಬಾಗಿಲುಗಳು ಹೊರಮುಖವಾಗಿ ತೆರೆದುಕೊಳ್ಳುವಂತಿರಬೇಕು.

* ತುರ್ತು ಸಂದರ್ಭದಲ್ಲಿ ಜನರನ್ನು ಸ್ಥಳಾಂತರಿಸುವ ನಿರ್ದಿಷ್ಟ ಮಾರ್ಗಗಳು ಇರಬೇಕು.

ಅಗ್ನಿಶಾಮಕ ಲಿಫ್ಟ್‌ಗಳು...

* ಪ್ರತಿಯೊಂದು ಬಹುಮಹಡಿ ಕಟ್ಟಡದಲ್ಲೂ ಅಗ್ನಿಶಾಮಕ ಲಿಫ್ಟ್‌ಗಳು ಇರಬೇಕು.

* ತುರ್ತು ಸಂದರ್ಭದಲ್ಲಿ ಜನರು ತಕ್ಷಣವೇ ಒಂದು ಕಡೆ ಜಮಾಯಿಸಲು ಪ್ರತ್ಯೇಕ ಸ್ಥಳವನ್ನು ಗುರುತಿಸಬೇಕು.

ರಚನಾತ್ಮಕ ಸುರಕ್ಷತೆ

ರಾಷ್ಟ್ರೀಯ ಕಟ್ಟಡ ಸಂಹಿತೆಯು ಎಲ್ಲಾ ಬಹುಮಹಡಿ ಕಟ್ಟಡಗಳಿಗೆ ಕೆಲವು ರಚನಾತ್ಮಕ ಸುರಕ್ಷತಾ ನಿಯಮಗಳನ್ನು ಸಹ ಸೂಚಿಸಿದೆ. ಈ ನಿಯಮಗಳ ಅನುಸರವಾಗಿಯೇ ಕಟ್ಟಡಗಳನ್ನು ನಿರ್ಮಾಣ ಮಾಡುವುದು ಉತ್ತಮ.

* ಪ್ರಬಲ ಭೂಕಂಪ ತಡೆದುಕೊಳ್ಳುವಷ್ಟು ಸಾಮರ್ಥ್ಯ.

* ಗಾಳಿಯ ಒತ್ತಡ ತಡೆದುಕೊಳ್ಳುವ ಸಾಮರ್ಥ್ಯ.

* ಸುರಕ್ಷಿತವಾದ ವಿದ್ಯುತ್ ವೈರಿಂಗ್ ಮತ್ತು ಉಪಕರಣಗಳ ಅಳವಡಿಕೆ.

ಎನ್‌ಒಸಿ ಕಡ್ಡಾಯ...

ಬಹುಮಹಡಿ ಕಟ್ಟಡ ನಿರ್ಮಾಣ ಮಾಡುವವರು ಅಗ್ನಿಶಾಮಕ ದಳದಿಂದ ನಿರಾಕ್ಷೇಪಣಾ ಪತ್ರವನ್ನೂ (ಎನ್‌ಒಸಿ) ಪಡೆದಿರಬೇಕು. ಅಧಿಕಾರಿಗಳು ನಿಯಮಿತವಾಗಿ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಎನ್‌ಒಸಿಯನ್ನು ನಿಯತಕಾಲಿಕವಾಗಿ ನವೀಕರಿಸಬೇಕು. ಹೋಟೆಲ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಕೋಣೆಗಳಿರುವುದರಿಂದ ಹೆಚ್ಚುವರಿ ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಹೋಟೆಲ್‌ ಮಾಲೀಕರು ಅನುಸರಿಸಬೇಕಾದ ನಿಯಮಗಳಿವು...

* ರೆಸ್ಟೋರೆಂಟ್‌, ರೂಮ್‌ಗಳು ಸೇರಿದಂತೆ ಅತಿಥಿಗಳು ಇರುವ ಜಾಗಗಳಲ್ಲಿ ಅಲಾರಾಂ ಜತೆಗೆ ಹೊಗೆ ಪತ್ತೆಹಚ್ಚುವ ಉಪಕರಣಗಳನ್ನು ಅಳವಡಿಸಬೇಕು.

* ಪ್ರತಿಯೊಬ್ಬರಿಗೂ ಸ್ಪಷ್ಟವಾಗಿ ಕಾಣುವಂತೆ ಹೊರಗೆ ಹೋಗಲು ಸೂಚನೆಗಳಿರುವ ನಕ್ಷೆಗಳು ಅಳವಡಿಸಬೇಕು.

* ತುರ್ತು ಸಂದರ್ಭದಲ್ಲಿ ಜನರನ್ನು ಸುರಕ್ಷಿತವಾಗಿ ಹೊರಗೆ ಕರೆತರಲು ಸಿಬ್ಬಂದಿಗೆ ತರಬೇತಿ ನೀಡಿರಬೇಕು.

* ಬೆಂಕಿ ನಿರೋಧಕ ಸಾಮಗ್ರಿಗಳ ಬಳಕೆ.

* ಕಾರಿಡಾರ್‌ ಮತ್ತು ಮೆಟ್ಟಿಲುಗಳ ಜಾಗದಲ್ಲಿ ತುರ್ತು ದೀಪಗಳ ವ್ಯವಸ್ಥೆ.

ಆಸ್ಪತ್ರೆಗಳಲ್ಲಿ ಅನುಸರಿಬೇಕಾದ ನಿಯಮಗಳು...

ಆಸ್ಪತ್ರೆಯಲ್ಲಿರುವ ಅನೇಕ ರೋಗಿಗಳಿಗೆ ಇತರರ ಸಹಾಯವಿಲ್ಲದೆ ಸ್ವತಃ ಹೊರಗೆ ಬರಲು ಸಾಧ್ಯವಾಗದ ಕಾರಣ, ಆಸ್ಪತ್ರೆಗಳನ್ನು 'ಸಾಂಸ್ಥಿಕ ಕಟ್ಟಡಗಳು' (Institutional Buildings - Group C)) ಎಂದು ವರ್ಗೀಕರಿಸಲಾಗಿದೆ. ಅವುಗಳಿಗೆ ಪ್ರತ್ಯೇಕ ಅಗ್ನಿ ಸುರಕ್ಷತಾ ನಿಯಮಗಳಿವೆ.

* ವೀಲ್‌ಚೇರ್, ಸ್ಟ್ರೆಚರ್‌ಗಳನ್ನು ಸುಲಭವಾಗಿ ಕೊಂಡೊಯ್ಯಲು ಅನುಕೂಲವಾಗುವಂತೆ ವಿಶಾಲವಾದ ಕಾರಿಡಾರ್‌ ಮತ್ತು ನಿರ್ಗಮನ ಮಾರ್ಗಗಳು ಇರಬೇಕು.

* ಅಲಾರಾಂ ಮತ್ತು ಬೆಂಕಿ ಪತ್ತೆ ಹಚ್ಚುವ ಸ್ವಯಂಚಾಲಿತ ವ್ಯವಸ್ಥೆ ಹೊಂದಿರಬೇಕು.

* ಐಸಿಯು ಮತ್ತು ಹಾಸಿಗೆಯಿಂದ ಏಳಲಾಗದ ರೋಗಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ವ್ಯವಸ್ಥೆ ಇರಬೇಕು.

* ತುರ್ತು ವೈದ್ಯಕೀಯ ಸೇವೆಗಳಿಗಾಗಿ ನಿರಂತರ ವಿದ್ಯುತ್ ವ್ಯವಸ್ಥೆ ಹೊಂದಿರಬೇಕು.













ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries