ವಾಷಿಂಗ್ಟನ್: ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೈನ್ ಜತೆ ಸಂಬಂಧ ಹೊಂದಿದ್ದರ ಹಿನ್ನೆಲೆಯಲ್ಲಿ ಮೈಕ್ರೊಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಅವರು ಒಡೆತನದ 'ಗೇಟ್ಸ್ ಫೌಂಡೇಷನ್'ಗೆ ಈ ಬಾರಿ ದೇಣಿಗೆ ನೀಡದಿರಲು ಬಿಲಿಯನೇರ್ ವಾರೆನ್ ಬಫೆಟ್ ನಿರ್ಧರಿಸಿದ್ದಾರೆ ಎಂದು 'ವಾಲ್ ಸ್ಟ್ರೀಟ್ ಜರ್ನಲ್' ವರದಿ ಮಾಡಿದೆ.
ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ ಅಪರಾಧಿಯಾಗಿದ್ದ ಉದ್ಯಮಿ ಜೆಫ್ರಿ ಎಪ್‌ಸ್ಟೈನ್ ಅವರೊಂದಿಗಿನ ಬಿಲ್ ಗೇಟ್ಸ್ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
ಬಿಲ್ ಗೇಟ್ಸ್ ಅವರಿಗೆ ಎಪ್‌ಸ್ಟೈನ್ ಜತೆಗಿದ್ದ ಒಡನಾಟದ ಕಾರಣದಿಂದಾಗಿ ಗೇಟ್ಸ್ ಫೌಂಡೇಶನ್ ವಿವಾದಕ್ಕೆ ಸಿಲುಕಿದೆ. ಜನವರಿಯಲ್ಲಿ ಅಮೆರಿಕ ನ್ಯಾಯಾಂಗ ಇಲಾಖೆಯು ಬಿಡುಗಡೆ ಮಾಡಿದ ಇ-ಮೇಲ್‌ಗಳು ಕೂಡ ಎಪ್‌ಸ್ಟೈನ್ ಮತ್ತು ಗೇಟ್ಸ್ ಫೌಂಡೇಶನ್‌ನ ಸಿಬ್ಬಂದಿ ನಡುವಿನ ವೈಮನಸ್ಸು ಬಹಿರಂಗಪಡಿಸಿದ್ದವು.
ಎಪ್‌ಸ್ಟೈನ್ ಜತೆ ಹೊಂದಿದ್ದ ಒಡನಾಟದ ಬಗ್ಗೆ ತನಿಖೆ ನಡೆಸಲು ಗೇಟ್ಸ್ ಫೌಂಡೇಶನ್‌ನ ಸಿಇಒ ಮಾರ್ಕ್ ಸುಜ್ಮನ್ ಅವರು ಆದೇಶಿಸಿದ್ದು, ಇನ್ನಷ್ಟೇ ವರದಿ ಬರಬೇಕಿದೆ.
ಶತಕೋಟಿ ಡಾಲರ್ ದೇಣಿಗೆ ನೀಡದಿರಲು ಬಫೆಟ್ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಬರ್ಕ್‌ಶೈರ್ ಹ್ಯಾಥ್‌ವೇ ಮತ್ತು ಗೇಟ್ಸ್ ಫೌಂಡೇಶನ್ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬರ್ಕ್‌ಶೈರ್ ಹ್ಯಾಥ್‌ವೇ ಸಂಸ್ಥೆಯ ಅಧ್ಯಕ್ಷರಾಗಿರುವ 95 ವರ್ಷದ ವಾರೆನ್ ಬಫೆಟ್, ಕಳೆದ ಎರಡು ದಶಕಗಳಲ್ಲಿ ತಮ್ಮ ಒಕ್ಕೂಟ ಸಂಸ್ಥೆಯ 47 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಮೌಲ್ಯದ ಷೇರುಗಳನ್ನು ಗೇಟ್ಸ್ ಫೌಂಡೇಶನ್‌ಗೆ ದೇಣಿಗೆಯಾಗಿ ನೀಡಿದ್ದಾರೆ.
ಫೆಬ್ರುವರಿಯಲ್ಲಿ ನ್ಯಾಯಾಂಗ ಇಲಾಖೆಯು ಎಪ್‌ಸ್ಟೈನ್ ಕುರಿತಾದ ಕಡತಗಳನ್ನು ಬಿಡುಗಡೆ ಮಾಡಿದ ನಂತರ ಬಿಲ್ ಗೇಟ್ಸ್ ಅವರ ವರ್ಚಸ್ಸಿಗೆ ಧಕ್ಕೆಯುಂಟಾಗಿತ್ತು.
ಎಪ್‌ಸ್ಟೈನ್ ಸಂಬಂಧದ ಬಗ್ಗೆ ಗೇಟ್ಸ್ ಹೇಳಿದ್ದೇನು?
ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೈನ್ ಜೊತೆ ತಾವು ಸಂಬಂಧ ಹೊಂದಿದ್ದರ ಕುರಿತಂತೆ ಮೈಕ್ರೊಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಅವರು ಫೆಬ್ರುವರಿಯಲ್ಲಿ ತಮ್ಮ ಒಡೆತನದ ಗೇಟ್ಸ್ ಫೌಂಡೇಷನ್ ಸಿಬ್ಬಂದಿಯ ಕ್ಷಮೆ ಕೋರಿದ್ದರು.
'ಎಪ್‌ಸ್ಟೈನ್ ಜೊತೆ ಸಂಬಂಧ ಹೊಂದಿದ್ದರೂ ನಾನು ಯಾವುದೇ ಅಕ್ರಮ ಎಸಗಿಲ್ಲ ಎಂಬುದಾಗಿಯೂ ಗೇಟ್ಸ್ ಹೇಳಿದ್ದಾರೆ' ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು.
'ನನಗೆ ರಷ್ಯಾದ ಇಬ್ಬರು ಮಹಿಳೆಯರೊಂದಿಗೆ ಸ್ನೇಹಸಂಬಂಧ ಇತ್ತು. ಇದನ್ನು ಎಪ್‌ಸ್ಟೈನ್ ಪತ್ತೆ ಮಾಡಿದ್ದ. ಈ ವಿಚಾರ ಗೇಟ್ಸ್ ಫೌಂಡೇಷನ್‌ನ ಕಾರ್ಯದ ಮೇಲೆ ಪರಿಣಾಮ ಬೀರಿತ್ತು. ಆದರೆ, ಎಪ್‌ಸ್ಟೈನ್ ಮಾಡಿದ್ದ ಅಪರಾಧಗಳಲ್ಲಿ ನಾನು ಭಾಗಿಯಾಗಿರಲಿಲ್ಲ' ಎಂದು ಗೇಟ್ಸ್ ಅವರು ನಿಯತಕಾಲಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹೇಳಿದ್ದರು.
'ಎಪ್‌ಸ್ಟೈನ್ ಜೊತೆ ಕಾಲಕಳೆದದ್ದು ಹಾಗೂ ಆತನೊಂದಿಗೆ ಫೌಂಡೇಷನ್ ಸಿಬ್ಬಂದಿಯ ಸಭೆ ನಡೆಸಿದ್ದು ನಾನು ಮಾಡಿದ ದೊಡ್ಡ ತಪ್ಪು' ಎಂದಿದ್ದರು.

