ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಸ್ವಪಕ್ಷದ ಶಾಸಕರು ಮತ್ತು ಸಂಸದರ ದಿಢೀರ್ ಬಂಡಾಯ ಹಾಗೂ ಸರಣಿ ವಲಸೆಯಿಂದ ಕಂಗೆಟ್ಟಿರುವ ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರ ರಕ್ಷಣೆಗೆ ಈಗ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಧಾವಿಸಿದ್ದಾರೆ.
ದೆಹಲಿಯ 10 ಜನಪಥ್ ನಿವಾಸದಲ್ಲಿ ಮಂಗಳವಾರ ನಡೆದ ರಹಸ್ಯ ಉನ್ನತ ಮಟ್ಟದ ಮಾತುಕತೆಯಲ್ಲಿ, ಬಿಜೆಪಿ ವಿರುದ್ಧದ ಹೋರಾಟವನ್ನು ಬಲಪಡಿಸಲು ಮತ್ತು ನಿಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಜೊತೆ ಕೈಜೋಡಿಸಿ ಎಂದು ಸೋನಿಯಾ ಗಾಂಧಿ ಅವರು ಮಮತಾ ಬ್ಯಾನರ್ಜಿ ಅವರಿಗೆ ರಾಜಕೀಯ ಮಂತ್ರ ಬೋಧಿಸಿದ್ದಾರೆ.
ಬಂಗಾಳ ವಿಧಾನಸಭೆ ಚುನಾವಣೆಯ ಹೀನಾಯ ಸೋಲು ಮತ್ತು ಟಿಎಂಸಿ ಪಕ್ಷದ ಒಳಗಡೆ ಸೃಷ್ಟಿಯಾಗಿರುವ ಭೀಕರ ರಾಜಕೀಯ ಬಿರುಗಾಳಿಯ ನಡುವೆ ಈ ಇಬ್ಬರು ಮಹಿಳಾ ನಾಯಕಿಯರು ಮುಚ್ಚಿದ ಕೋಣೆಯಲ್ಲಿ ಮಹತ್ವದ ಆಂತರಿಕ ಚರ್ಚೆ ನಡೆಸಿರುವುದು ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
"ಹಳೇ ಜಗಳ ಮರೆತು ಒಂದಾಗಿ": ದೀದಿ ನಿಲುವಿನಲ್ಲಿ ದಿಢೀರ್ ಬದಲಾವಣೆ!
ಇತ್ತೀಚಿನ ಲೋಕಸಭೆ ಚುನಾವಣೆಯ ಬಳಿಕ ಕಾಂಗ್ರೆಸ್ ಪಕ್ಷದ ನಾಯಕತ್ವ ಗುಣವನ್ನು ಬಹಿರಂಗವಾಗಿ ಪ್ರಶ್ನಿಸಿದ್ದ ಮಮತಾ, ತಾವೇ ವಿಪಕ್ಷಗಳ ಒಕ್ಕೂಟದ ಸಾರಥ್ಯ ವಹಿಸಲು ಹವಣಿಸುತ್ತಿದ್ದರು. ಆದರೆ, ಬಂಗಾಳದಲ್ಲಿ ಪ್ರಸ್ತುತ ತಮ್ಮದೇ ಪಕ್ಷ ಇಬ್ಬಾಗವಾಗುವ ಭೀತಿ ಎದುರಾಗುತ್ತಿದ್ದಂತೆ ದೀದಿ ಸಂಪೂರ್ಣವಾಗಿ ಮಣಿದಿದ್ದಾರೆ. ದೆಹಲಿಯಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಮಾತನಾಡಿದ್ದ ದೀದಿ, ನಾವೆಲ್ಲರೂ ಹಿಂದಿನ ಕಹಿ ನೆನಪುಗಳು ಮತ್ತು ಪರಸ್ಪರ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಿನಿಂದ ಹೋರಾಡಬೇಕು. ಯಾವುದೇ ಕಾರಣಕ್ಕೂ ವಿಪಕ್ಷಗಳ ನಾಯಕರು ಸಾರ್ವಜನಿಕವಾಗಿ ಪರಸ್ಪರ ಟೀಕೆ ಮಾಡಿಕೊಳ್ಳಬಾರದು ಎಂದು ಮೈತ್ರಿ ಧರ್ಮದ ಜಪ ಮಾಡಿದ್ದಾರೆ.
ಈ ಹಿಂದೆ ಕಾಂಗ್ರೆಸ್‌ನಿಂದ ದೂರ ಸರಿದು ಪ್ರತ್ಯೇಕ ರಾಜಕೀಯ ಅಸ್ತಿತ್ವ ಕಂಡುಕೊಳ್ಳಲು ಯತ್ನಿಸುತ್ತಿದ್ದ ಮಮತಾ, ಈಗ ಅದೇ ಕಾಂಗ್ರೆಸ್ ಅನ್ನು ವಿಪಕ್ಷಗಳ ಒಕ್ಕೂಟದ ಮುಖ್ಯ ನಾಯಕ ಎಂದು ಒಪ್ಪಿಕೊಳ್ಳಲು ಸಿದ್ಧರಾಗಿದ್ದಾರೆ. ಆದರೆ, ಕಾಂಗ್ರೆಸ್ ಕೂಡ ಪ್ರಾದೇಶಿಕ ಮಿತ್ರಪಕ್ಷಗಳನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂಬ ಷರತ್ತನ್ನು ಒಕ್ಕೂಟದ ಮುಂದೆ ಇಡಲಾಗಿದೆ.
ವಿಲೀನವಿಲ್ಲ, ಕೇವಲ ರಾಜಕೀಯ ಬೆಂಬಲ: ಸೋನಿಯಾ ಗಾಂಧಿ ತಂತ್ರ
ಇತ್ತೀಚೆಗಷ್ಟೇ ಟಿಎಂಸಿ ಪಕ್ಷದ ಪ್ರಮುಖ ನಾಯಕಿ ಶತಬ್ದಿ ರಾಯ್ ಸೇರಿದಂತೆ ಹಲವು ಸಂಸದರು ಬಂಡಾಯವೆದ್ದು ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ ಬೆಂಬಲ ಘೋಷಿಸಿದ ಬೆನ್ನಲ್ಲೇ ಈ ಸಭೆ ನಡೆದಿರುವುದು ಆಯಕಟ್ಟಿನದ್ದಾಗಿದೆ. ಮೂಲಗಳ ಪ್ರಕಾರ, ಕಾಂಗ್ರೆಸ್ ಮತ್ತು ಟಿಎಂಸಿ ಪಕ್ಷಗಳು ಒಂದಾಗುತ್ತಿಲ್ಲ. ಬದಲಿಗೆ, ಸಂಸತ್ತಿನ ಒಳಗಡೆ ಮತ್ತು ಹೊರಗಡೆ ಪರಸ್ಪರ ರಾಜಕೀಯವಾಗಿ ಗಟ್ಟಿಯಾಗಿ ಬೆಂಬಲ ನೀಡಲು ಉಭಯ ನಾಯಕಿಯರು ಒಪ್ಪಂದ ಮಾಡಿಕೊಂಡಿದ್ದಾರೆ.
ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ತಕ್ಷಣವೇ ಮಮತಾ ಅವರು ತಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸಕ್ಕೆ ತೆರಳಿ, ಪಕ್ಷದ ಮುಂದಿನ ರಕ್ಷಣಾತ್ಮಕ ತಂತ್ರಗಳ ಕುರಿತು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಬಂಡಾಯಗಾರರ ಆಟಕ್ಕೆ ಬ್ರೇಕ್ ಹಾಕಲು ಸೋನಿಯಾ ಗಾಂಧಿ ಕೊಟ್ಟ ಐಡಿಯಾಗಳು ವರ್ಕೌಟ್ ಆಗಲಿವೆಯೇ ಎಂಬುದನ್ನು ಕಾದು ನೋಡಬೇಕಿದೆ.

