ಭೋಪಾಲ್: ರೂಪದರ್ಶಿ ಹಾಗೂ ನಟಿ ತ್ವಿಶಾ ಶರ್ಮ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿರುವ ಆಕೆಯ ಅತ್ತೆ ಗಿರಿಬಾಲಾ ಸಿಂಗ್ ಅವರಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಂಬಂಧಿತ ಅಧಿಕಾರಿಯನ್ನು ಆಡಳಿತಾತ್ಮಕ ವಿಭಾಗಕ್ಕೆ ವರ್ಗಾಯಿಸಲಾಗಿದೆ.
ಆದರೆ, ಗಿರಿಬಾಲಾ ಸಿಂಗ್ ಅವರಿಗೆ ಯಾವುದೇ ರೀತಿಯ ರಾಜಾತಿಥ್ಯ ನೀಡಲಾಗಿಲ್ಲ ಎಂದು ಭೋಪಾಲ್ ಜೈಲು ಅಧೀಕ್ಷಕ ರಾಕೇಶ್ ಭಾಂಗ್ರೆ ಸ್ಪಷ್ಟಪಡಿಸಿದ್ದಾರೆ.
ತ್ವಿಶಾ ಶರ್ಮ ಸಾವಿನ ಪ್ರಕರಣದಲ್ಲಿ ಗಿರಿಬಾಲಾ ಸಿಂಗ್ ಹಾಗೂ ಅವರ ಪುತ್ರ ಸಮರ್ಥ್ ಸಿಂಗ್ ಅವರನ್ನು ಸಿಬಿಐ ಬಂಧಿಸಿತ್ತು. ಕಸ್ಟಡಿ ವಿಚಾರಣೆ ಪೂರ್ಣಗೊಂಡ ಬಳಿಕ ಇಬ್ಬರನ್ನೂ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಜೈಲಿಗೆ ಬಂದ ಬಳಿಕ ಗಿರಿಬಾಲಾ ಸಿಂಗ್ ಅವರನ್ನು ಸಾಮಾನ್ಯವಾಗಿ ಅಸ್ವಸ್ಥ ಅಥವಾ ಗರ್ಭಿಣಿ ಮಹಿಳೆಯರಿಗೆ ಮೀಸಲಾಗಿರುವ ವಾರ್ಡ್ ನಲ್ಲಿ ಇರಿಸಲಾಗಿತ್ತು. ಸಮರ್ಥ್ ಸಿಂಗ್ ಅವರ ಕಾಲಿಗೆ ಗಾಯವಾಗಿದ್ದ ಕಾರಣ ಅವರನ್ನು ವೈದ್ಯಕೀಯ ವಾರ್ಡ್ಗೆ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರಿಗೂ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
ಗಿರಿಬಾಲಾ ಸಿಂಗ್ ಅವರನ್ನು ಜೈಲು ಆವರಣದೊಳಗೆ ವಾಹನದಲ್ಲಿ ಕರೆದೊಯ್ಯಲಾಗುತ್ತಿದೆ ಹಾಗೂ ಸಾಮಾನ್ಯ ಕೈದಿಗಳಿಂದ ಪ್ರತ್ಯೇಕವಾಗಿ ಇರಿಸಲಾಗಿದೆ ಎಂಬ ವರದಿಗಳೂ ಪ್ರಕಟವಾಗಿದ್ದವು. ಇದರಿಂದ ಅವರ ಜೈಲುವಾಸ ಆರಂಭದಿಂದಲೇ ವಿವಾದಕ್ಕೆ ಕಾರಣವಾಗಿತ್ತು.
ಈ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ಜೈಲು ಅಧೀಕ್ಷಕ ಭಾಂಗ್ರೆ, 'ಕೈದಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುವುದಿಲ್ಲ. ಗಿರಿಬಾಲಾ ಸಿಂಗ್ ಅವರನ್ನು ಇರಿಸಲಾಗಿರುವುದು ವೈದ್ಯಕೀಯ ವಾರ್ಡ್ ಅಲ್ಲ. ಅವರನ್ನು ಪ್ರತ್ಯೇಕ ವಾರ್ಡ್ನಲ್ಲಿ ಇರಿಸಬೇಕು ಎಂಬ ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಲಾಗುತ್ತಿದೆ. ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಂಬಂಧಿತ ಅಧಿಕಾರಿಯನ್ನು ವರ್ಗಾಯಿಸಲಾಗಿದೆ' ಎಂದು ತಿಳಿಸಿದ್ದಾರೆ.

