ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಜೈರಾಮ್ ರಮೇಶ್, ಸಚಿನ್ ಪೈಲಟ್, ಭೂಪೇಶ್ ಬಘೇಲ್ ಸೇರಿದಂತೆ ಹಲವು ನಾಯಕರು ಈ ವಿಚಾರವಾಗಿ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಲು ಕಚೇರಿಗೆ ತೆರಳಿದ್ದರು. ಆದರೆ, ಪೂರ್ವಾನುಮತಿ ಇಲ್ಲ ಎಂಬ ಕಾರಣ ನೀಡಿ ಅವರಿಗೆ ಕಚೇರಿಯೊಳಗೆ ಪ್ರವೇಶ ನೀಡಲಿಲ್ಲ ಎಂದು ತಿಳಿಸಲಾಯಿತು.
ಇದರಿಂದ ಆಕ್ರೋಶಗೊಂಡ ನಾಯಕರು ಚುನಾವಣಾ ಆಯೋಗದ ಕಚೇರಿ ಎದುರು ಧರಣಿ ನಡೆಸಿದರು. ಬಳಿಕ, ಬುಧವಾರ ಮಧ್ಯಾಹ್ನ 12 ಗಂಟೆಗೆ ಕಾಂಗ್ರೆಸ್ ನಿಯೋಗವನ್ನು ಭೇಟಿ ಮಾಡಲು ಚುನಾವಣಾ ಆಯೋಗ ಒಪ್ಪಿಗೆ ನೀಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ತಿರಸ್ಕರಿಸಿದ್ದಾರೆ ಎಂದು ವಿಧಾನಸಭೆಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಮೂರನೇ ರಾಜ್ಯಸಭಾ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಮಹೇಶ್ ಕೆವಾಟ್, ನಟರಾಜನ್ ಅವರು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ ಎಂದು ಆರೋಪಿಸಿ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ನಾಮಪತ್ರವನ್ನು ಪರಿಶೀಲಿಸಿದ ಚುನಾವಣಾಧಿಕಾರಿ ಅದನ್ನು ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

