HEALTH TIPS

ಅಮೆರಿಕ ಕೈಯಿಂದಲೇ ಇಸ್ರೇಲ್ ದಮನಕ್ಕೆ ಇರಾನ್ ಕಾರ್ಯತಂತ್ರ

 ಅಮೆರಿಕದೊಂದಿಗೆ ಯುದ್ಧ ಪ್ರಾರಂಭವಾಗಿ ಸುಮಾರು ನಾಲ್ಕು ತಿಂಗಳು ಕಳೆದರೂ ಶಾಂತಿ ಮಾತುಕತೆಗಳು ಅಂತಿಮ ಹಂತಕ್ಕೆ ಬಂದಿಲ್ಲ. ಯುದ್ಧದಿಂದ ಇರಾನ್‌ನಲ್ಲಿ ಆರ್ಥಿಕ ಬಿಕ್ಕಟ್ಟು ಕಾಣಿಸಿಕೊಂಡಿದೆ. ಇಷ್ಟಿದ್ದರೂ ದಕ್ಷಿಣ ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿಗೆ ಇರಾನ್‌ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಿದೆ.


ಇದು ಮತ್ತೊಂದು ಯುದ್ಧಕ್ಕೆ ಇರಾನ್‌ ಪ್ರಚೋದಿಸುತ್ತಿದೆಯಾ? ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಇಸ್ರೇಲ್‌ ಮೇಲೆ ಇರಾನ್‌ ದಾಳಿ ನಡೆಸಿರುವುದು ಯುದ್ಧವನ್ನು ಪ್ರಚೋದಿಸುವ ಒಂದು ಬೇಜವಾಬ್ದಾರಿ ನಡೆಯಂತೆ ಜಗತ್ತಿಗೆ ಕಾಣಿಸಬಹುದು. ಆದರೆ, ಇರಾನ್‌ ಪಾಲಿಗೆ ಇದು ತುಂಬಾ ಪ್ರಮುಖವಾದ ಕಾರ್ಯತಂತ್ರವಾಗಿದೆ ಎನ್ನುತ್ತಾರೆ ವಿದೇಶಾಂಗ ನೀತಿ ಚಿಂತಕರ ಚಾವಡಿ 'ಡಾನ್‌'ನ ಮುಖ್ಯಸ್ಥ ಒಮಿಡ್ ಮೆಮಾರಿಯನ್.

'ಇರಾನ್ ತನ್ನ ಶಕ್ತಿಯನ್ನು ಪ್ರದರ್ಶಿಸಲು ಬಯಸುತ್ತದೆ ಮತ್ತು ಯುದ್ಧವನ್ನು ತೀವ್ರಗೊಳಿಸುವ ಶಕ್ತಿ ತನಗಿದೆ ಎಂಬುದನ್ನು ತೋರಿಸಲು ಇಚ್ಛಿಸುತ್ತದೆ. ಅಗತ್ಯವಿದ್ದರೆ ಯುದ್ಧವನ್ನು ಪುನರಾರಂಭಿಸಲು ತಾವು ಸಿದ್ಧರಾಗಿದ್ದೇವೆ ಎಂಬ ಸಂದೇಶವನ್ನು ರವಾನಿಸುತ್ತಿದೆ' ಎಂದು ಅವರು ಹೇಳಿದ್ದಾರೆ.

ಈಗ ಹತ್ಯೆಯಾಗಿರುವ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಆಡಳಿತಾವಧಿಯಲ್ಲಿ ಇರಾನ್‌ ಮೇಲೆ ಹಲವು ರೀತಿಯಲ್ಲಿ ದಾಳಿಗಳು ನಡೆದಿದ್ದವು. ಇಷ್ಟಾದರು ಇಸ್ರೇಲ್‌ ಮೇಲಾಗಲಿ, ಅಮೆರಿಕ ವಿರುದ್ಧವಾಗಲಿ ಪ್ರತಿದಾಳಿ ಮಾಡಲು ಇರಾನ್‌ ಹಿಂದೇಟು ಹಾಕುತ್ತಿತ್ತು. ಪ್ರಮುಖ ಸೇನಾ ನಾಯಕ ಖಾಸಿಂ ಸೊಲೈಮಾನಿ ಅವರನ್ನು ಅಮೆರಿಕ ಹತ್ಯೆ ಮಾಡಿದಾಗಲೂ ಸೀಮಿತ ದಾಳಿ ನಡೆಸುವ ಮೂಲಕ ಇರಾನ್‌ ಸುಮ್ಮನಾಗಿತ್ತು. ಕಳೆದ ವರ್ಷ ಜೂನ್‌ನಲ್ಲಿ ನಡೆದ 12 ದಿನಗಳ ಯುದ್ಧದ ಸಮಯದಲ್ಲಿ ಕತಾರ್‌ನಲ್ಲಿರುವ ಒಂದೇ ಒಂದು ಅಮೆರಿಕದ ಸೇನಾ ನೆಲೆಯ ಮೇಲಿನ ದಾಳಿಗೆ ತನ್ನ ಸಂಪೂರ್ಣ ಪ್ರತಿಕ್ರಿಯೆಯನ್ನು ಸೀಮಿತಗೊಳಿಸಿತ್ತು.

ಲೆಬನಾನ್‌ನಲ್ಲಿ ತನ್ನ ಮಿತ್ರ ಸಂಘಟನೆ ಹಿಜ್ಬುಲ್ಲಾ ಗುರಿಯಾಗಿಸಿಕೊಂಡು ಇಸ್ರೇಲ್‌ ರಕ್ತದೋಕುಳಿಯನ್ನು ಹರಿಸುತ್ತಿದ್ದರೂ ಇರಾನ್‌ ಸಂಯಮ ಕಾಪಾಡಿಕೊಂಡಿತ್ತು. ಇಸ್ರೇಲ್‌ ದಾಳಿಯನ್ನು ಕಟುವಾಗಿ ಟೀಕಿಸಿದ್ದ ಇರಾನ್‌, ಏಪ್ರಿಲ್‌ನಲ್ಲಿ ನಡೆದ ಕದನ ವಿರಾಮ ಒಪ್ಪಂದದಲ್ಲಿ ಲೆಬನಾನ್‌ ಅನ್ನು ಸೇರಿಸಿಕೊಳ್ಳುವಂತೆ ಅಮೆರಿಕಕ್ಕೆ ಒತ್ತಾಯಿಸಿತ್ತು. ಅದಾಗ್ಯೂ ಇದ್ಯಾವುದಕ್ಕೂ ಇರಾನ್‌ ಆಕ್ರಮಣಕಾರಿ ಪ್ರತಿಕ್ರಿಯೆ ನೀಡಿರಲಿಲ್ಲ.

ಆದರೆ, ಯಾವಾಗ ಇಸ್ರೇಲ್‌ ತನ್ನ ದಾಳಿಯನ್ನು ರಾಜಧಾನಿ ಬೈರೂತ್‌ನಿಂದ ದಕ್ಷಿಣ ಲೆಬನಾನ್‌ಗೆ ವಿಸ್ತರಿಸಿತೊ, ಆಗ ಇಸ್ರೇಲ್‌ ವಿರುದ್ಧ ಆಕ್ರಮಣಕಾರಿ ದಾಳಿಗೆ ಇರಾನ್‌ ಮುಂದಾಗಿದೆ.

ದಕ್ಷಿಣ ಲೆಬನಾನ್‌ ಹಿಜ್ಬುಲ್ಲಾ ಸಂಘಟನೆಯ ಭದ್ರಕೋಟೆಯಾಗಿದೆ. ಅಲ್ಲಿ ಅವರ ಪ್ರಭಾವವೂ ಹೆಚ್ಚಿದೆ. ಈ ಭಾಗದ ಮೇಲೆ ದಾಳಿ ನಡೆಸದಂತೆ ಈಗಾಗಲೇ ಇಸ್ರೇಲ್‌ಗೆ ಇರಾನ್‌ ಎಚ್ಚರಿಸಿತ್ತು. ಒಂದು ವೇಳೆ ದಾಳಿ ನಡೆಸಿದರೆ, ತನ್ನ ಲೆಕ್ಕಾಚಾರ ಬದಲಾಗಲಿದೆ ಎಂದೂ ಹೇಳಿತ್ತು. ಎಚ್ಚರಿಕೆಯ ನಡುವೆಯು ಭಾನುವಾರ ಇಸ್ರೇಲ್‌ ದಕ್ಷಿಣ ಲೆಬನಾನ್‌ ಮೇಲೆ ದಾಳಿ ನಡೆಸಿತ್ತು.

ಅಮೆರಿಕದೊಂದಿಗೆ ನಡೆಯುತ್ತಿರುವ ಮಾತುಕತೆಗಳನ್ನು ಲೆಕ್ಕಿಸದ ಇರಾನ್‌, ಇಸ್ರೇಲ್‌ ಮೇಲೆ ಆಕ್ರಮಣಕಾರಿಯಾಗಿ ದಾಳಿ ನಡೆಸಿತ್ತು. ಆ ಮೂಲಕ ತನ್ನ ಮಿತ್ರರನ್ನು ರಕ್ಷಿಸುವಲ್ಲಿ ತಾನು ಸದಾ ಸಿದ್ದ ಎಂಬ ಸಂದೇಶವನ್ನು ಇರಾನ್‌ ರವಾನಿಸಿದೆ.

2024ರಲ್ಲಿ ಹಿಜ್ಬುಲ್ಲಾ ಸಂಘಟನೆಯನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದ್ದು, ಈ ದಾಳಿಯ‌ಲ್ಲಿ ಅದರ ನಾಯಕ ಹಸನ್‌ ನಸ್ರಲಾ ಹತ್ಯೆಯಾಗಿದ್ದರು. ಆದರೆ, ಇರಾನ್‌ನ ಹಿಂದಿನ ನಾಯಕತ್ವವು ಇದರಿಂದ ದೂರ ಉಳಿದಿತ್ತು. ಇದು ಇರಾನ್‌ನ ನಿಲುವಿಗೆ ಧಕ್ಕೆ ಉಂಟು ಮಾಡಿತ್ತು.

ಹೊಸ ಆಡಳಿತ-ಹೊಸ ಕಾರ್ಯತಂತ್ರ:

ಇದೇ ವರ್ಷ ಫೆಬ್ರುವರಿಯಲ್ಲಿ ಅಮೆರಿಕ-ಇಸ್ರೇಲ್‌ ಜಂಟಿ ದಾಳಿಯಲ್ಲಿ ಸರ್ವೋಚ್ಚ ನಾಯ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಇರಾನ್‌ನ ಪ್ರಮುಖ ನಾಯಕರು ಹತ್ಯೆಯಾಗಿದ್ದರು. ಇದರ ಬೆನ್ನಲ್ಲೇ ತನ್ನ ಶತ್ರುಗಳ ವಿರುದ್ಧ ಇರಾನ್‌ ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸಲು ಪ್ರಾರಂಭಿಸಿತ್ತು. ಇದರಲ್ಲಿ ಯಶಸ್ಸು ಖಂಡಿರುವುದಾಗಿಯೂ ಇರಾನ್‌ ನಂಬಿದೆ.

ಹೊರ್ಮುಜ್‌ ಜಲಸಂಧಿಗೆ ದಿಗ್ಭಂಧನ, ಅಮೆರಿಕದ ಸೇನಾ ನೆಲೆಗಳಿಗೆ ನೆಲ ಕೊಟ್ಟ ತನ್ನ ನೆರೆಹೊರೆ ರಾಷ್ಟ್ರಗಳ ಮೇಲೆ ದಾಳಿಯು ಈ ಯುದ್ಧದಲ್ಲಿ ಜಗತ್ತಿನ ದೊಡ್ಡಣ್ಣನನ್ನು ಕೈಕಟ್ಟಿಸಲು ಸಾಧ್ಯವಾಗಿದೆ ಎಂಬ ವಿಷಯವು ಇರಾನ್‌ನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

ತಮ್ಮ ಆಕ್ರಮಣಕಾರಿ ಕಾರ್ಯತಂತ್ರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಸ್ಪಂದಿಸುತ್ತಿರುವುದನ್ನು ಇರಾನ್‌ ಹೊಸ ನಾಯಕತ್ವ ಕಂಡುಕೊಂಡಿದೆ. ಕಳೆದ ವಾರ ಬೈರೂತ್ ಮೇಲೆ ದಾಳಿ ಮಾಡದಂತೆ ಇಸ್ರೇಲ್‌ಗೆ ಟ್ರಂಪ್‌ ತಾಕೀತು ಮಾಡಿದ್ದಲ್ಲದೇ, ಪ್ರಧಾನಿ ಬೆಂಜಮಿನ್ ನೆತನ್ಯಾಹುವನ್ನು ತರಾಟೆಗೆ ತೆಗೆದುಕೊಂಡಿದ್ದರು. ದಕ್ಷಿಣ ಲೆಬನಾನ್‌ ದಾಳಿ ನಂತರ ಇರಾನ್‌-ಇಸ್ರೇಲ್‌ ನಡುವೆ ಮತ್ತೆ ಸಂಘರ್ಷ ಪ್ರಾರಂಭವಾಗಿದ್ದು, ದಾಳಿಯಿಂದ ಹಿಂದೆ ಸರಿಯುವಂತೆಯೂ ಟ್ರಂಪ್‌ ಉಭಯ ದೇಶಗಳಿಗೆ ಕರೆ ನೀಡಿರುವುದನ್ನು ಅದು ಗಮನಿಸಿದೆ.

ಅಮೆರಿಕ-ಇಸ್ರೇಲ್‌ ಸಂಬಂಧ ಪರೀಕ್ಷೆ:

ಇರಾನ್‌ನ ಈ ಆಕ್ರಮಣಕಾರಿ ತಂತ್ರಗಳ ಹಿಂದೆ ಇರುವ ಇನ್ನೊಂದು ಅಂಶವೆಂದರೆ ಅದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವಿನ ಸಂಬಂಧವನ್ನು ಪರೀಕ್ಷಿಸುವ ಅವಕಾಶ.

ಯುದ್ಧದ ವಿಷಯದಲ್ಲಿ ಇಸ್ರೇಲ್‌ ಮತ್ತು ಅಮೆರಿಕದ ನಡುವೆ ಭಿನ್ನಾಭಿಪ್ರಾಯವಿರುವುದನ್ನು ಇರಾನ್‌ ಅರ್ಥ ಮಾಡಿಕೊಂಡಿದೆ. ಅವರುಗಳ(ಟ್ರಂಪ್‌-ನೆತನ್ಯಾಹು) ಉದ್ದೇಶದಲ್ಲಿಯೂ ಅಂತರವಿದೆ ಎನ್ನುವುದು ಈಗ ಜಗಜ್ಜಾಹಿರಾಗಿದೆ. ಇಸ್ರೇಲ್ ಅನ್ನು ನಿಯಂತ್ರಿಸಲು ಟ್ರಂಪ್ ಮೇಲೆ ಒತ್ತಡ ಹೇರಲು ಇರಾನ್‌ ಬಯಸುತ್ತದೆ ಎಂದು ಅವರು ರಾಜಕೀಯ ವಿಶ್ಲೇಷಕರು ವಿಶ್ಲೇಷಿಸಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries