ಕೀವ್ : ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಮಿತ್ರ ರಾಷ್ಟ್ರಗಳ ನಾಯಕರೊಂದಿಗೆ ಲಂಡನ್‌ನಲ್ಲಿ ಮಾತುಕತೆ ನಡೆಸಿದ ಕೆಲವೇ ಗಂಟೆಗಳಲ್ಲಿ, ರಷ್ಯಾ ಪಡೆಗಳು ಉಕ್ರೇನ್ ಮೇಲೆ ದಾಳಿ ನಡೆಸಿವೆ. ಸೋಮವಾರ ರಾತ್ರೋರಾತ್ರಿ ನಡೆದ ದಾಳಿಯಲ್ಲಿ ಗರ್ಭಿಣಿ ಸೇರಿದಂತೆ ಕನಿಷ್ಠ ಮೂವರು ಮೃತಪಟ್ಟಿದ್ದಾರೆ.
ತಮ್ಮ ಪಡೆಗಳಿಂದ ಪ್ರಬಲ ಪ್ರತಿರೋಧ ಎದುರಿಸುತ್ತಿರುವ ರಷ್ಯಾ ಸೇನೆ, ನಾಗರಿಕರನ್ನು ಗುರಿಯಾಗಿಸಿ ದಾಳಿಯನ್ನು ತೀವ್ರಗೊಳಿಸಿದೆ ಎಂದು ಉಕ್ರೇನ್ ಹೇಳಿರುವುದಾಗಿ ಎಎಫ್‌ಪಿ ವರದಿ ಮಾಡಿದೆ.
'ಚುಗುಯಿವ್ ನಗರದಲ್ಲಿ 22 ವರ್ಷದ ಗರ್ಭಿಣಿ ಸೇರಿದಂತೆ ಕನಿಷ್ಠ ಮೂವರು ಮೃತಪಟ್ಟಿದ್ದಾರೆ' ಎಂದು ವಿದೇಶಾಂಗ ಸಚಿವ ಆಂಡ್ರಿ ಸಿಬಿಗಾ ಹೇಳಿದ್ದಾರೆ.
ವಸತಿ ಕಟ್ಟಡಗಳು ಹಾಗೂ ಅಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ತಗುಲಿದ್ದು, ಹೊತ್ತಿ ಉರಿದಿವೆ.
ರಷ್ಯಾ ಸೇನೆ ಪ್ರತಿ ತಿಂಗಳೂ 30,000 ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತಿದೆಯಾದರೂ, ಉಕ್ರೇನ್ ಎದುರು ನಿರೀಕ್ಷಿತ ಯಶಸ್ಸು ಸಾಧಿಸಲು ವಿಫಲವಾಗಿದೆ. ಹಾಗಾಗಿಯೇ, ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ ಎಂದು ಸಿಬಿಗಾ ದೂರಿದ್ದಾರೆ.
ಯುದ್ಧವನ್ನು ಮಾತುಕತೆ ಮೂಲಕ ಕೊನೆಗೊಳಿಸುವ ನಿಟ್ಟಿನಲ್ಲಿ ಮುಖಾಮುಖಿ ಭೇಟಿಯಾಗುವ ಸಂಬಂಧ ಝೆಲೆನ್‌ಸ್ಕಿ ನೀಡಿದ್ದ ಪ್ರಸ್ತಾಪವನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಳೆದವಾರ ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಜಾಗತಿಕ ಸಮುದಾಯ ರಷ್ಯಾ ಮೇಲೆ ಒತ್ತಡ ಹೇರಬೇಕು ಎಂದು ಸಿಬಿಗಾ ಒತ್ತಾಯಿಸಿದ್ದಾರೆ.
ಉಕ್ರೇನ್ ಪ್ರಸ್ತಾವಕ್ಕೆ ಮಿತ್ರ ರಾಷ್ಟ್ರಗಳ ಬೆಂಬಲಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರನ್, ಜರ್ಮನಿ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರು ಝೆಲೆನ್‌ಸ್ಕಿ ಅವರೊಂದಿಗೆ ವಾರಾಂತ್ಯದಲ್ಲಿ ಲಂಡನ್‌ನಲ್ಲಿ ಸಭೆ ಸೇರಿದ್ದರು. ಈ ವೇಳೆ, ರಷ್ಯಾ ಹಾಗೂ ಉಕ್ರೇನ್ ಅಧ್ಯಕ್ಷರ ಮುಖಾಮುಖಿ ಮಾತುಕತೆ ಪ್ರಸ್ತಾವವನ್ನು ಬೆಂಬಲಿಸುವುದಾಗಿ ಭರವಸೆ ನೀಡಿದ್ದರು.

