ನವದೆಹಲಿ: ಕರಾಚಿಯ ಸಿಂಧ್ ರೇಂಜರ್ಸ್ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ತನ್ನ ಕೈವಾಡವಿದೆ ಎಂಬ ಪಾಕಿಸ್ತಾನದ ಆರೋಪವನ್ನು ಭಾರತ ತಳ್ಳಿ ಹಾಕಿದೆ. ಇಂತಹ ಆಧಾರರಹಿತ ಆರೋಪ ಮಾಡುವ ಬದಲು ನಿಮ್ಮ ನೆಲದಲ್ಲಿ ಉಗ್ರರ ನೆಲೆಗಳನ್ನು ನಾಶ ಮಾಡುವತ್ತ ಗಮನ ಹರಿಸಿ ಎಂದು ಹೇಳಿದೆ.
ದಾಳಿಯಲ್ಲಿ ಭಾರತದ ಕೈವಾಡವಿದೆ ಎಂಬ ಪಾಕಿಸ್ತಾನದಿಂದ ಬರುತ್ತಿರುವ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.
ಕರಾಚಿಯಲ್ಲಿ ಶನಿವಾರ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಭಾರತದ ಮೇಲೆ ಆರೋಪ ಮಾಡುತ್ತಿರುವ ಪಾಕಿಸ್ತಾನದ ವರದಿಗಳು ಆಧಾರರಹಿತ. ಪಾಕಿಸ್ತಾನ ಇಂತಹ ಆಧಾರರಹಿತ ಆರೋಪ ಮಾಡುವುದನ್ನು ನಾವು ನೋಡಿದ್ದೇವೆ. ಅವುಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ ಎಂದು ಜೈಸ್ವಾಲ್ ಹೇಳಿದ್ದಾರೆ.
ಪಾಕಿಸ್ತಾನ ಇತರರ ಕಡೆಗೆ ಬೆರಳು ತೋರಿಸುವುದನ್ನು ಬಿಟ್ಟು ತನ್ನ ದೇಶಗೊಳಗೇ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಜಾಲಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪಾಕಿಸ್ತಾನವು ತನ್ನ ಪ್ರದೇಶದ ಭಯೋತ್ಪಾದಕ ಮೂಲಸೌಕರ್ಯದ ವಿರುದ್ಧ ವಿಶ್ವಾಸಾರ್ಹ ಕ್ರಮ ತೆಗೆದುಕೊಳ್ಳುವುದು ಮತ್ತು ಭಯೋತ್ಪಾದನೆಯನ್ನು ರಾಜ್ಯ ನೀತಿಯ ಸಾಧನವಾಗಿ ಅವಲಂಬಿಸುವ ಪ್ರವೃತ್ತಿಯನ್ನು ತೊಡೆದುಹಾಕುವುದು ಉತ್ತಮ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರರು ಹೇಳಿದ್ದಾರೆ.
ಪಾಕಿಸ್ತಾನದ ಅಧಿಕಾರಿಗಳ ಪ್ರಕಾರ, ಶನಿವಾರ ಸಂಜೆ ಕರಾಚಿಯ ಗುಲಿಸ್ತಾನ್ ಎ ಜೌಹರ್ ಪ್ರದೇಶದಲ್ಲಿರುವ ಸಿಂಧ್ ರೇಂಜರ್ಸ್ನ ಭಿಟ್ಟೈ ವಿಂಗ್ ಪ್ರಧಾನ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ.
ದಾಳಿಕೋರರು ಮುಖ್ಯ ದ್ವಾರಕ್ಕೆ ವಾಹನವನ್ನು ಡಿಕ್ಕಿ ಹೊಡೆಸಿ ಒಳನುಗ್ಗಿದ್ದಾರೆ. ಹ್ಯಾಂಡ್ ಗ್ರೆನೇಡ್ಗಳನ್ನು ಎಸೆದಿದ್ದಾರೆ. ಇದರಿಂದಾಗಿ ಹಲವು ಸ್ಫೋಟಗಳು ಸಂಭವಿಸಿವೆ. ಭದ್ರತಾ ಪಡೆಯು ಆರು ಉಗ್ರರನ್ನು ಕೊಂದಿದ್ದು, ಒಬ್ಬನನ್ನು ಸೆರೆಹಿಡಿದಿದೆ. ದಾಳಿಯಲ್ಲಿ ನಾಲ್ವರು ಸೈನಿಕರು ಮೃತಪಟ್ಟಿದ್ದಾರೆ.

