ಕಾಸರಗೋಡು: ಕೇರಳ ಗೆಜೆಟೆಡ್ ಅಧಿಕಾರಿಗಳ ಸಂಘ (ಕೆಜಿಒ) ಜಿಲ್ಲಾ ಸಮ್ಮೇಳನ ಕಾಸರಗೋಡು ಎನ್.ಜಿ.ಓ ಸಂಘದ ಸಭಾಂಗಣದಲ್ಲಿ ಜರುಗಿತು. ಸಂಘಟನೆ ರಾಜ್ಯ ಸಮಿತಿ ಸದಸ್ಯ ಕೆ. ರಾಜನ್ ಸಮಾರಂಭ ಉದ್ಘಾಟಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಎನ್.ಟಿ. ತುಳಸೀಧರನ್ ಅಧ್ಯಕ್ಷತೆ ವಹಿಸಿದ್ದರು. ಎನ್‍ಜಿಓ ಸಂಘದ ಜಿಲ್ಲಾ ಅಧ್ಯಕ್ಷ ಕೆ. ರಂಜಿತ್ ಮಾಣಿಕೋತ್, 'ಫೆಟೋ' ಜಿಲ್ಲಾ ಕಾರ್ಯದರ್ಶಿ ಕೆ. ರಾಜೇಶ್ ಕುಮಾರ್, ಪಿಂಚಣಿದಾರರ ಸಂಘ ಕಾಸರಗೋಡು ಬ್ಲಾಕ್ ಕಾರ್ಯದರ್ಶಿ ರಾಜೇಂದ್ರ ಕುಂಟಾರ್, ಕೆಜಿಒ ರಾಜ್ಯ ಕಾರ್ಯದರ್ಶಿ ಕೆ. ಕೌಶಿಕ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಕೆ. ಕರುಣಾಕರ ಸ್ವಾಗತಿಸಿದರು. ಜಿಲ್ಲಾ ಕೋಶಾಧಿಕಾರಿ ಪಿ. ಬಾಲಸುಬ್ರಹ್ಮಣ್ಯ ವಂದಿಸಿದರು.
ಠರಾವು ಮಂಡನೆ:
ಜುಲೈ 2024 ರಿಂದ ಬಾಕಿ ಉಳಿದಿದ್ದ ವೇತನ ಪರಿಷ್ಕರಣೆಯನ್ನು ಎರಡು ವರ್ಷ ಕಳೆದರೂ ನೀಡಲಾಗಿಲ್ಲ.ಇದು ನೌಕರರಿಗೆ ಮಾಡಿದ ದ್ರೋಹವಾಗಿದ್ದು, ಪಿಣರಾಯಿ ವಿಜಯನ್ ನೇತೃಥ್ವದ ಸರ್ಕಾರದ ಕೊನೆಯ ಅವಧಿಯಲ್ಲಿ ವೇತನ ಪರಿಷ್ಕರಣಾ ಆಯೋಗವನ್ನು ನೇಮಿಸಿ 3 ತಿಂಗಳ ಅವಧಿಯನ್ನು ನೀಡಲಾಗಿತ್ತು, ಆದರೆ ಆಯೋಗವು ತನ್ನ ವರದಿಯನ್ನು ಸಲ್ಲಿಸಿಲ್ಲ ಅಥವಾ ತನ್ನ ಅವಧಿಯನ್ನು ವಿಸ್ತರಿಸಿಲ್ಲ. ಇದರಿಂದ, ವೇತನ ಪರಿಷ್ಕರಣೆಯನ್ನು ಜಾರಿಗೆ ತರಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು, ಬಾಕಿ ತುಟ್ಟಿ ಭತ್ಯೆ ವಿತರಣೆ, ಆಸ್ಪತ್ರೆಗಳಲ್ಲಿ ಲಭ್ಯವಿರುವ ಎಲ್ಲಾ ಚಿಕಿತ್ಸೆಗಳು ಲಭ್ಯವಾಗುವಂತೆ ಮೆಡಿಸೆಪ್ ಯೋಜನೆಯನ್ನು ಪರಿಷ್ಕರಿಸುವುದು ಮತ್ತು ಎನ್‍ಪಿಎಸ್ ಅನ್ನು ಹಿಂಪಡೆಯುವುದು ಮುಂತಾದ ಬೇಡಿಕೆ ಈಡೇರಿಸುವಂತೆ ಠರಾವು ಮಂಡಿಸಲಾಯಿತು.

