ಕಾಸರಗೋಡು: ಶಾಲಾ ವಿದ್ಯಾರ್ಥಿಗಳು ಬೆಳಗ್ಗೆ ಶಾಲೆಗೆ ತೆರಳುವ ಹಾಗೂ ಸಂಜೆ ವಾಪಸಾಗುವ ಕಾಲಾವಧಿಯಲ್ಲಿ ಟಿಪ್ಪರ್ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ವಿದ್ಯಾರ್ಥಿಗಳು ಹಾಗೂ ಶಾಲಾ ವಾಹನಗಳಿಗೆ ಒಂದಷ್ಟು ನೆಮ್ಮದಿ ತಂದುಕೊಳ್ಳುವ ಸಾಧ್ಯತೆಯಿದೆ.
ಬಹುತೇಕ ಟಿಪ್ಪರ್ಗಳು ಕಿವಿಗಡಚಿಕ್ಕುವ ಶಬ್ದದೊಂದಿಗೆ ಹಾರ್ನ್ ಅದುಮುತ್ತಾ ಅತಿಯಾದ ವೇಗದಲ್ಲಿ ಸಂಚರಿಸುವ ಮೂಲಕ ಜನರಲ್ಲಿ ಭೀತಿ ಸೃಷ್ಟಿಸುತ್ತಿರುವುದಾಗಿ ಆರೋಪಿಸಿ ಸಾರ್ವಜನಿಕರು ರಂಗಕ್ಕಿಳಿದಿದ್ದರು. ಬೆಳಗ್ಗೆ ಹಾಗೂ ಸಂಜೆ ವೇಳೆ ಶಾಲಾ ವಾಹನಗಳು ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ನಡೆಸುತ್ತಿದ್ದು, ಟಿಪ್ಪರ್ ಲಾರಿಗಳಿಂದ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತಿದೆ. ಬಹುತೇಕ ಟಿಪ್ಪರ್ ಚಾಲಕರು ಅಜಾಗರೂಕತೆಯಿಂದ ಸಂಚರಿಸುತ್ತಿರುವ ಬಗ್ಗೆ ಶಾಲಾ ವಾಹನ ಚಾಲಕರೂ ದೂರುತ್ತಾರೆ. ಬೆಳಗ್ಗೆ 8ರಿಂದ 10ರ ವರೆಗೆ ಹಾಗೂ ಸಂಜೆ 3ರಿಂದ 5ರ ವರೆಗೆ ಶಿಕ್ಷಣ ಸಂಸ್ಥೆಗಳ ವಾಹನಗಳು ವಿದ್ಯಾರ್ಥಿಗಳ ಸಾಗಾಟದಲ್ಲಿ ನಿರತರಾಗುತ್ತಿದ್ದು, ಈ ರೀತಿ ಅಜಾಗರೂಕತೆಯಿಂದ ಸಂಚಾರ ನಡೆಸುತ್ತಿರುವ ಟಿಪ್ಪರ್ ಲಾರಿಗಳಿಂದ ಅಪಾಯ ಎದುರಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಇಂತಹ ವಾಹನಗಳಿಗೆ ಬೆಳಗ್ಗೆ9ರಿಂದ 10 ಹಾಗೂ ಸಂಜೆ 3.30ರಿಂದ 5ರ ವರೆಗೆ ಟಿಪ್ಪರ್ ಲಾರಿಗಳ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದೆ. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷಾ ಪ್ರಾಧಿಕಾರದ ಸಭೆಯಲ್ಲಿ ಈ ಬಗ್ಗೆಸಮಗ್ರ ಚರ್ಚೆಯೂ ನಡೆದಿತ್ತು. ಟಿಪ್ಪರ್ ಲಾರಿ ಮಾತ್ರವಲ್ಲ ಇತರ ವಾಹನಗಳಿಂದಲೂ ವಿದ್ಯಾರ್ಥಿಗಳು ಅಪಾಯ ಎದುರಿಸುತ್ತಿದ್ದು, ಈಬಗ್ಗೆಯೂ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿ ಬಂದಿತ್ತು.
ಇನ್ನು ಟೊರಸ್ ಲಾರಿಗಳ ಸಂಚಾರ ಒಂದೆಡೆ ಭೀತಿ ಸೃಷ್ಟಿಸುತ್ತಿದ್ದರೆ, ಇನ್ನೊಂದೆಡೆ ಅತಿಯಾದ ಭಾರ ಹೇರಿಕೆಯಿಂದ ರಸ್ತೆಗಳಿಗೆ ಹಾನಿಯುಂಟುಮಾಡುತ್ತಿದೆ. ಚೆರ್ಕಳ-ಕಲ್ಲಡ್ಕ ರಸ್ತೆ ಚೆರ್ಕಳದಿಂದ ಉಕ್ಕಿನಡ್ಕ ವರೆಗೆ ಹೆಚ್ಚು ಹಾನಿಗೀಡಾಗಿದ್ದು, ಭಾರೀ ಹೊಂಡಗಳುಂಟಾಗಿದೆ. ಇದಕ್ಕೆ ಅತಿಯಾದ ಭಾರದೊಂದಿಗೆ ಸಂಚರಿಸುವ ಟೋರಸ್ ಲಾರಿಗಳು ಕಾರಣವಾಗುತ್ತಿರುವುದಾಗಿ ದೂರುಗಳಿವೆ. ಇಂತಹ ಲಾರಿಗಳ ಬಗ್ಗೆ ತಪಾಸಣೆ ನಡೆಸಬೇಕಾದ ಅಧಿಕಾರಿಗಳು ಮೌನಪಾಲಿಸುತ್ತಿರುವುದರಿಂದ ವ್ಯವಸ್ಥೆ ಸಂಪೂರ್ಣ ಬುಡಮೇಲಾಗುತ್ತಿದೆ. ಪ್ರಾದೇಶಿಕ ಸಾರಿಗೆ ಇಲಾಖೆ ಅಧೀನದಲ್ಲಿರುವ ಪೆರ್ಲ ಆರ್ಟಿಓ ಚೆಕ್ಪೋಸ್ಟ್ ಸಂಜೆ 5ರ ವರೆಗೆ ಮಾತ್ರ ಚಟುವಟಿಕೆ ನಡೆಸುತ್ತಿದ್ದು, ನಂತರ ಇಲ್ಲಿನ ಸಿಬ್ಬಂದಿಯನ್ನು ಸಂಚಾರಿ ದಳಕ್ಕೆ ನಿಯೋಜಿಸುತ್ತಿರುವುದರಿಂದ ಮರುದಿನ ಬೆಳಗ್ಗೆ 9ರ ನಂತರವಷ್ಟೆ ಕಚೇರಿ ತೆರೆದುಕೊಳ್ಳುತ್ತಿದೆ. ಈ ಕಾಲಾವಧಿಯಲ್ಲಿ ಚೆಕ್ಪೋಸ್ಟ್ ಮೂಲಕ ಸಾಲುಗಟ್ಟಿ ಅತಿಯಾದ ಭಾರ ಹೇರಿಕೆಯೊಂದಿಗೆ ಟೋರಸ್ ಲಾರಿಗಳು ಸಂಚಾರ ನಡೆಸುತ್ತಿದೆ. ರಾತ್ರಿ ವೇಳೆ ಸಂಚಾರಿದಳದ ವಿಶೇಷ ಸ್ಕ್ವೇಡ್ ಈ ಬಗ್ಗೆ ತಪಾಸಣೆ ನಡೆಸುತ್ತಿರುವುದಾಗಿ ಅಧಿಕಾರಿಗಳು ಹೇಳಿಕೊಳ್ಳುತ್ತಿದ್ದರೂ, ರಸ್ತೆಕಾನೂನು ಉಲ್ಲಂಘಿಸಿ ಸಂಚಾರ ನಡೆಸುವ ಇಂತಹ ವಾಹನಗಳ ಬಗ್ಗೆ ಕ್ರಮ ಕೈಗೊಂಡ ನಿದರ್ಶನ ಕಂಡುಬರುತ್ತಿಲ್ಲ.



