ಆ ಮೂಲಕ ಬದುಕಿನ ಆರಂಭಿಕ ಹಂತದಲ್ಲೇ ಅನೀಮಿಯಾ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಇರುವ ಪ್ರಾಮುಖ್ಯತೆಯನ್ನು ಒಪ್ಪಿಕೊಂಡಿದೆ.
ಸೋಮವಾರ ಹೊಸದಿಲ್ಲಿಯಲ್ಲಿ ನಡೆಯಲಿರುವ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಮಂಡಳಿ (ಸಿಸಿಎಚ್‌ಎಫ್‌ಡಬ್ಲ್ಯು)ಯ 16ನೇ ಸಭೆಯಲ್ಲಿ ಪರಿಷ್ಕೃತ ಕಾರ್ಯತಂತ್ರಕ್ಕಾಗಿ ಕಾರ್ಯನಿರ್ವಹಣಾತ್ಮಕ ಮಾರ್ಗದರ್ಶಿ ಸೂತ್ರಗಳನ್ನು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಬಿಡುಗಡೆಗೊಳಿಸಲಿದ್ದಾರೆ. ನೂತನ ಮಾರ್ಗದರ್ಶಿ ಸೂತ್ರಗಳು ಹೆಚ್ಚು ಸಮಗ್ರತೆ, ತಂತ್ರಜ್ಞಾನ ಆಧಾರಿತ ಹಾಗೂ ಸಾಮುದಾಯಿಕ ಚಾಲಿತ ವಿಧಾನವನ್ನು ಹೊಂದಿರುತ್ತವೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಈ ಅಭಿಯಾನದ ಮಾರ್ಗದರ್ಶಿ ಸೂತ್ರಗಳನ್ನು ಪರಿಷ್ಕರಿಸಲಾಗಿದ್ದು, ಅದರ ಪ್ರಕಾರ ರಕ್ತಹೀನತೆ ನಿವಾರಣೆಗೆ ಫಲಾನುಭವಿ ಗುಂಪುಗಳಿಗೆ ಕಬ್ಬಿಣದ ಪೋಷಕಾಂಶಗಳ ಜೊತೆಗೆ ಆರಂಭಿಕ ಹಂತದಲ್ಲೇ ಪರೀಕ್ಷೆ, ಚಿಕಿತ್ಸಾ ನಿರ್ವಹಣೆ, ಆರೋಗ್ಯಕರ ಆಹಾರ ಸೇವನೆಯ ಪದ್ಧತಿಗಳು, ಡಿಜಿಟಲ್ ಟ್ರ್ಯಾಕಿಂಗ್ ಅಳವಡಿಕೆ ಹಾಗೂ ಸಾಮುದಾಯಿಕ ಪಾಲ್ಗೊಳ್ಳುವಿಕೆ ಇತ್ಯಾದಿಗಳ ಸೇರ್ಪಡೆಗೂ ಗಮನಹರಿಸಲಾಗುವುದು.
ಅನೀಮಿಯಾ ಮುಕ್ತ ಭಾರತ ಅಭಿಯಾನದಲ್ಲಿ ಪ್ರಸಕ್ತ 6-59 ತಿಂಗಳ ಮಕ್ಕಳು, 5-9 ವರ್ಷ ವಯಸ್ಸಿನ ಮಕ್ಕಳು, ಹದಿಹರೆಯದವರು, ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಹಾಗೂ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರು ಒಳಗೊಂಡಿದ್ದಾರೆ. ಇದೀಗ ಈ ಅಭಿಯಾನವನ್ನು ಪರಿಷ್ಕರಿಸುವ ಮೂಲಕ 0-6 ತಿಂಗಳೊಳಗಿನ ನವಜಾತ ಶಿಶುಗಳನ್ನು ಕೂಡ ಈ ಅಭಿಯಾನಕ್ಕೆ ಏಳನೇ ಗುಂಪಾಗಿ ಸೇರ್ಪಡೆಗೊಳಿಸಲಾಗಿದೆ.

