ಜಾಗತಿಕವಾಗಿ ಆರ್ಥಿಕ ಪ್ರಗತಿ, ಯುದ್ಧ, ಭದ್ರತೆ, ಹವಾಮಾನ ಬದಲಾವಣೆ, ಕೃತಕ ಬುದ್ಧಿಮತ್ತೆ (AI) ಹಾಗೂ ಮೂಲಸೌಕರ್ಯ ಸೇರಿದಂತೆ ಇತರೆ ವಿಷಯಗಳನ್ನು ಚರ್ಚಿಸಲು ಪ್ರತಿ ವರ್ಷ ಜಿ7 ಶೃಂಗ ಸಭೆಯನ್ನು ಆಯೋಜಿಸಲಾಗುತ್ತದೆ. ಜಿ7 ಒಕ್ಕೂಟದಲ್ಲಿ ಅಮೆರಿಕ , ಬ್ರಿಟನ್ ,ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ ಹಾಗೂ ಜಪಾನ್ ಇವೆ.
2026 ಜಿ7 ಶೃಂಗ ಸಭೆಯು ಫ್ರಾನ್ಸ್ ದೇಶದ ಎವಿಯಾನ್ನಲ್ಲಿ ನಡೆಯುತ್ತಿದೆ. ಈ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರೆ ಅತಿಥಿ ರಾಷ್ಟ್ರಗಳ ನಾಯಕರುಗಳು ಸಹ ಭಾಗಿಯಾಗಿದ್ದಾರೆ. ಸಭೆಯಲ್ಲಿ ಗಂಭೀರ ವಿಷಯಗಳ ಜೊತೆಗೆ ಟ್ರಂಪ್ ಆದಿಯಾಗಿ ಹಲವು ನಾಯಕರು ಕೆಲವು ವಿಭಿನ್ನ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ
ಅದರಲ್ಲಿಯೂ ವಿಶೇಷವಾಗಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಕೈಗಡಿಯಾರ ಮರೆತರು. ಆಗ ಟ್ರಂಪ್ ತಮಾಷೆ ಮಾಡಿದ್ದಾರೆ. ಮೆಲೋನಿ ಧೂಮಪಾನ ಮಾಡುವುದನ್ನು ಬಿಟ್ಟಿದ್ದೇನೆ ಎಂದು ಹೇಳಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಸಭೆಯಲ್ಲಿ ನಡೆದ ಪ್ರಮುಖ ಹಾಸ್ಯಾತ್ಮಕ ಘಟನೆಗಳ ನೋಟ ಇಲ್ಲಿದೆ.
ಕೈಗಡಿಯಾರ ಮರೆತ ಮ್ಯಾಕ್ರನ್
ಮಧ್ಯಾಹ್ನದ ಭೋಜನದ ನಂತರ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ತಮ್ಮ ಕೈಗಡಿಯಾರವನ್ನು ಊಟದ ಮೇಜಿನ ಮೇಲೆಯೇ ಮರೆತಿದ್ದರು. ಆಗ ಇದನ್ನು ಗಮನಿಸಿದ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ, 'ಎಮ್ಯಾನುಯೆಲ್ ಮ್ಯಾಕ್ರನ್ ತಮ್ಮ ಕೈಗಡಿಯಾರವನ್ನು ಇಲ್ಲಿಯೇ ಬಿಟ್ಟು ಹೋಗಿದ್ದಾರೆ' ಎಂದರು.
ಆಗ ಅಲ್ಲೇ ಇದ್ದ ಅಮೆರಿಕ ಅಧ್ಯಕ್ಷ ಟ್ರಂಪ್ ಹಾಸ್ಯ ಚಟಾಕಿಯೊಂದನ್ನು ಹಾರಿಸಿದರು. 'ಅವರು ಹೇಗೋ ಕೈಗಡಿಯಾರವನ್ನು ಮರೆತು ಬಿಟ್ಟು ಹೋಗಿದ್ದಾರೆ. ಅದನ್ನು ನನಗೆ ಕೊಟ್ಟು ಬಿಡಿ' ಎಂದರು. ಈ ಮಾತಿನಿಂದ ಭೋಜನಾ ಕೂಟಕ್ಕೆ ಸೇರಿದ್ದವರು ಜೋರಾಗಿ ನಕ್ಕರು.
ಮೆಲೋನಿಯ ಧೂಮಪಾನ ಸುದ್ದಿ
ಸಭೆಯ ಸಂದರ್ಭದಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ಜರ್ಮನಿ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಪರಸ್ಪರ ಕುಶಲೋಪರಿ ವಿಚಾರಿಸಿಕೊಳ್ಳುತ್ತಿದ್ದರು. ಇದೇ ಸಂದರ್ಭದಲ್ಲಿ ಚರ್ಚೆಗೆಂದು ಬಳಸುವ ಮೈಕ್ರೋಫೋನ್ ಆನ್ ಆಗಿತ್ತು. ಮೆಲೋನಿ ಎಚ್ಚರಗೊಳ್ಳಲು ಮೂರು ಲೋಟ ಕಾಫಿ ಕುಡಿಯಬೇಕು ಎಂದು ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಸಂಭಾಷಣೆ ಆರಂಭಿಸಿದರು.
ನಂತರ ಮೆಲೋನಿ ಅವರನ್ನು 'ಸಿಗರೇಟ್ ಬೇಕೇ' ಎಂದು ಕೇಳಿದರು. ಆಗ ಮೆಲೋನಿ ಒಂದು ತಿಂಗಳ ಹಿಂದೆಯೇ ಧೂಮಪಾನವನ್ನು ನಿಲ್ಲಿಸಿರುವುದಾಗಿ ಬಹಿರಂಗಪಡಿಸಿದರು.
ಇದರ ಜೊತೆಗೆ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಅವರನ್ನು 'ನೀವು ಯಾವಾಗ ಧೂಮಪಾನವನ್ನು ನಿಲ್ಲಿಸಿದ್ದೀರಿ?' ಎಂದು ಕೇಳಿದ್ದಕ್ಕೆ ಅವರು ಧೂಮಪಾನ ತ್ಯಜಿಸಿ 21 ವರ್ಷಗಳಾಗಿವೆ ಎಂದರು. ಸದ್ಯ ಧೂಮಪಾನದ ಚರ್ಚೆಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಟ್ರಂಪ್ಗೆ ಬೈಸಿಕಲ್ ನೀಡಿದ ಮ್ಯಾಕ್ರಾನ್
ಮುಂದಿನ ವರ್ಷ ನಡೆಯಲಿರುವ 'ಯುಸಿಐ ಸೈಕ್ಲಿಂಗ್ ವಿಶ್ವ ಚಾಂಪಿಯನ್ಶಿಪ್' ಪ್ರಚಾರಕ್ಕಾಗಿ ಮ್ಯಾಕ್ರಾನ್ ಅವರು ಎಲ್ಲಾ ನಾಯಕರಿಗೂ ಬೈಸಿಕಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಗಾಲ್ಫ್ ಆಡುವುದನ್ನು ಹೊರತುಪಡಿಸಿ, ಬೇರೆ ಯಾವುದೇ ಆಟ ಆಡುವುದಿಲ್ಲ. ಹೀಗಾಗಿ ಟ್ರಂಪ್ ಅವರಿಗೆ ಬೈಸಿಕಲ್ ಕೊಟ್ಟಾಗ ನಾಯಕರು ಮುಗುಳುನಗೆ ಬೀರಿದ್ದಾರೆ. ಗ್ರೀನ್ಲ್ಯಾಂಡ್ ಸ್ವಾಧೀನಪಡಿಸಿಕೊಳ್ಳುವ ಕುರಿತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಅವರೊಂದಿಗೆ ಟ್ರಂಪ್ ನಡೆಸಿರುವ ಮಾತುಕತೆ ಚರ್ಚೆಗೆ ಗ್ರಾಸವಾಗಿದೆ.
ಮತ್ತೆ ಮುನ್ನೆಲೆಗೆ ಬಂದ ಮೆಲೋಡಿ
ಜಿ7 ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಾರ್ಜಿಯಾ ಮೆಲೋನಿ ಭೇಟಿಯಾದರು. ಇದೇ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಕೆಲ ದಿನಗಳ ಹಿಂದೆಯಷ್ಟೇ ವ್ಯಾಪಕವಾಗಿ ಹರಿದಾಡುತ್ತಿದ್ದ ಮೋದಿ ಮತ್ತು ಮೆಲೋನಿ ವಿಡಿಯೊವನ್ನು ನೆನಪಿಸಿಕೊಂಡ ಮೆಲೋನಿ, 'ನಾವಿಬ್ಬರು ಈಗ ಇನ್ಸ್ಟಾಗ್ರಾಮ್ನಲ್ಲಿ ಅತ್ಯಂತ ಪ್ರಸಿದ್ಧ ಜೋಡಿ' ಎಂದು ತಮಾಷೆ ಮಾಡಿದ್ದಾರೆ.
ಟ್ರಂಪ್ಗೆ ಟೀ-ಶರ್ಟ್
ಇದೇ ಸಂದರ್ಭದಲ್ಲಿ ಜರ್ಮನಿಯ ಪ್ರಸ್ತುತ ಚಾನ್ಸೆಲರ್ ಫ್ರೆಡ್ರಿಂಕ್ ಮೆರ್ಜ್ ಅವರು ಡೊನಾಲ್ಡ್ ಟ್ರಂಪ್ ಅವರಿಗೆ ವಿಶೇಷ ಟೀ-ಶರ್ಟ್ ನೀಡಿದ್ದಾರೆ. ಫಿಫಾ ವಿಶ್ವಕಪ್ ಗೌರವಾರ್ಥವಾಗಿ ಜರ್ಮನ್ ರಾಷ್ಟ್ರೀಯ ತಂಡದ ಫುಟ್ಬಾಲ್ ಜೆರ್ಸಿಯನ್ನು ಟ್ರಂಪ್ಗೆ ಉಡುಗೊರೆಯಾಗಿ ನೀಡಿದ್ದಾರೆ. ಜೆರ್ಸಿಯ ಹಿಂಭಾಗದಲ್ಲಿ 47 ಎಂಬ ಅಂಕಿ ಅಂಶವನ್ನು ಮುದ್ರಿಸಿದ್ದು, ಇದು ಅಮೆರಿಕದಲ್ಲಿ ಎಷ್ಟನೇ ಅಧ್ಯಕ್ಷ ಎಂಬುದನ್ನು ಸೂಚಿಸುತ್ತದೆ. ಟೀ-ಶರ್ಟ್ ಪಡೆದುಕೊಂಡ ಟ್ರಂಪ್ ಮುಗುಳನಗುತ್ತ ಫೋಟೊಗೆ ತೆಗೆಸಿಕೊಂಡರು.

ಮೋದಿ-ಟ್ರಂಪ್ ಬಾಂಧವ್ಯ
ಸಭೆ ಬಳಿಕ ಎಲ್ಲಾ ನಾಯಕರು ಒಟ್ಟಾಗಿ ತೆಗೆಸಿಕೊಳ್ಳುವ ಕೌಟುಂಬಿಕ ಚಿತ್ರಕ್ಕೆ (Family Photo) ಮುನ್ನ, ಡೊನಾಲ್ಡ್ ಟ್ರಂಪ್ ಅವರು ವೇದಿಕೆಯ ಮೆಟ್ಟಿಲು ಹತ್ತುವಲ್ಲಿ ಗೊಂದಲ ಉಂಟಾಯಿತು. ಆಗ ತಕ್ಷಣ ಪ್ರಧಾನಿ ನರೇಂದ್ರ ಮೋದಿಯವರು ಟ್ರಂಪ್ ಅವರಿಗೆ ಕೈ ನೀಡಿ ಮೆಟ್ಟಿಲು ಹತ್ತಲು ಸಹಾಯ ಮಾಡಿದರು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಇಬ್ಬರು ನಾಯಕರ ನಡುವಿನ ಈ ಆತ್ಮೀಯತೆಯನ್ನು ತೋರುತ್ತದೆ.

