ಐಜ್ವಾಲ್: ವಿಶೇಷ ತೀವ್ರ ಪರಿಷ್ಕರಣೆ (S I R) ಪ್ರಕ್ರಿಯೆ ಪೂರ್ಣಗೊಂಡ ನಂತರ ಮಿಝೋರಾಂನ ಮತದಾರರ ಪಟ್ಟಿಗಳಿಂದ 46,000ಕ್ಕೂ ಅಧಿಕ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೇ 20ರಂದು ಆರಂಭವಾಗಿದ್ದ S I R ಪ್ರಕ್ರಿಯೆಯು ರವಿವಾರ ಮುಕ್ತಾಯಗೊಂಡಿದ್ದು, ಎಲ್ಲ ಎಣಿಕೆ ನಮೂನೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಿಸಲಾಗಿದೆ ಎಂದು ಮಿಝೋರಾಂ ಜಂಟಿ ಮುಖ್ಯ ಚುನಾವಣಾ ಅಧಿಕಾರಿ ಎಥೆಲ್ ರೊಥಾಂಗ್ಪುಯಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಒಟ್ಟು 46,191 ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಪೈಕಿ 21,290 ಮಂದಿ ಮೃತಪಟ್ಟಿದ್ದಾರೆ, 8,352 ಮಂದಿಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ, 13,992 ಮಂದಿ ಇತರ ರಾಜ್ಯಗಳಿಗೆ ಅಥವಾ ವಿದೇಶಗಳಿಗೆ ಖಾಯಂ ಆಗಿ ವಲಸೆ ಹೋಗಿದ್ದಾರೆ ಹಾಗೂ 2,245 ಮಂದಿಯ ದಾಖಲಾತಿಗಳು ನಕಲು ಎಂದು ಕಂಡುಬಂದಿದೆ ಎಂದು ಅವರು ಮಾಹಿತಿ ನೀಡಿದರು.
ಧಾರ್ಮಿಕ ನಂಬಿಕೆಗಳ ಕಾರಣದಿಂದಾಗಿ 312 ಅರ್ಹ ಮತದಾರರು ಹೆಸರು ನೋಂದಾಯಿಸಿಕೊಳ್ಳಲು ಅಥವಾ ಮರುನೋಂದಾಯಿಸಿಕೊಳ್ಳಲು ನಿರಾಕರಿಸಿದ್ದಾರೆ. ಈ ವ್ಯಕ್ತಿಗಳನ್ನು 2025ರ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿತ್ತು ಅಥವಾ ಹಿಂದಿನ ತೀವ್ರ ಪರಿಷ್ಕರಣೆಯ ವೇಳೆ ಅವರ ಸಂಬಂಧಿಕರು ಹೆಸರು ನೋಂದಾಯಿಸಿದ್ದರು ಎಂದು ರೊಥಾಂಗ್ಪುಯಿ ಹೇಳಿದರು.
ಈ ಪರಿಷ್ಕರಣೆಯ ನಂತರ ಮಿಝೋರಾಂನ ಒಟ್ಟು ಮತದಾರರ ಸಂಖ್ಯೆ 8,28,877ಕ್ಕೆ ಇಳಿಕೆಯಾಗಿದೆ. 2025ರ ಮತದಾರರ ಪಟ್ಟಿಯಲ್ಲಿ 8.75 ಲಕ್ಷಕ್ಕೂ ಹೆಚ್ಚು ಮತದಾರರು ದಾಖಲಾಗಿದ್ದರು ಎಂದು ಅವರು ತಿಳಿಸಿದರು.
ಕರಡು ಮತದಾರರ ಪಟ್ಟಿಯನ್ನು ಜುಲೈ 4ರಂದು ಪ್ರಕಟಿಸಲಾಗುವುದು. ಮತದಾರರು ಜುಲೈ 5ರಿಂದ ಆಗಸ್ಟ್ 4ರವರೆಗೆ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು.
ದಕ್ಷಿಣ ಮಿಝೋರಾಂನ ಚಕ್ಮಾ ಬಾಹುಳ್ಯದ ಪ್ರದೇಶಗಳಲ್ಲಿ ಮತದಾರರ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಬೇಕೆಂದು ಪ್ರಭಾವಿ 'ಮಿಜೋ ಝಿರ್ಲಾಯಿ ಪಾಲ್' (ಎಂಝಡ್‌ಪಿ) ವಿದ್ಯಾರ್ಥಿ ಸಂಘಟನೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಸ್‌ಐಆರ್ ನಡೆಸಲಾಗಿದೆ.
ಈ ಪ್ರದೇಶಗಳಲ್ಲಿ ಮತದಾರರ ಸಂಖ್ಯೆಯಲ್ಲಿ ಶೇ.121ರಷ್ಟು ಅಸಹಜ ಹೆಚ್ಚಳವಾಗಿದೆ ಹಾಗೂ 97 ಹೊಸ ಹಳ್ಳಿಗಳು ಕಾಣಿಸಿಕೊಂಡಿವೆ ಎಂದು ವಿದ್ಯಾರ್ಥಿ ಸಂಘಟನೆಯು ಕಳೆದ ವಾರ ಆರೋಪಿಸಿತ್ತು.
ವಿದ್ಯಾರ್ಥಿ ಸಂಘಟನೆ ಎತ್ತಿರುವ ಈ ಕಳವಳಗಳನ್ನು ಚುನಾವಣಾ ಆಯೋಗವು ಪರಿಶೀಲಿಸುತ್ತಿದೆ ಎಂದು ರೊಥಾಂಗ್ಪುಯಿ ತಿಳಿಸಿದ್ದಾರೆ.

