ನವದೆಹಲಿ: ನರೇಗಾ ಯೋಜನೆಯ ಬದಲಾದ ಸ್ವರೂಪವಾದ 'ವಿಬಿ-ಜಿ ರಾಮ್ ಜಿ' ಬಗ್ಗೆ ಹಲವು ರಾಜ್ಯಗಳು ಕಳವಳ ವ್ಯಕ್ತಪಡಿಸಿವೆ. ಮನರೇಗಾ ಸಂವಿಧಾನದ ಉದ್ಯೋಗದ ಹಕ್ಕನ್ನು ಖಾತರಿಪಡಿಸುತ್ತಿತ್ತು. ಆದರೆ, ನೂತನ ಕಾನೂನು 'ಕೇಂದ್ರೀಕರಣ'ವನ್ನು ಖಾತರಿಪಡಿಸುತ್ತದೆ ಮತ್ತು ರಾಜ್ಯಗಳ ಮೇಲಿನ ಆರ್ಥಿಕ ಹೊರೆಯನ್ನು ಹೆಚ್ಚಿಸಲಿದೆ ಎಂದು ಕಾಂಗ್ರೆಸ್ ಭಾನುವಾರ ಆರೋಪಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು, 'ಮೋದಿ ನೇತೃತ್ವದ ಸರ್ಕಾರವು ಹಗೆತನ ಮತ್ತು ಸಂಕುಚಿತ ಮನೋಭಾವವನ್ನು ಹೊಂದಿದೆ. ಗ್ರಾಮೀಣಾಭಿವೃದ್ಧಿ ಕುರಿತ ಸಂಸದೀಯ ಸ್ಥಾಯಿ ಸಮಿತಿ, ರಾಜ್ಯ ಸರ್ಕಾರಗಳು ಅಥವಾ ಸಂಬಂಧಿತ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸದೆ ಮನರೇಗಾ ಯೋಜನೆಯನ್ನು ರದ್ದು ಮಾಡಿದೆ' ಎಂದು 'ಎಕ್ಸ್'ನಲ್ಲಿ ಹೇಳಿದ್ದಾರೆ.
'ವಿಬಿ-ಜಿ ರಾಮ್ ಜಿ ಯೋಜನೆಯು ಜುಲೈ 1ರಿಂದ ಜಾರಿಯಾಗುತ್ತಿದ್ದು, ಈ ಬಗ್ಗೆ ಹಲವು ರಾಜ್ಯಗಳು ಕಳವಳ ವ್ಯಕ್ತಪಡಿಸುತ್ತಿವೆ. ಬಿಜೆಪಿ ಅಧಿಕಾರದಲ್ಲಿ ಇರುವ ಮಧ್ಯಪ್ರದೇಶ, ಬಿಹಾರ, ಉತ್ತರಾಖಂಡ ರಾಜ್ಯಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ' ಎಂದು ತಿಳಿಸಿದ್ದಾರೆ.
'ಇತರೆ ನಾಲ್ಕು ರಾಜ್ಯ ಸರ್ಕಾರಗಳು, ಕೃಷಿ ಚಟುವಟಿಕೆಗಳು ಗರಿಗೆದರಿರುವ ಸಂದರ್ಭದಲ್ಲಿ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಕ್ಕೆ ವಿರೋಧ ವ್ಯಕ್ತಪಡಿಸಿವೆ. ಕನಿಷ್ಠ ಐದು ರಾಜ್ಯಗಳು ಗ್ರಾಮೀಣ ಕೃಷಿ ಕಾರ್ಮಿಕರ ಕೂಲಿ ಹೆಚ್ಚಳಕ್ಕೆ ಒತ್ತಾಯಿಸಿವೆ' ಎಂದಿದ್ದಾರೆ.
'ಗ್ರಾಮೀಣ ಅಭಿವೃದ್ಧಿ ಸಚಿವರ (ಶಿವರಾಜ್ ಸಿಂಗ್ ಚೌಹಾಣ್) ರಾಜ್ಯ ಮಧ್ಯಪ್ರದೇಶವೂ ಮೋದಿ ಸರ್ಕಾರದ ನೂತನ ಯೋಜನೆ ಬಗ್ಗೆ ಕಳವಳ ವ್ಯಕ್ತಪಡಿಸಿದೆ' ಎಂದು ಹೇಳಿದ್ದಾರೆ.

