HEALTH TIPS

SBIಗೆ 1,266.63 ಕೋಟಿ ರೂ. ವಂಚನೆ: 3.66 ಕೋಟಿ ರೂ. ಮೌಲ್ಯದ Zurich ಜೀವ ವಿಮಾ ಪಾಲಿಸಿಗಳನ್ನು ಮುಟ್ಟುಗೋಲು ಹಾಕಿಕೊಂಡ ED

ಭೋಪಾಲ್: SBIಗೆ 1,266.63 ಕೋಟಿ ರೂ. ನಷ್ಟ ಉಂಟುಮಾಡಿದ ಆರೋಪಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ED)ವು 3.66 ಕೋಟಿ ರೂ. ಮೌಲ್ಯದ ಎರಡು ಹೂಡಿಕೆ-ಸಂಬಂಧಿತ ಜೀವ ವಿಮಾ ಪಾಲಿಸಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.

ಭೋಪಾಲ್ ವಲಯ ಕಚೇರಿಯ ED ಅಧಿಕಾರಿಗಳು, ಜ್ಯೂರಿಚ್ ಇಂಟರ್‌ನ್ಯಾಷನಲ್ ಲೈಫ್ ಲಿಮಿಟೆಡ್‌ನಲ್ಲಿ ನಿರ್ವಹಿಸಲಾಗುತ್ತಿದ್ದ ಎರಡು ಜೀವ ವಿಮಾ ಪಾಲಿಸಿಗಳನ್ನು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ), 2002ರ ಸೆಕ್ಷನ್ 5(1)ರ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಪಾಲಿಸಿಗಳ ಒಟ್ಟು ಸರೆಂಡರ್ ಮೌಲ್ಯ 3.66 ಕೋಟಿ ರೂ.ಗಳಾಗಿದೆ.

ಎಂ/ಎಸ್ ಅಡ್ವಾಂಟೇಜ್ ಓವರ್‌ಸೀಸ್ ಪ್ರೈವೇಟ್ ಲಿಮಿಟೆಡ್ (ಎಒಪಿಎಲ್) ಮತ್ತು ಅದರ ಪ್ರವರ್ತಕ ಶ್ರೀಕಾಂತ್ ಭಾಸಿ ವಿರುದ್ಧ ನಡೆಯುತ್ತಿರುವ ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಕೇಂದ್ರೀಯ ತನಿಖಾ ದಳದ (ಸಿಬಿಐ) ಹೊಸದಿಲ್ಲಿಯ ಬ್ಯಾಂಕಿಂಗ್ ಸೆಕ್ಯುರಿಟಿ ಮತ್ತು ಫ್ರಾಡ್ ಬ್ರಾಂಚ್ (ಬಿಎಸ್‌ಎಫ್‌ಬಿ) ದಾಖಲಿಸಿದ್ದ ಎಫ್‌ಐಆರ್ ಆಧರಿಸಿ ED ತನಿಖೆ ಆರಂಭಿಸಿತ್ತು. ವಂಚನೆಯ ಮರ್ಚೆಂಟಿಂಗ್ ವ್ಯಾಪಾರ ವಹಿವಾಟುಗಳ ಮೂಲಕ SBIಗೆ 1,266.63 ಕೋಟಿ ರೂ.ಗಳ ಅಕ್ರಮ ನಷ್ಟ ಉಂಟುಮಾಡಿದ ಆರೋಪದಡಿ ಎಒಪಿಎಲ್, ಅದರ ನಿರ್ದೇಶಕರು ಹಾಗೂ ಕೆಲ ಅಪರಿಚಿತ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಪಿಎಂಎಲ್‌ಎ ಅಡಿಯಲ್ಲಿ ನಡೆಸಿದ ತನಿಖೆಯಲ್ಲಿ, ಎಒಪಿಎಲ್ ಮತ್ತು ಅದರ ಪ್ರವರ್ತಕರು ನಕಲಿ ವ್ಯಾಪಾರ ವಹಿವಾಟುಗಳು, ವೃತ್ತಾಕಾರದ (ಸರ್ಕ್ಯುಲರ್) ವ್ಯವಹಾರಗಳು, ಸುಳ್ಳು ವ್ಯಾಪಾರ ದಾಖಲೆಗಳ ಸೃಷ್ಟಿ ಹಾಗೂ ವಿವಿಧ ದೇಶೀಯ ಮತ್ತು ವಿದೇಶಿ ಸಂಸ್ಥೆಗಳಿಗೆ ಬ್ಯಾಂಕ್ ಹಣವನ್ನು ವರ್ಗಾಯಿಸುವ ಮೂಲಕ ವಂಚನೆಯಿಂದ ಬ್ಯಾಂಕಿಂಗ್ ಸೌಲಭ್ಯಗಳನ್ನು ಪಡೆದಿರುವುದು ಬೆಳಕಿಗೆ ಬಂದಿದೆ ಎಂದು ED ತಿಳಿಸಿದೆ.

ಅಪರಾಧದಿಂದ ಬಂದ ಹಣವನ್ನು ಶ್ರೀಕಾಂತ್ ಭಾಸಿ ನಿಯಂತ್ರಣದಲ್ಲಿರುವ ವಿವಿಧ ಕಂಪೆನಿಗಳ ಮೂಲಕ ಹಲವು ಹಂತಗಳಲ್ಲಿ ವರ್ಗಾಯಿಸಿ, ಭಾರತ ಹಾಗೂ ವಿದೇಶಗಳಲ್ಲಿನ ಚರ ಮತ್ತು ಸ್ಥಿರ ಆಸ್ತಿಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

ತನಿಖೆಯ ವೇಳೆ, ಶ್ರೀಕಾಂತ್ ಭಾಸಿ ಹೆಸರಿನಲ್ಲಿ ಜ್ಯೂರಿಚ್ ಇಂಟರ್‌ನ್ಯಾಷನಲ್ ಲೈಫ್ ಲಿಮಿಟೆಡ್‌ನಲ್ಲಿ ನಿರ್ವಹಿಸಲಾಗುತ್ತಿದ್ದ ಎರಡು ಹೂಡಿಕೆ-ಸಂಬಂಧಿತ ಜೀವ ವಿಮಾ ಪಾಲಿಸಿಗಳನ್ನು ED ಪತ್ತೆಹಚ್ಚಿದೆ. ನಿಗದಿತ ಅಪರಾಧ ನಡೆದ ಅವಧಿಯಲ್ಲೇ ಈ ಪಾಲಿಸಿಗಳನ್ನು ಖರೀದಿಸಿ ನಿರ್ವಹಿಸಲಾಗಿದ್ದು, ವಿದೇಶಿ ಖಾತೆಗಳು ಹಾಗೂ ಭಾಸಿಗೆ ಸಂಬಂಧಿಸಿದ ಸಂಸ್ಥೆಗಳ ಮೂಲಕ ಹಣ ಪಾವತಿಸಲಾಗಿತ್ತು ಎಂದು ED ಹೇಳಿದೆ.

ಇದಲ್ಲದೆ, 2026ರ ಎಪ್ರಿಲ್‌ ನಲ್ಲಿ ಶ್ರೀಕಾಂತ್ ಭಾಸಿ ಅವರು ಎರಡೂ ವಿಮಾ ಪಾಲಿಸಿಗಳನ್ನು ಸರೆಂಡರ್ ಮಾಡಲು ಪ್ರಯತ್ನಿಸಿದ್ದು, ಸರೆಂಡರ್ ಮೊತ್ತವನ್ನು ಭಾರತದಲ್ಲಿರುವ ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಕೋರಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಈ ಹಿನ್ನೆಲೆಯಲ್ಲಿ, ಒಟ್ಟು 3.66 ಕೋಟಿ ರೂ. ಸರೆಂಡರ್ ಮೌಲ್ಯ ಹೊಂದಿರುವ ಈ ಎರಡು ಜೀವ ವಿಮಾ ಪಾಲಿಸಿಗಳನ್ನು ED ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.

ಇದೇ ಪ್ರಕರಣದಲ್ಲಿ ಈ ಹಿಂದೆ ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ದುಬೈನಲ್ಲಿರುವ ಸುಮಾರು 51.70 ಕೋಟಿ ರೂ. ಮೌಲ್ಯದ 9 ಸ್ಥಿರ ಆಸ್ತಿಗಳು ಹಾಗೂ ಸುಮಾರು 111 ಕೋಟಿ ರೂ. ಮೌಲ್ಯದ ಗೃಹ ಆಸ್ತಿಗಳನ್ನು ಸಹ ED ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನಿಗದಿತ ಅಪರಾಧದಿಂದ ಉಂಟಾದ ಆಸ್ತಿಗಳನ್ನು ಪತ್ತೆಹಚ್ಚಿ ಮುಟ್ಟುಗೋಲು ಹಾಕಿಕೊಳ್ಳುವ ಉದ್ದೇಶದಿಂದ ತನಿಖೆ ಮುಂದುವರಿದಿದೆ ಎಂದು ED ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries