HEALTH TIPS

TMC ಬಂಡಾಯ ಸಂಸದರ ವಿಲೀನದಿಂದ ಗಮನ ಸೆಳೆದ NCPI; ಯಾವುದು ಈ ಪಕ್ಷ?

 ನವದೆಹಲಿ: ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) 20 ಬಂಡಾಯ ಸಂಸದರು ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್‌ಸಿಪಿಐ) ಪಕ್ಷದೊಂದಿಗೆ ವಿಲೀನಗೊಂಡಿರುವುದಾಗಿ ಘೋಷಿಸಿದ ನಂತರ, ಇದುವರೆಗೆ ಹೆಚ್ಚು ಪರಿಚಿತವಾಗಿರದ ಈ ಪಕ್ಷವು ರಾಷ್ಟ್ರೀಯ ರಾಜಕೀಯದಲ್ಲಿ ಗಮನ ಸೆಳೆದಿದೆ.


ಲೋಕಸಭೆಯಲ್ಲಿ ಟಿಎಂಸಿ ಸಂಸದರ ಮೂರನೇ ಎರಡರಷ್ಟು ಸಂಖ್ಯೆಯನ್ನು ಹೊಂದಿರುವ ಬಂಡಾಯ ಬಣವು ಎನ್‌ಸಿಪಿಐನಲ್ಲಿ ವಿಲೀನಗೊಂಡಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಹಿನ್ನೆಲೆ ಮತ್ತು ಚಟುವಟಿಕೆಗಳು ಕುತೂಹಲ ಮೂಡಿಸಿದೆ.

ಎನ್‌ಸಿಪಿಐ 2023ರ ಜನವರಿ 20ರಂದು ಚುನಾವಣಾ ಆಯೋಗದಲ್ಲಿ 'ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷ' (ಆರ್‌ಯುಪಿಪಿ) ಆಗಿ ನೋಂದಾಯಿತಗೊಂಡಿತ್ತು. ಪಕ್ಷದ ನೋಂದಾಯಿತ ಕಚೇರಿ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಬನಿಪುರದಲ್ಲಿದೆ.

ಚುನಾವಣಾ ಆಯೋಗದ ದಾಖಲೆಗಳ ಪ್ರಕಾರ, ಶೇವ್ಲಿ ಕುಂಡು ಪಕ್ಷದ ಖಜಾಂಚಿಯಾಗಿದ್ದು, ಪಕ್ಷವು ಇದುವರೆಗೆ 1.13 ಲಕ್ಷ ರೂ. ದೇಣಿಗೆ ಪಡೆದಿದೆ. ಅವರ ಪತಿ ಉತ್ತಿಯ ಕುಂಡು ಪಕ್ಷದ ಅಧ್ಯಕ್ಷರಾಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ನೋಂದಾಯಿತವಾಗಿದ್ದರೂ, ಎನ್‌ಸಿಪಿಐ ತನ್ನ ಮೊದಲ ಚುನಾವಣಾ ಸ್ಪರ್ಧೆಯನ್ನು ತ್ರಿಪುರಾದಲ್ಲಿ ನಡೆಸಿತ್ತು. ತ್ರಿಪುರಾ ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಪರಿಷತ್‌ (ಟಿಟಿಎಎಡಿಸಿ) ವ್ಯಾಪ್ತಿಯ ವಂಚಿತ ಬುಡಕಟ್ಟು ಸಮುದಾಯಗಳನ್ನು ಪ್ರತಿನಿಧಿಸುವ ಉದ್ದೇಶದಿಂದ ಪಕ್ಷವು ಅಲ್ಲಿ ರಾಜಕೀಯ ಪ್ರವೇಶ ಮಾಡಿತ್ತು ಎಂದು ಪಕ್ಷದ ನಾಯಕ ಶಾಂತನು ಡೇ ಹೇಳಿದ್ದಾರೆ.

2023ರ ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿತ್ತು. ಆದರೆ ನಾಲ್ಕು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿದ್ದವು. ಎರಡು ಕ್ಷೇತ್ರಗಳಲ್ಲಿ ಮಾತ್ರ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಚೌಮನು ಕ್ಷೇತ್ರದಲ್ಲಿ 536 ಮತಗಳು ಹಾಗೂ ಕೈಲಾಶಹರ್ ಕ್ಷೇತ್ರದಲ್ಲಿ 286 ಮತಗಳು ಪಕ್ಷಕ್ಕೆ ಲಭಿಸಿದ್ದವು. ಅಂಬಾಸಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೃಷ್ಣಕುಮಾರ್ ದೆಬ್ಬರ್ಮಾ 376 ಮತಗಳನ್ನು ಪಡೆದಿದ್ದರು. ಒಟ್ಟಾರೆ ಎನ್‌ಸಿಪಿಐ 1,198 ಮತಗಳನ್ನು ಗಳಿಸಿತ್ತು.

ತ್ರಿಪುರಾದಲ್ಲಿ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಕೆಲವರು, ಚುನಾವಣೆಯ ಬಳಿಕ ಪಕ್ಷದ ನಾಯಕತ್ವದೊಂದಿಗೆ ಸಂಪರ್ಕ ಕಡಿದುಹೋಗಿತ್ತು ಎಂದು ಹೇಳಿದ್ದಾರೆ. ಕೈಲಾಶಹರ್ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಜಹಾಂಗೀರ್ ಅಲಿ, ಚುನಾವಣೆ ಮುಗಿದ ಬಳಿಕ ಪಕ್ಷದ ನಾಯಕರು ಕಚೇರಿಗಳನ್ನು ಮುಚ್ಚಿ ತೆರಳಿದ್ದು, ಬಳಿಕ ಸಂಪರ್ಕ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಶಾಂತನು ಡೇ ಅವರ ಪ್ರಕಾರ, ತ್ರಿಪುರಾ ಚುನಾವಣೆಯ ಬಳಿಕ ಹಣಕಾಸು ಸೇರಿದಂತೆ ವಿವಿಧ ವಿಷಯಗಳ ಕುರಿತು ಪಕ್ಷದೊಳಗೆ ಭಿನ್ನಾಭಿಪ್ರಾಯಗಳು ಉಂಟಾಗಿದ್ದವು. 2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುವ ಯೋಜನೆಯೂ ಸಂಪನ್ಮೂಲಗಳ ಕೊರತೆಯಿಂದ ಮುಂದುವರಿಯಲಿಲ್ಲ.

ಈಗ ಟಿಎಂಸಿ ಬಂಡಾಯ ಸಂಸದರ ವಿಲೀನದೊಂದಿಗೆ ಎನ್‌ಸಿಪಿಐ ರಾಷ್ಟ್ರೀಯ ರಾಜಕೀಯದಲ್ಲಿ ಅನಿರೀಕ್ಷಿತವಾಗಿ ಮತ್ತೆ ಗಮನ ಸೆಳೆದಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries