ಭಿನ್ನಮತೀಯರು ಹತಾಶರಾಗಿದ್ದು, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಗೆ ಭಿನ್ನಮತೀಯರು ವಿಶ್ವಾಸ ದ್ರೋಹವೆಸಗುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯನ್ನು ದುರ್ಬಲಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಲ್ಯಾಣ್ ಬ್ಯಾನರ್ಜಿ, "ಪಕ್ಷಾಂತರ ನಿಷೇಧ ಕಾಯ್ದೆಯಿಂದ ಯಾವುದೇ ತೊಂದರೆ ಇಲ್ಲದಂತೆ ಪಾರಾಗಲು ಭಿನ್ನಮತೀಯ ಪಾಳೆಯಕ್ಕೆ ಸಂಖ್ಯಾಬಲದ ಅಗತ್ಯವಿದೆ" ಎಂದು ಅಭಿಪ್ರಾಯ ಪಟ್ಟರು. ಅಲ್ಲದೆ, ಭಿನ್ನಮತೀಯರನ್ನು ದೇಶದ್ರೋಹಿಗಳು ಎಂದು ಬಣ್ಣಿಸಿದ ಅವರು, ಭಿನ್ನಮತೀಯರು ಅಧಿಕಾರಕ್ಕಾಗಿ ಹತಾಶರಾಗಿದ್ದಾರೆ ಎಂದೂ ದೂರಿದರು.
ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ ಕಲ್ಯಾಣ್ ಬ್ಯಾನರ್ಜಿ, "ನಿಮ್ಮ ಬಳಿ ಮುಖ್ಯಮಂತ್ರಿ, ಈಡಿ, ಸಿಬಿಐ ಮತ್ತಿತರ ಅಧಿಕಾರವಿದೆ. ಆದರೆ, ನಮ್ಮ ಬಳಿ ಮಾ, ಮಾತಿ, ಮಾನುಷ್, ನಮ್ಮ ಪಕ್ಷ, ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಪಶ್ಚಿಮ ಬಂಗಾಳದ ಜನರಿದ್ದಾರೆ" ಎಂದು ಎಚ್ಚರಿಕೆ ನೀಡಿದರು.
ಕಲ್ಯಾಣ್ ಬ್ಯಾನರ್ಜಿಯೊಂದಿಗೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಟಿಎಂಸಿ ಸಂಸದ ಕೀರ್ತಿ ಆಝಾದ್ ಕೂಡಾ ಭಿನ್ನಮತೀಯರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಭಿನ್ನಮತೀಯರ ರಾಜಕೀಯ ನೈತಿಕತೆಯನ್ನು ಪ್ರಶ್ನಿಸಿದ ಅವರು, ನಿಮ್ಮ ಸಾಮರ್ಥ್ಯವನ್ನು ತೃಣಮೂಲ ಕಾಂಗ್ರೆಸ್ ಪಕ್ಷದ ಹೊರಗೆ ಪರೀಕ್ಷಿಸಿ ಎಂದು ಪಂಥಾಹ್ವಾನ ನೀಡಿದರು.
ನೀವು ಪಕ್ಷವನ್ನು ತೊರೆದು, ಜನರಿಂದ ಹೊಸದಾಗಿ ಜನಮತ ಪಡೆಯಿರಿ ಎಂದೂ ಅವರು ಭಿನ್ನಮತೀಯರಿಗೆ ಸವಾಲು ಹಾಕಿದರು.
ಇದಕ್ಕೆ ಪ್ರತಿಯಾಗಿ ಮತ್ತೊಂದು ಸುದ್ದಿ ಗೋಷ್ಠಿ ನಡೆಸಿದ ಟಿಎಂಸಿ ಭಿನ್ನಮತೀಯ ಬಣದ ನಾಯಕಿ ಕಾಕೋಲಿ ಘೋಷ್ ದಸ್ತಿದಾರ್, "ನನ್ನ ಕುತ್ತಿಗೆ ಕತ್ತರಿಸಿದರೂ ನಾನು ತಲೆಬಾಗುವುದಿಲ್ಲ" ಎಂದು ಘೋಷಿಸಿದರು.
"ನಾನು ಸಾಕಷ್ಟು ಸಹಿಸಿಕೊಂಡಿದ್ದೇನೆ. 2011ರಲ್ಲಿ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾದ ನಂತರ ನಾನಿಲ್ಲಿಗೆ ಬಂದಿಲ್ಲ. ನಾನು ಕಳೆದ 40 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇನೆ" ಎಂದು ತಮ್ಮ ಟೀಕಾಕಾರರಿಗೆ ತಿರುಗೇಟು ನೀಡಿದರು.
ಇಂತಹ ಜನರ ಮಾತುಗಳಿಂದ ನನ್ನ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದೂ ಅವರು ಹೇಳಿದರು.
ಮಮತಾ ಬ್ಯಾನರ್ಜಿ ಬಣ ಹಾಗೂ ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ ಭಿನ್ನಮತೀಯ ಬಣದ ನಡುವೆ ನಡೆದಿರುವ ಈ ವಾಕ್ಸಮರದಿಂದಾಗಿ ತೃಣಮೂಲ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ. ಎರಡೂ ಬಣಗಳು ತಮ್ಮ ಪಟ್ಟುಗಳನ್ನು ಮತ್ತಷ್ಟು ಬಿಗಿಗೊಳಿಸುತ್ತಿರುವುದರಿಂದ, ಎರಡೂ ಬಣಗಳ ನಡುವಿನ ರಾಜಕೀಯ ಪೈಪೋಟಿ ಮತ್ತಷ್ಟು ತೀವ್ರಗೊಂಡಿದೆ.

