ಉಪ್ಪಳ: ಪೈವಳಿಗೆ ಗ್ರಾಮ ಪಂಚಾಯಿತಿಯಲ್ಲಿರುವ ಪೊಸಡಿಗುಂಪೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ದೊಡ್ಡ ಪ್ರಗತಿಗೆ ಸಿದ್ಧತೆ ನಡೆಸುತ್ತಿದೆ. ಕಾಸರಗೋಡು ನಗರದ ಈಶಾನ್ಯಕ್ಕೆ 30 ಕಿ.ಮೀ ದೂರದಲ್ಲಿರುವ ಈ ಬೆಟ್ಟಗಳು ಮಂಜೇಶ್ವರ ತಾಲ್ಲೂಕಿನ ಸೌಂದರ್ಯವನ್ನು ಮೆಲುಕು ಹಾಕುವ ಪ್ರದೇಶವಾಗಿದೆ.
ಬಾಯಾರ್ ಮತ್ತು ಧರ್ಮತ್ತಡ್ಕ ಗ್ರಾಮಗಳಲ್ಲಿ ಹರಡಿರುವ ಪೊಸಡಿಗುಂಪೆ ಜಿಲ್ಲೆಯ ಎರಡನೇ ರಾಣಿಪುರಂ ಎಂದು ಕರೆಯಲ್ಪಡುತ್ತದೆ. ನಾಲ್ಕು ದಿಕ್ಕುಗಳನ್ನೂ ವೀಕ್ಷಿಸಬಹುದಾದ ಎತ್ತರದ ಗುಡ್ಡದ ಸುಂದರ ನೋಟವು ಪ್ರವಾಸಿಗರನ್ನು ಈ ಸ್ಥಳಕ್ಕೆ ಆಕರ್ಷಿಸುತ್ತದೆ.
ಪ್ರಮುಖ ಅಭಿವೃದ್ಧಿ ಯೋಜನೆಗಳು:
ಡಿಟಿಪಿಸಿ ನೇತೃತ್ವದಲ್ಲಿ ಪೊಸಡಿಗುಂಪೆಯನ್ನು 1.39 ಕೋಟಿ ರೂ. ವೆಚ್ಚದಲ್ಲಿ ಪ್ರಮುಖ ಗಿರಿಧಾಮವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಯೋಜನೆಯ ಭಾಗವಾಗಿ, ಎತ್ತರದ ಗಾಜಿನ ವೀಕ್ಷಣಾ ಗೋಪುರ, ನಡಿಗೆ ಮಾರ್ಗಗಳು, ಕ್ಯಾಂಟಿಲಿವರ್ ವ್ಯೂ ಪಾಯಿಂಟ್, ಟ್ರೆಕ್ಕಿಂಗ್ ಪಾಯಿಂಟ್, ಸಾಹಸ ವಲಯ ಮತ್ತು ತೂಗು ಸೇತುವೆಯನ್ನು ನಿರ್ಮಿಸಲಾಗುವುದು. ಪ್ರವಾಸಿಗರನ್ನು ಸ್ವಾಗತಿಸಲು ಪ್ರವೇಶ ದ್ವಾರ ಮತ್ತು ಆಹಾರ ಮಳಿಗೆಗಳನ್ನು ಈಗಾಗಲೇ ಯೋಜನೆಯಲ್ಲಿ ಸೇರಿಸಲಾಗಿದೆ. ಈ ಯೋಜನೆಗಳು ಪೂರ್ಣಗೊಂಡ ನಂತರ, ಪೊಸಡಿಗುಂಪೆ ಕಾಸರಗೋಡಿನ ಪ್ರವಾಸೋದ್ಯಮ ನಕ್ಷೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುವುದರಲ್ಲಿ ಸಂದೇಹವಿಲ್ಲ.
ಸರ್ಕಾರದ ತಡವಾಗಿಯಾದರೂ ಹೊಸ ಉಪಕ್ರಮ:
ಈ ಪ್ರದೇಶದ ಅಭಿವೃದ್ಧಿಯ ಭಾಗವಾಗಿ ಮಾಜಿ ಜಿಲ್ಲಾಧಿಕಾರಿ ಡಾ. ಪಿ. ಸಜಿತ್ ಬಾಬು ಮತ್ತು ಪ್ರಸ್ತುತ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಈ ಪ್ರದೇಶಕ್ಕೆ ಭೇಟಿ ನೀಡಿದ್ದರು. ಪ್ರವಾಸೋದ್ಯಮ ಯೋಜನೆಗಳನ್ನು ವೇಗಗೊಳಿಸಲು ಮತ್ತು ತಾಂತ್ರಿಕ ಅಡೆತಡೆಗಳನ್ನು ನಿವಾರಿಸಲು ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಯೋಜನೆ ಕಳೆದ ಎರಡೂವರೆ ದಶಕಗಳಷ್ಟೂ ಹಳೆಯದು. 2000ನೇ ಇಸವಿಯ ಆರಂಭದಲ್ಲೇ ಇಲ್ಲಿಯ ಪ್ರವಾಸೋದ್ಯಮ ಸಾಧ್ಯತೆಯ ಬಗ್ಗೆ ಯುವಜನ ಅಭಿವೃದ್ಧಿ, ಕ್ರೀಡಾ ಇಲಾಖೆಯ ನೆಹರೂ ಯುವ ಕೇಂದ್ರದ ಮೂಲಕ ಸಮಗ್ರ ಯೋಜನಾ ವರದಿಯೊಂದು ಸಲ್ಲಿಕೆಯಾಗಿದ್ದರೂ ಬಳಿಕ ಅದು ನೆನನೆಗುದಿಗೆ ಬಿದ್ದಿತ್ತು. ಇದೀಗ ಮತ್ತೆ ಇದು ಸಕ್ರಿಯಗೊಳ್ಳುತ್ತಿದೆ.
ಮಾಫಿಯಾಗಳ ಅಟ್ಟಹಾಸ:
ಈ ಮಧ್ಯೆ ಪೊಸಡಿಗುಂಪೆ ಪರಿಸರದ ಅನೇಕ ಸ್ಥಳಗಳನ್ನು ಕೈವಶಗೊಳಿಸಿ ಕೆಮಗೆಲ್ಲ, ಬಾಕ್ಸೈಟ್ ಗನಿಗಾರಿಕೆಗೆ ಮಾಫಿಯಾಗಳು ಸಕ್ರಿಯಗೊಂಡಿದೆ. ಇಂದು ಸರ್ಕಾರ ಗುರುತಿಸಿರುವ ಪೊಸಡಿಗುಂಪೆ ಪ್ರದೇಶದ ಹೊರತು ಅದರ ಹೊರಾವರಣದ ನೂರಾರು ಎಕ್ರೆಗಳನ್ನು ಬೇನಾಮಿಯಾಗಿ ವಶಪಡಿಸಿ ನೆಲ ಅಗೆದು ವಿವಿಧ ಮಾಫಿಯಾಗಳು ವ್ಯಾಪಾರ ನಡೆಸುತ್ತಿರುವುದು ಕಂಡುಬಂದಿದೆ. ಇದನ್ನು ಪ್ರಶ್ನಿಸಿದ ಸ್ಥಳೀಯರನ್ನು ಬೆದರಿಸುವುದು, ಜೀವ ಭೀತಿ ತರುವ ವಿದ್ಯಮಾನಗಳೂ ವರದಿಯಾಗುತ್ತಿದೆ. ಇದರಲ್ಲಿ ಕಂದಾಯ ಇಲಾಖೆಯ ಕೆಲವು ಉನ್ನತರು ಶಾಮೀಲಾಗಿರುವ ಶಂಕೆಯೂ ಇದೆ. ಇವನ್ನು ಮಟ್ಟ ಹಾಕದಿದ್ದಲ್ಲಿ ಪ್ರವಾಸಿ ಯೋಜನೆ ಕೇವಲ ಯೋಜನೆಗಷ್ಟೇ ಸೀಮಿತವಾಗಲಿದೆ.
ಪೊಸಡಿಗುಂಪೆ ಪ್ರವಾಸೋದ್ಯಮ ಕೇಂದ್ರವು ಸಾಕಾರಗೊಂಡಲ್ಲಿ ಈ ಪ್ರದೇಶಕ್ಕೆ ಹೆಚ್ಚಿನ ಪ್ರವಾಸಿಗರನ್ನು ತರುವ ಮೂಲಕ ಆರ್ಥಿಕ ಸಬಲೀಕರಣ, ಉದ್ಯೋಗ ಅವಕಾಶ ಸಹಿತ ವಿವಿಧ ಆಯಾಮಗಳ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಸ್ಥಳೀಯರು ಆಶಿಸಿದ್ದಾರೆ.
ಹೈಲೈಟ್ಸ್:
- ಡಿಟಿಪಿಸಿ ನೇತೃತ್ವದಲ್ಲಿ ಪ್ರವಾಸೋದ್ಯಮ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ.
- ಎತ್ತರದ ಗಾಜಿನ ವೀಕ್ಷಣಾ ಗೋಪುರ ಮತ್ತು ತೂಗು ಸೇತುವೆ ಯೋಜನೆಯಲ್ಲಿದೆ.
- ಸಾಹಸ ವಲಯ ಮತ್ತು ಚಾರಣ ತಾಣವು ಪ್ರವಾಸಿಗರನ್ನು ಆಕರ್ಷಿಸುವ ನಿರೀಕ್ಷೆ.
- ಈ ಪ್ರದೇಶವು ಮಂಜೇಶ್ವರ ತಾಲ್ಲೂಕಿನ ಪೈವಳಿಗೆ ಗ್ರಾಮ ಪಂಚಾಯಿತಿಯಲ್ಲಿದೆ.
- ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿರುವರು.

.jpg)
.jpg)
