ಬದಿಯಡ್ಕ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಬದಿಯಡ್ಕ ಗ್ರಾಮ ಪಂಚಾಯಿತಿಯ ವಿವಿಧ ಸ್ಥಳಗಳಲ್ಲಿ ಹಾನಿಯುಂಟಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಅವರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಅವಿನಾಶ್ ರೈ, ಸದಸ್ಯ ಶ್ಯಾಮಪ್ರಸಾದ ಸರಳಿ ಜೊತೆಗಿದ್ದರು.
ಬದಿಯಡ್ಕದ ಹೃದಯ ಭಾಗದಲ್ಲಿ ಗುಡ್ಡ ಕುಸಿತವುಂಟಾಗಿದೆ. ಪುತ್ತೂರು ರಸ್ತೆಯ ಬಲಭಾಗದಲ್ಲಿ ಬೃಹತ್ ವ್ಯಾಪಾರ ಸಂಕೀರ್ಣದ ನಿರ್ಮಾಣಕ್ಕಾಗಿ ಸಮೀಪದ ಖಾಸಗಿ ವ್ಯಕ್ತಿಯ ಹಿತ್ತಿಲಿನ ತನಕ ಗುಡ್ಡವನ್ನು ಅಗೆಯಲಾಗಿತ್ತು. ಇದೀಗ ಖಾಸಗಿ ವ್ಯಕ್ತಿಯ ಮನೆಯು ಅಪಾಯದ ಸ್ಥಿತಿಯಲ್ಲಿದೆ. ಮನೆಯ ಎದುರು ಭಾಗದಲ್ಲಿ ನೆಟ್ಟುಬೆಳೆಸಿದ ಗಿಡಗಳು, ಆವರಣ ಗೋಡೆಯು ಕುಸಿದು ಬಿದ್ದಿದೆ. ಮನೆಯೂ ಅಪಾಯದ ಸ್ಥಿತಿಯಲ್ಲಿದೆ. ಕರಿಂಬಿಲ ಸಮೀಪ ಚೆರ್ಕಳ ಕಲ್ಲಡ್ಕ ರಸ್ತೆಗೆ ಮರವೊಂದು ಮುರಿದು ಬಿದ್ದು ಸ್ವಲ್ಪಕಾಲ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಕರಿಂಬಿಲದಿಂದ ಕುಂಟಾಲುಮೂಲೆಗೆ ತೆರಳುವ ರಸ್ತೆಯ ಬದಿಯೂ ಕುಸಿದಿದ್ದು ಅಪಾಯದ ಸ್ಥಿತಿಯಲ್ಲಿದೆ.

.jpeg)
.jpeg)
.jpeg)
