ನವದೆಹಲಿ: ಮಹಾರಾಷ್ಟ್ರದ ನಾಗ್ಪುರದಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ 3 ಗಿಗಾ ವ್ಯಾಟ್ ಸಾಮರ್ಥ್ಯದ ಸೌರ ಸೆಲ್ ಉತ್ಪಾದನಾ ಘಟಕವನ್ನು ಅವಾಡ ಎಲೆಕ್ಟ್ರೋ ಸಂಸ್ಥೆಯು ಸೋಮವಾರ (ಜುಲೈ13) ಕಾರ್ಯಾರಂಭಗೊಳಿಸಿದೆ.
ಈ ಕಂಪನಿಯ 6 ಗಿಗಾ ವ್ಯಾಟ್ ಸಾಮರ್ಥ್ಯದ ಉನ್ನತ ದಕ್ಷತೆಯ ಎನ್-ಟೈಪ್ ಟೋಪ್ಕಾನ್ ಸೌರ ಸೆಲ್ ಉತ್ಪಾದನಾ ಯೋಜನೆಯ ಭಾಗವಾಗಿದೆ.
ಒಟ್ಟು 12 ಗಿಗಾ ವ್ಯಾಟ್ ಸೌರ ಸೆಲ್ ಉತ್ಪಾದನಾ ಸಾಮರ್ಥ್ಯವನ್ನು ಸಾಧಿಸುವ ಗುರಿಯೊಂದಿಗೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ನಾಗ್ಪುರದ ಬುಟಿಬೋರಿಯಲ್ಲಿರುವ ಸಮಗ್ರ ಸೌರ ಉತ್ಪಾದನಾ ಘಟಕದಲ್ಲಿ ಮೊದಲ 3 ಗಿಗಾ ವ್ಯಾಟ್ ಉತ್ಪಾದನಾ ಲೈನ್ ಕಾರ್ಯಾರಂಭಗೊಂಡಿದ್ದು, ಉಳಿದ 3 ಗಿಗಾ ವ್ಯಾಟ್ ಸಾಮರ್ಥ್ಯವನ್ನು ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
ಪ್ರಸ್ತುತ ಅವಾಡ ಎಲೆಕ್ಟ್ರೋ ನಾಗ್ಪುರ ಮತ್ತು ಉತ್ತರ ಪ್ರದೇಶದ ದಾದ್ರಿಯಾದಲ್ಲಿರುವ ಘಟಕಗಳಲ್ಲಿ ಒಟ್ಟು 8.50 ಗಿಗಾ ವ್ಯಾಟ್ ಸಾಮರ್ಥ್ಯದ ಎನ್-ಟೈಪ್ ಟೋಪ್ಕಾನ್ ಗ್ಲಾಸ್ ಸೌರ ಮೊಡ್ಯೂಲ್ಗಳನ್ನು ಉತ್ಪಾದಿಸುತ್ತಿದೆ. ಇದಕ್ಕೆ ಇನ್ನೂ 5.10 ಗಿಗಾ ವ್ಯಾಟ್ ಸಾಮರ್ಥ್ಯವನ್ನು ಸೇರಿಸಿ ಒಟ್ಟು 13.60 ಗಿಗಾ ವ್ಯಾಟ್ ಮೊಡ್ಯೂಲ್ಗಳು ಉತ್ಪಾದನಾ ಸಾಮರ್ಥ್ಯ ತಲುಪುವ ಯೋಜನೆ ಹೊಂದಿದೆ.
ಇದರ ಜೊತೆಗೆ ಗ್ರೇಟರ್ ನೋಯ್ಡಾದಲ್ಲಿ ಮತ್ತೊಂದು 6 ಗಿಗಾ ವ್ಯಾಟ್ ಸೌರ ಸೆಲ್ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಕಾರ್ಯವೂ ಪ್ರಗತಿಯಲ್ಲಿದ್ದು, ಇದರಿಂದ ಕಂಪನಿಯ ಒಟ್ಟು ಸೌರ ಸೆಲ್ ಉತ್ಪಾದನಾ ಸಾಮರ್ಥ್ಯವನ್ನು 12 ಗಿಗಾ ವ್ಯಾಟ್ಗೆ ಏರಲಿದೆ.
ಅಲ್ಲದೆ, ಯೋಜನೆಯಡಿ ನಾಗ್ಪುರದಲ್ಲಿ 3 ಗಿಗಾ ವ್ಯಾಟ್ ಸಾಮರ್ಥ್ಯದ ಇಂಗೋಟ್ ಮತ್ತು ವೇಫರ್ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಯನ್ನು ಕಂಪನಿ ಪ್ರಕಟಿಸಿದೆ.

