HEALTH TIPS

ವಾರಕ್ಕೆ 74ಗಂಟೆ ಕೆಲಸ, ಶೇ 5ರಷ್ಟು ವೇತನ ಏರಿಕೆ: ಡೆಲಾಯ್ಟ್ ತೊರೆದ ಉದ್ಯೋಗಿ ನುಡಿ

 ಹೈದರಾಬಾದ್‌: ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರು ಸಲಹೆ ನೀಡಿದ್ದಕ್ಕಿಂತಲೂ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಿದ್ದೇನೆ. ಆದರೂ ಸೂಕ್ತ ಬಡ್ತಿ ಸಿಗಲಿಲ್ಲ, ಸಿಕ್ಕಿದ್ದು ಕೇವಲ ಶೇ 5ರಷ್ಟು ವೇತನ ಏರಿಕೆ ಮಾತ್ರ... 


ದೇಶದ ಪ್ರಸಿದ್ಧ ಡೆಲಾಯ್ಟ್‌ ಸಂಸ್ಥೆಯಲ್ಲಿ ಒಂದು ದಶಕ ಕೆಲಸ ಮಾಡಿ ಇತ್ತೀಚೆಗೆ ರಾಜೀನಾಮೆ ನೀಡಿದ ಹಿರಿಯ ಉದ್ಯೋಗಿಯೊಬ್ಬರು ಹಂಚಿಕೊಂಡ ನೋವಿನ ನುಡಿಗಳಿವು.

ಸತತ ಹತ್ತು ವರ್ಷ ಕೆಲಸ ಮಾಡಿ, ಅತ್ಯಲ್ಪ ವೇತನ ಏರಿಕೆಯಿಂದ ಬೇಸತ್ತು ಅರ್ಜುನ್ ಸಿಂಗ್ (ಗುರುತು ಮರೆಮಾಚಲು ಹೆಸರು ಬದಲಾಯಿಸಲಾಗಿದೆ) ಎಂಬ ಉದ್ಯೋಗಿ ಡೆಲಾಯ್ಟ್‌ ಸಂಸ್ಥೆಯನ್ನು ತೊರೆದಿದ್ದಾರೆ.

ಕಾಲೇಜು ಶಿಕ್ಷಣ ಮುಗಿದ ತಕ್ಷಣವೇ ಡೆಲಾಯ್ಟ್ ಸಂಸ್ಥೆಗೆ ಸೇರಿದೆ, ವೃತ್ತಿ ಜೀವನವನ್ನು ಇಲ್ಲೇ ರೂಪಿಸಿಕೊಳ್ಳಬೇಕು ಎಂಬ ಆಸೆಯಿಂದ ಬಂದಿದ್ದೆ ಆದರೆ ಕಾಲ ಕ್ರಮೇಣ ಎದುರಾದ ಅತಿಯಾದ ಕೆಲಸದ ಒತ್ತಡ ಮತ್ತು ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದಿರುವುದು ತೀವ್ರ ನಿರಾಶೆ ಮೂಡಿಸಿತು ಎಂದು ಅರ್ಜುನ್ ಸಿಂಗ್ ಮನಿ ಕಂಟ್ರೋಲ್‌ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ವಾರಕ್ಕೆ 74 ಗಂಟೆಗಳ ಕೆಲಸ..!

ವಾರಕ್ಕೆ 70 ಗಂಟೆ ಕೆಲಸ ಮಾಡುವ ಕುರಿತು ನಾರಾಯಣ ಮೂರ್ತಿ ಅವರು ನೀಡಿದ್ದ ಹೇಳಿಕೆ ದೇಶದಾದ್ಯಂತ ಕಾರ್ಪೊರೇಟ್ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಇದನ್ನು ಉಲ್ಲೇಖಿಸಿದ ಅರ್ಜುನ್, ನಾನು ನಾರಾಯಣ ಮೂರ್ತಿ ಹೇಳಿದ್ದಕ್ಕಿಂತಲೂ ಹೆಚ್ಚು, ಅಂದರೆ ಕೆಲವು ವಾರಗಳಲ್ಲಿ 74 ಗಂಟೆಗಳ ಕಾಲ ಕೆಲಸ ಮಾಡಿದ್ದೇನೆ. ಆದರೂ ನನಗೆ ಬಡ್ತಿ ನಿರಾಕರಿಸಲಾಯಿತು ಮತ್ತು ಶೇ 5ರಷ್ಟು ಮಾತ್ರ ವೇತನ ಏರಿಕೆ ಮಾಡಲಾಯಿತು ಎಂದು ಹೇಳಿದ್ದಾರೆ.

ಕನ್ಸಲ್ಟಿಂಗ್ ಕ್ಷೇತ್ರದಲ್ಲಿ ಗ್ರಾಹಕರ ಬೇಡಿಕೆ, ಯೋಜನೆಗಳ ನಿರ್ವಹಣೆ ಜತೆಗೆ, ಹೊಸ ಉದ್ಯೋಗಿಗಳ ನೇಮಕಾತಿ ಮತ್ತು ಬಿಸಿನೆಸ್ ಡೆವಲಪ್‌ಮೆಂಟ್‌ನಂತಹ ಆಂತರಿಕ ಜವಾಬ್ದಾರಿಗಳನ್ನೂ ನಿರ್ವಹಿಸಬೇಕಾಗುತ್ತದೆ. ಹಿರಿಯ ಹುದ್ದೆಗಳಿಗೆ ಹೋದಂತೆ ಈ ಒತ್ತಡ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ಕಳೆದ ಐದಾರು ತಿಂಗಳ ಅವಧಿಯಲ್ಲಿ 6 ಜನರಿದ್ದ ತಂಡ 4 ಜನರಿಗೆ ಕುಸಿದಿತ್ತು. ಸಿಬ್ಬಂದಿ ಕೊರತೆಯಿಂದ ಅತಿಯಾದ ಒತ್ತಡವಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

ಕಚೇರಿ ಸಮಯ ಮುಗಿದ ಮೇಲೆಯೂ ಕೆಲಸ ಮಾಡುತ್ತಿದ್ದೆ, ಗ್ರಾಹಕರ ಕರೆಗಳು, ಡಿಜಿಟಲ್‌ ಮಾಹಿತಿ ನೀಡಲು ನಿರಂತರವಾಗಿ ಲಭ್ಯವಿರಬೇಕಾದ ಅನಿವಾರ್ಯತೆ ನನ್ನ ಕೆಲಸದ ಭಾಗವಾಗಿತ್ತು. ಅತ್ಯುತ್ತಮ ಸಾಧನೆ ತೋರಿದವರಿಗೂ ಮತ್ತು ಸರಾಸರಿ ಸಾಧನೆ ಮಾಡಿದವರಿಗೂ ನೀಡುವ ಸಂಭಾವನೆಯಲ್ಲಿ ದೊಡ್ಡ ವ್ಯತ್ಯಾಸವೇ ಇರಲಿಲ್ಲ. ಸಂಸ್ಥೆಯು ಉದ್ಯೋಗಿಯ ಶ್ರಮ ಗುರುತಿಸದಿರುವುದು, ಸೂಕ್ತ ಪ್ರತಿಫಲ ನೀಡದಿದ್ದಾಗ ಮಾನಸಿಕ ಬಳಲಿಕೆ ಹೆಚ್ಚಾಗಿತ್ತು ಎಂದು ಅವರು ಹೇಳಿದ್ದಾರೆ.

ಉತ್ತಮ ವೇತನವೂ ಒಂದು ಕಾರಣವಾಗಿದ್ದರೂ, ಬದಲಾದ ವೈಯಕ್ತಿಕ ಆದ್ಯತೆಗಳು, ಕೆಲಸ ಮತ್ತು ಬದುಕಿನ ನಡುವೆ ಸಮತೋಲನ ಕಂಡುಕೊಳ್ಳುವ ಉದ್ದೇಶದಿಂದ ಡೆಲಾಯ್ಟ್‌ ತೊರೆದು ಹೈದರಾಬಾದ್‌ ಮೂಲದ ಫೈನಾನ್ಸ್ ಕಂಪನಿಗೆ ಸೇರ್ಪಡೆಯಾಗಿದ್ದೇನೆ. ಅಲ್ಲಿ ಉತ್ತಮ ಸಂಭಾವನೆ ಜತೆಗೆ ವೈಯಕ್ತಿಕ ಬದುಕಿಗೆ ಗಮನಹರಿಸಲು ಹೆಚ್ಚು ಸಮಯ ಸಿಕ್ಕಿದೆ ಎಂದು ಅರ್ಜುನ್ ಹೇಳಿದ್ದಾರೆ.  







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries