ಗುವಾಹಟಿ: ಬ್ರಹ್ಮಪುತ್ರ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿರುವ ಪರಿಣಾಮ ಅಸ್ಸಾಂನ ಮೇಲ್ಭಾಗದ ಹಲವು ಗ್ರಾಮಗಳು ಪ್ರವಾಹಕ್ಕೆ ಸಿಲುಕಿದ್ದು, ಅಲ್ಲಿಂದ 571 ಮಂದಿಯನ್ನು ಭಾರತೀಯ ಸೇನೆ ಸುರಕ್ಷಿತವಾಗಿ ರಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಮಾನ್ಸೂನ್ ಮಳೆಯಿಂದಾಗಿ ಅನೇಕ ಮನೆಗಳು ಜಲಾವೃತವಾಗಿದ್ದು, ಕೃಷಿ ಬೆಳೆಗಳು ಹಾಗೂ ಪ್ರಮುಖ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯಾಗಿದೆ.
ಪ್ರವಾಹದಿಂದ ತೀವ್ರವಾಗಿ ಬಾಧಿತವಾಗಿರುವ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಸೇನಾ ತುಕಡಿಗಳನ್ನು ನಿಯೋಜಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ಜುಲೈ 19ರಿಂದ ಸ್ಪಿಯರ್ ಕಾರ್ಪ್ಸ್ ನ ಮೀಸಲು ಪ್ರವಾಹ ಪರಿಹಾರ ತುಕಡಿಗಳು ಹಗಲಿರುಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದರ ಜೊತೆಗೆ ಅಗತ್ಯ ಪರಿಹಾರ ಸಾಮಗ್ರಿಗಳನ್ನು ತಲುಪಿಸುವ ಕಾರ್ಯವೂ ನಡೆಯುತ್ತಿದೆ.
'ಆಪರೇಷನ್ ಜಲ್ ರಾಹತ್' ಅಡಿಯಲ್ಲಿ 45 ಸೇನಾ ಸಿಬ್ಬಂದಿಯನ್ನು ಒಳಗೊಂಡ ಮೂರು ತಂಡಗಳನ್ನು ಶಿವಸಾಗರ್, ಚರೈಡಿಯೊ ಮತ್ತು ಜೋರ್ಹಾತ್ ಸೇರಿದಂತೆ ತೀವ್ರ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ. ಈ ತಂಡಗಳು ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಧಿಸಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳನ್ನು ಮುಂದುವರಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

