ದುಬೈ: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಹೊರ್ಮುಜ್ ಜಲಸಂಧಿಯಲ್ಲಿ ಮಂಗಳವಾರ ಬೆಳಿಗ್ಗೆ ತೈಲ ಸಾಗಣೆ ಹಡಗಿನ ಮೇಲೆ ಇರಾನ್ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಮತ್ತೊಂದು ಸುತ್ತಿನ ವೈಮಾನಿಕ ದಾಳಿ ನಡೆಸಿದೆ.
ಇರಾನ್ನ ಸೇನಾ ನೆಲೆಗಳು, ಕ್ಷಿಪಣಿ ಮತ್ತು ಡ್ರೋನ್ ಉಡಾವಣಾ ಕೇಂದ್ರಗಳು, ವಾಯು ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಸೇನೆ ಮಂಗಳವಾರ ತಿಳಿಸಿದೆ.
ಇರಾನ್ನ ಫಾರ್ಸ್, ಹೊರ್ಮೊಜ್ಗಾನ್, ಇಲಾಮ್, ಕೆರ್ಮನ್ ಮತ್ತು ಸಿಸ್ತಾನ್, ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ಸ್ಫೋಟಗಳ ಶಬ್ದ ಕೇಳಿಬಂದಿರುವುದಾಗಿ ಇರಾನ್ನ ಸರ್ಕಾರಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಅಮೆರಿಕದ ಮಿತ್ರ ರಾಷ್ಟ್ರಗಳ ಮೇಲೆ ಇರಾನ್ ದಾಳಿ ನಡೆಸಿದೆ. ಜೋರ್ಡಾನ್ ಮೇಲೆ ಐದು ಡ್ರೋನ್ಗಳು ಮತ್ತು ಮೂರು ಕ್ಷಿಪಣಿಗಳನ್ನು ಹಾರಿಸಿದ್ದು, ಅವುಗಳನ್ನು ಅಲ್ಲಿನ ಸೇನೆಯು ಹೊಡೆದುರುಳಿಸಿದೆ.
ದ್ವೀಪ ರಾಷ್ಟ್ರ ಬಹರೇನ್ನಲ್ಲಿ ಮಂಗಳವಾರ ಮಧ್ಯಾಹ್ನ ಕ್ಷಿಪಣಿ ದಾಳಿಯ ಎಚ್ಚರಿಕೆ ನೀಡುವ ಸೈರನ್ಗಳು ಮೊಳಗಿವೆ. ಅಲ್ಲೇ ಅಮೆರಿಕದ 5ನೇ ನೌಕಾಪಡೆಯ ನೆಲೆ ಇದ್ದು, ಅದನ್ನು ಗುರಿಯಾಗಿಸಿ ಇರಾನ್ ದಾಳಿ ನಡೆಸಿದೆ.
ಸತತ 10 ದಿನಗಳಿಂದ ಅಮೆರಿಕ ವೈಮಾನಿಕ ದಾಳಿ ನಡೆಸುತ್ತಿದ್ದರೂ ಹೊರ್ಮುಜ್ ಜಲಸಂಧಿಯ ಮೇಲಿನ ತನ್ನ ಹಿಡಿತವನ್ನು ಸಡಿಲಗೊಳಿಸುವಂತೆ ಇರಾನ್ ಮೇಲೆ ಒತ್ತಡ ಹೇರಲು ಸಾಧ್ಯವಾಗಿಲ್ಲ.
ಜಲಮಾರ್ಗ ನಿರ್ಬಂಧ: ಇರಾನ್ ಬೆಂಬಲಿತ ಯೆಮನ್ನ ಹುಥಿ ಬಂಡುಕೋರರು ಸೌದಿ ಅರೇಬಿಯಾ ವಿರುದ್ಧ ಸಮುದ್ರ ದಿಗ್ಬಂಧನ ವಿಧಿಸಿದ್ದಾರೆ.
'ಕಳೆದ ವಾರ ಸನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಗೆ ಸೌದಿ ಅರೇಬಿಯಾ ಕಾರಣ' ಎಂದು ಆರೋಪಿಸಿರುವ ಹುಥಿಗಳು, ಕೆಂಪು ಸಮುದ್ರ ಮತ್ತು ಏಡೆನ್ ಕೊಲ್ಲಿ ನಡುವಿನ ಜಲಮಾರ್ಗವನ್ನು ನಿರ್ಬಂಧಿಸಿರುವುದಾಗಿ ತಿಳಿಸಿದ್ದಾರೆ. ಹೊರ್ಮುಜ್ ಜಲಸಂಧಿಯಂತೆಯೇ ಪ್ರಮುಖ ಸಮುದ್ರ ಮಾರ್ಗವಾಗಿರುವ 'ಬಾಬ್ ಎಲ್-ಮಂಡೇಬ್' ಅನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
'ಈ ಜಲಮಾರ್ಗವನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಹುಥಿ ಬಂಡುಕೋರರ ಬೆದರಿಕೆಗಳನ್ನು ಧೈರ್ಯವಾಗಿ ಎದುರಿಸಲಾಗುವುದು' ಎಂದು ಸೌದಿ ಅರೇಬಿಯಾ ಸೇನಾ ವಕ್ತಾರರು ತಿಳಿಸಿದ್ದಾರೆ.
ಜುಲೈ 7ರಂದು ಇರಾನ್ ಮೇಲಿನ ದಾಳಿಯನ್ನು ಪುನರಾರಂಭಿಸಿದಾಗಿನಿಂದ ಅಮೆರಿಕದ 100 ಯೋಧರು ಗಾಯಗೊಂಡಿದ್ದಾರೆ. ಅವರಲ್ಲಿ ಶೇ 96ರಷ್ಟು ಮಂದಿ ಕರ್ತವ್ಯಕ್ಕೆ ಮರಳಿದ್ದಾರೆ ಎಂದು ಅಮೆರಿಕದ ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ.
'ಅಮೆರಿಕ ನಡೆಸಿದ ಇತ್ತೀಚಿನ ದಾಳಿಗಳಲ್ಲಿ 50 ಮಂದಿ ಮೃತಪಟ್ಟಿದ್ದು, 517 ಜನರು ಗಾಯಗೊಂಡಿದ್ದಾರೆ' ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಷರೀಫ್ ಭೇಟಿಯಾದ ಇರಾನ್ ಗೃಹ ಸಚಿವ
ಇಸ್ಲಾಮಾಬಾದ್: ಇರಾನ್-ಅಮೆರಿಕ ನಡುವಿನ ಶಾಂತಿ ಒಪ್ಪಂದವನ್ನು ಪುನರ್ಸ್ಥಾಪಿಸಲು ಪಾಕಿಸ್ತಾನವು ರಾಜತಾಂತ್ರಿಕ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಇದರ ಭಾಗವಾಗಿ ಇರಾನ್ನ ಗೃಹ ಸಚಿವ ಇಸ್ಕಂದರ್ ಮೊಮೆನಿ ಅವರು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅವರನ್ನು ಮಂಗಳವಾರ ಭೇಟಿ ಮಾಡಿದ್ದಾರೆ. ಸಂಘರ್ಷವನ್ನು ಕೊನೆಗೊಳಿಸಲು ಯಾವ ಪರಿಹಾರ ಮಾರ್ಗ ಅನುಸರಿಸಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಕಳೆದ ತಿಂಗಳು ಅಮೆರಿಕ- ಇರಾನ್ ನಡುವೆ ಮಧ್ಯಂತರ ಒಪ್ಪಂದ ಏರ್ಪಡಲು ಆಸೀಮ್ ಮುನೀರ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇಸ್ಲಾಮಾಬಾದ್ ತಿಳಿವಳಿಕೆ ಒಪ್ಪಂದದಡಿ ಬಾಕಿ ಇರುವ ಸಮಸ್ಯೆಗಳನ್ನು ಬಗೆಹರಿಸಲು ಉಭಯ ದೇಶಗಳನ್ನು ಮತ್ತೆ ಮಾತುಕತೆಗೆ ಕರೆತರಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ.
ಕುವೈತ್ ಮೇಲೆ ಮತ್ತೆ ದಾಳಿ
ದುಬೈ: ಕುವೈತ್ನ ವಿದ್ಯುತ್ ಮತ್ತು ನಿರ್ಲವಣೀಕರಣ ಘಟಕಗಳ ಮೇಲೆ ಇರಾನ್ ಮತ್ತೆ ದಾಳಿ ಮಾಡಿದೆ. ದಾಳಿಯಿಂದ ಘಟಕಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅಪಾರ ಹಾನಿ ಉಂಟಾಗಿದೆ. ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ ಎಂದು ಕುವೈತ್ ಮಂಗಳವಾರ ತಿಳಿಸಿದೆ. ಕುವೈತ್ಗೆ ಅಗತ್ಯವಿರುವ ಶೇ 90ರಷ್ಟು ಕುಡಿಯುವ ನೀರು ಉಪ್ಪುನೀರಿನ ಶುದ್ಧೀಕರಣದಿಂದಲೇ ದೊರೆಯುತ್ತದೆ.

