ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ದಟ್ಟವಾಗಿದ್ದು, ಇರಾನ್‌ನ ಜಲ ಜಲಾಂತರ್ಗಾಮಿ ಮತ್ತು ಹಡಗು ದುರಸ್ತಿ ಕೇಂದ್ರದ ಮೇಲೆ ಅಮೆರಿಕ ಸೇನೆ ವೈಮಾನಿಕ ದಾಳಿ ನಡೆಸಿದೆ.
ಈ ಕುರಿತು ಅಮೆರಿಕ ಸೆಂಟ್ರಲ್ ಕಮಾಂಡ್ ಮಾಹಿತಿ ಹಂಚಿಕೊಂಡಿದ್ದು, ಅತ್ಯಾಧುನಿಕ ಡ್ರೋನ್‌ಗಳ ಮೂಲಕ ಇರಾನ್ ಸೇನಾ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ತಿಳಿಸಿದೆ.
ಇರಾನ್‌ನ ದಾಳಿಯ ಸಾಮರ್ಥ್ಯವನ್ನು ಕುಂದಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಮೆರಿಕದ ರಕ್ಷಣಾ ವಿಭಾಗ ತಿಳಿಸಿದೆ. ದಾಳಿಯ ವೇಳೆ ಇರಾನ್‌ನ ಬಂದರಿನ ಎರಡು ಪ್ರಮುಖ ಪಿಯರ್‌ಗಳ ಮೇಲೆ ಡ್ರೋನ್‌ಗಳು ಅಪ್ಪಳಿಸಿ ಭಾರಿ ಸ್ಫೋಟ ಸಂಭವಿಸಿದ್ದು, ಹೊಗೆಯ ದಟ್ಟಣೆ ಆವರಿಸಿರುವ ವಿಡಿಯೊವನ್ನು ಅಮೆರಿಕ ಸೇನೆ ಬಿಡುಗಡೆ ಮಾಡಿದೆ.
ಇರಾನ್ ಬಂದರುಗಳ ಮೇಲಿನ ನೌಕಾ ದಿಗ್ಬಂಧನವನ್ನು ಮರುಸ್ಥಾಪಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಜಾಗತಿಕವಾಗಿ ಸೂಕ್ಷ್ಮವಾಗಿರುವ ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ವಾಣಿಜ್ಯ ಹಡಗುಗಳ ಸುರಕ್ಷತೆಯ ಜವಾಬ್ದಾರಿಯನ್ನು ಇನ್ಮುಂದೆ ಅಮೆರಿಕ ಹೊತ್ತುಕೊಳ್ಳಲಿದ್ದು, ಇದಕ್ಕಾಗಿ ಶೇ 20ರಷ್ಟು ವಿಶೇಷ ಶುಲ್ಕವನ್ನು ವಿಧಿಸಲಾಗುವುದು ಎಂದು ಟ್ರಂಪ್ ತಿಳಿಸಿದ್ದಾರೆ.
'ಅಮೆರಿಕ ಇನ್ಮುಂದೆ 'ಹೊರ್ಮುಜ್ ಜಲಸಂಧಿಯ ರಕ್ಷಕ' ಎಂದು ಗುರುತಿಸಿಕೊಳ್ಳಲಿದೆ. ಈ ವಲಯದಲ್ಲಿ ಸುರಕ್ಷತೆ ಒದಗಿಸುವ ವೆಚ್ಚವನ್ನು ಭರಿಸಲು ಎಲ್ಲಾ ಸರಕು ಸಾಗಣೆ ಹಡಗುಗಳಿಂದ ಶೇ 20 ರಷ್ಟು ಶುಲ್ಕ ವಸೂಲಿ ಮಾಡಲಾಗುವುದು' ಎಂದು ಡೊನಾಲ್ಡ್ ಟ್ರಂಪ್ 'ಟ್ರೂತ್ ಸೋಶಿಯಲ್'ನಲ್ಲಿ ಬರೆದುಕೊಂಡಿದ್ದಾರೆ.
ನೆರೆರಾಷ್ಟ್ರಗಳಿಗೆ ಇರಾನ್ ಎಚ್ಚರಿಕೆ
ಅಮೆರಿಕದ ಈ ನಿಲುವಿಗೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ತನ್ನ ಜಲಪ್ರದೇಶದಲ್ಲಿ ಅಮೆರಿಕದ ಯಾವುದೇ ಹಸ್ತಕ್ಷೇಪವನ್ನು ಸಹಿಸುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಇದೇ ವೇಳೆ, ಅಮೆರಿಕದೊಂದಿಗೆ ಸಹಕರಿಸದಂತೆ ಬರಹೇನ್, ಜೋರ್ಡಾನ್, ಕುವೈತ್ ಮತ್ತು ಓಮನ್ ಸೇರಿದಂತೆ ಗಲ್ಫ್ ನೆರೆಹೊರೆಯ ರಾಷ್ಟ್ರಗಳಿಗೆ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಖಡಕ್ ಎಚ್ಚರಿಕೆ ನೀಡಿದೆ.

