ಬದಿಯಡ್ಕ: ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಆರೋಗ್ಯಕರ ಆಹಾರ ಮತ್ತು ಗುಣಮಟ್ಟದ ಶಿಕ್ಷಣದ ಪಾತ್ರವಿದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಉತ್ತಮ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸುವುದು ದೈಹಿಕ ಹಾಗೂ ಮಾನಸಿಕ ಸಾಮಥ್ರ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಬಡತನದಲ್ಲಿ ಹುಟ್ಟುವುದು ತಪ್ಪಲ್ಲ, ಆದರೆ ಬಡತನದಲ್ಲಿ ಯಾರೂ ಕೊನೆಯಾಗಬಾರದು. ಒದಗಿಬಂದ ಎಷ್ಟೋ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬನಿಗಿದೆ. ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಒಂದೇರೀತಿಯಲ್ಲಿ ಪಾಠ, ಪಠ್ಯೇತರ ಚಟುವಟಿಕೆಗಳನ್ನು ನೀಡಲಾಗುತ್ತಿದ್ದರೂ ಅತ್ಯಧಿಕ ಶ್ರಮಪಟ್ಟ ವಿದ್ಯಾರ್ಥಿಗಳು ಮಾತ್ರ ಯಶಸ್ಸನ್ನು ಸಾಸುತ್ತಾನೆ ಎಂಬುದನ್ನು ಎಲ್ಲರೂ ತಿಳಿದಿರಬೇಕು ಎಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ ಬೆಂಗಳೂರು ನಾರಾಯಣ ಹೃದಯಾಲಯದ ಸಿಎಸ್ಆರ್ ನಿಯ ಪ್ರಧಾನರಾದ ಮುತ್ತುರಾಜ್ ಹೇಳಿದರು.
ಧರ್ಮಚಕ್ರ ಟ್ರಸ್ಟ್ ಮತ್ತು ಬೆಂಗಳೂರು ನಾರಾಯಣ ಹೃದಯಾಲಯದ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶಯುಕ್ತ ಆಹಾರದ ಮಾಹಿತಿಯನ್ನು ನೀಡುತ್ತಾ ಅವರು ಮಾತನಾಡಿದರು.
ನಾರಾಯಣ ಹೃದಯಾಲಯ ಸಂಸ್ಥೆಯು ಕೇವಲ ವೈದ್ಯಕೀಯ ಸೇವೆಗೆ ಸೀಮಿತವಾಗದೆ, ಸಮಾಜದ ವಿವಿಧ ಸ್ತರಗಳ ಜನರ ಏಳಿಗೆಗಾಗಿ ಕೆಲಸ ಮಾಡುತ್ತಿದೆ. ಗ್ರಾಮೀಣ ಭಾಗದ ಶಾಲೆಗಳ ಮೂಲಸೌಕರ್ಯ ಹಾಗೂ ಮಕ್ಕಳ ಆರೋಗ್ಯ ಸುಧಾರಣೆಗೆ ಸಿಎಸ್ಆರ್ ನಿಯ ಮೂಲಕ ನಿರಂತರ ಬೆಂಬಲ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ವಿದ್ಯಾರ್ಥಿಗಳು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಗಮನಾರ್ಹವಾಗಿ ಓದಿ, ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಮೂಡಿಬರಬೇಕು ಮತ್ತು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದು ಮುತ್ತುರಾಜ್ ಅವರು ಕರೆ ನೀಡಿದರು.
ಶಾಲಾ ಆಡಳಿತಮಂಡಳಿಯ ಪ್ರಮುಖರಾದ ಜಯಪ್ರಕಾಶ ಪಜಿಲ, ಸುಬ್ರಹ್ಮಣ್ಯ ಕೆರೆಮೂಲೆ, ಈಶ್ವರ ಭಟ್ ಹಳೆಮನೆ, ವಿಷ್ಣುಪ್ರಸಾದ ಕೋಳಾರಿ, ಕೃಷ್ಣ ಪ್ರತೀಕ್ ಬೆಳ್ಳಿಗೆ ಪಾಲ್ಗೊಂಡಿದ್ದರು. ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಿದ್ಯಾರ್ಥಿ ನಾಯಕಿ ಸ್ತುತಿ ಕುಳೂರು ವಂದಿಸಿದರು.

.jpg)
.jpg)
