ಠಾಣೆ/ಪಾಲ್ಘರ್: ಮಹಾರಾಷ್ಟ್ರದಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಮುಂಬೈ ಮಾತ್ರವಲ್ಲದೆ ನೆರೆಯ ಠಾಣೆ ಮತ್ತು ಪಾಲ್ಘರ್ ಜಿಲ್ಲೆಗಳೂ ಭಾರಿ ಮಳೆಗೆ ತತ್ತರಿಸಿವೆ. ಸೋಮವಾರ ಸುರಿದ ಧಾರಾಕಾರ ಮಳೆಯಿಂದಾಗಿ ಠಾಣೆಯ ಭೀವಂಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆಗಳೆಲ್ಲಾ ಕೆರೆಯಂತಾಗಿದ್ದು, ಮೊಣಕಾಲುದ್ದ ನೀರಿನಿಂದಾಗಿ ಜನರು ಮನೆಯಿಂದ ಹೊರಬರಲು ಸಾಧ್ಯವಾಗದೆ ಪರದಾಡುವಂತಾಗಿದೆ.
ಭೀವಂಡಿಯ ರಸ್ತೆಗಳಲ್ಲಿ ಹರಿಯುತ್ತಿರುವ ಮಳೆ ನೀರು, ಜೀವಹಾನಿ ಉಂಟುಮಾಡಬಲ್ಲ ರಸ್ತೆ ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಿಹಾಕಿದೆ. ಗುಂಡಿಗಳು ಕಣ್ಣಿಗೆ ಕಾಣಿಸದ ಕಾರಣ ದ್ವಿಚಕ್ರ ಹಾಗೂ ವಾಹನಗಳು ನಿಯಂತ್ರಣ ತಪ್ಪಿ ನೀರಿನ ಮಧ್ಯದಲ್ಲೇ ಸಿಲುಕಿಕೊಳ್ಳುತ್ತಿದ್ದು, ಸರಣಿ ಅಪಘಾತಗಳ ಭೀತಿ ಎದುರಾಗಿದೆ.
ಭೀವಂಡಿ ಜನರ ನೆರವಿಗೆ ಬಂದ 'ಸ್ಪೈಡರ್‌ಮ್ಯಾನ್'!
ರಸ್ತೆಗಳಲ್ಲಿ ಸೃಷ್ಟಿಯಾಗಿರುವ ಈ ಗೊಂದಲದ ನಡುವೆ, ಸ್ಥಳೀಯ ಯುವಕನೊಬ್ಬ ವಿಭಿನ್ನವಾಗಿ ಜನರ ನೆರವಿಗೆ ಧಾವಿಸಿ ಗಮನ ಸೆಳೆದಿದ್ದಾನೆ. ಶಾದಾಬ್ ಮೋಮಿನ್ ಎಂಬ ವ್ಯಕ್ತಿ 'ಸ್ಪೈಡರ್‌ಮ್ಯಾನ್' ವೇಷ ಧರಿಸಿ ರಸ್ತೆಗಿಳಿದಿದ್ದು, ಜಲಾವೃತಗೊಂಡ ರಸ್ತೆಗಳಲ್ಲಿ ಸಿಲುಕಿದ್ದ ಸಾರ್ವಜನಿಕರಿಗೆ ಸುರಕ್ಷಿತವಾಗಿ ರಸ್ತೆ ದಾಟಲು ಸಹಾಯ ಮಾಡಿದ್ದಾನೆ.
ನೀರಿನ ಆಳ ಗೊತ್ತಾಗದೆ ತಡಕಾಡುತ್ತಿದ್ದ ವಾಹನ ಸವಾರರಿಗೆ ಹಾಗೂ ದಾರಿಹೋಕರಿಗೆ ಸುರಕ್ಷಿತ ಮಾರ್ಗ ತೋರಿಸಿ ಅಪಘಾತ ತಪ್ಪಿಸಿದ್ದಾನೆ.
ಮಳೆಯ ಆತಂಕದಲ್ಲಿದ್ದ ಸಣ್ಣ ಮಕ್ಕಳನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಸುರಕ್ಷಿತವಾಗಿ ಮುನ್ನಡೆಸುವ ಮೂಲಕ ಮಕ್ಕಳಿಗೆ ಮನರಂಜನೆಯನ್ನೂ ನೀಡಿದ್ದಾನೆ. ಈತನ ಕಾರ್ಯಕ್ಕೆ ಮನಸೋತ ಸ್ಥಳೀಯರು ಈತನನ್ನು ಪ್ರೀತಿಯಿಂದ 'ಭೀವಂಡಿಯ ಸ್ಪೈಡರ್‌ಮ್ಯಾನ್' ಎಂದು ಕರೆಯುತ್ತಿದ್ದಾರೆ.
ರೋಗಿ ಇದ್ದ ಕಾರು ಜಲಾವೃತ, ಸಾಹಸಮಯ ರಕ್ಷಣೆ
ಮತ್ತೊಂದೆಡೆ ಪಾಲ್ಘರ್ ಜಿಲ್ಲೆಯಲ್ಲೂ ಮಳೆಯ ಪರಿಸ್ಥಿತಿ ಗಂಭೀರವಾಗಿದೆ. ಸೋಮವಾರ ಭಾರಿ ಮಳೆಯಿಂದಾಗಿ ಉಂಟಾದ ಹಠಾತ್ ಪ್ರವಾಹದ ನೀರಿನಲ್ಲಿ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಕಾರು ಸಿಲುಕಿಕೊಂಡಿದೆ. ಕಾರಿನೊಳಗೆ ಚಾಲಕ ಸೇರಿ ಮೂವರು ಇದ್ದರು.
ಅಪಾಯಕಾರಿ ಪರಿಸ್ಥಿತಿಯ ನಡುವೆಯೂ ಸ್ಥಳೀಯ ಗ್ರಾಮಸ್ಥರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಸುಮಾರು 8 ರಿಂದ 10 ಮಂದಿ ಯುವಕರು ಪ್ರವಾಹದ ನೀರಿಗಿಳಿದು, ಹಗ್ಗಗಳ ಸಹಾಯದಿಂದ ಹರಸಾಹಸ ಪಟ್ಟು ಕಾರನ್ನು ಸುರಕ್ಷಿತವಾಗಿ ದಡಕ್ಕೆ ಎಳೆದಿದ್ದಾರೆ. ಬಳಿಕ ಕಾರಿನಲ್ಲಿದ್ದ ರೋಗಿಯನ್ನು ತಕ್ಷಣ ಆಂಬ್ಯುಲೆನ್ಸ್‌ಗೆ ಸ್ಥಳಾಂತರಿಸಿ, ಪರ್ಯಾಯ ಮಾರ್ಗದ ಮೂಲಕ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಈ ಸಾಹಸಮಯ ರಕ್ಷಣೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

