ನವದೆಹಲಿ: ಆಸ್ಟ್ರೇಲಿಯಾದ ಕ್ರೈಸ್ತ ಮಿಷನರಿ ಗ್ರಹಾಂ ಸ್ಟುವರ್ಟ್ ಸ್ಟೇನ್ಸ್ ಮತ್ತು ಅವರ ಇಬ್ಬರು ಪುತ್ರರನ್ನು ಹತ್ಯೆ ಮಾಡಿದ ಪ್ರಕರಣದ ಅಪರಾಧಿ ರವೀಂದ್ರ ಪಾಲ್ ಅಲಿಯಾಸ್ ದಾರಾ ಸಿಂಗ್ ಕ್ಷಮಾದಾನ ಅರ್ಜಿಯ ಕುರಿತು ಆಗಸ್ಟ್ 15ರ ಒಳಗೆ ತೀರ್ಮಾನ ತೆಗೆದುಕೊಳ್ಳುವಂತೆ ಒಡಿಶಾ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.
1999ರ ಜನವರಿಯಲ್ಲಿ ಕಿಯೊಂಜಾರ್ ಜಿಲ್ಲೆಯ ಮನೋಹರ್ಪುರ ಗ್ರಾಮದಲ್ಲಿ ಸ್ಟೇನ್ಸ್ ಕುಟುಂಬವನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ದಾರಾ ಸಿಂಗ್ (61) ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ವಿಜಯ್ ಬಿಷ್ಣೋಯಿ ಅವರ ನ್ಯಾಯಪೀಠವು, 'ಅವರು(ದಾರಾ ಸಿಂಗ್) ಕೂಡ ಸ್ವಾತಂತ್ರ್ಯ ದಿನವನ್ನು ಆಚರಿಸಲಿ. ಆಗಸ್ಟ್ 15ರೊಳಗೆ ನಿರ್ಧಾರ ತೆಗೆದುಕೊಳ್ಳಿ' ಎಂದು ರಾಜ್ಯ ಸರ್ಕಾರದ ಪರ ವಕೀಲರಿಗೆ ಸೂಚಿಸಿದೆ.
ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಮಧ್ಯಪ್ರವೇಶಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ. 2025ರ ಮಾರ್ಚ್ನಲ್ಲಿ, ಸಿಂಗ್ ಅವರ ಕ್ಷಮಾದಾನ ಅರ್ಜಿಯ ಕುರಿತು ತೀರ್ಮಾನ ಕೈಗೊಳ್ಳುವಂತೆ ಒಡಿಶಾ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಪಶ್ಚಾತ್ತಾಪ ವ್ಯಕ್ತಪಡಿಸಿದ್ದ ಸಿಂಗ್:
2024ರಲ್ಲಿ ವಕೀಲ ವಿಷ್ಣು ಶಂಕರ್ ಜೈನ್ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಸಿಂಗ್, ಅವಧಿಪೂರ್ವ ಬಿಡುಗಡೆಗೆ ಕೋರಿದ್ದರು.
'24 ವರ್ಷಗಳನ್ನು ಜೈಲಿನಲ್ಲಿ ಕಳೆದಿರುವೆ. ತಾರುಣ್ಯದ ಕೋಪದಲ್ಲಿ ಎಸಗಿದ ಕೃತ್ಯದಿಂದ ಪಶ್ಚಾತ್ತಾಪ ಪಟ್ಟಿರುವೆ. ಸೇವಾ ಮನೋಭಾವದ ಮೂಲಕ ಸಮಾಜಕ್ಕೆ ಏನನ್ನಾದರೂ ಒಳಿತಾಗುವ ಕೆಲಸ ಮಾಡುವೆ' ಎಂದು ನಿವೇದಿಸಿಕೊಂಡಿದ್ದರು.
ವಾಹನಕ್ಕೆ ಬೆಂಕಿ ಹಚ್ಚಿ ಕೊಲೆ:
ಮಧ್ಯರಾತ್ರಿ ಸ್ಟೇನ್ಸ್ ಮತ್ತು ಅವರ ಇಬ್ಬರು ಪುತ್ರರಾದ 11 ವರ್ಷದ ಫಿಲಿಪ್ ಮತ್ತು 8 ವರ್ಷದ ತಿಮೋತಿ ಅವರು ತಮ್ಮ ವಾಹನದಲ್ಲಿ ಮಲಗಿದ್ದಾಗ, ಸಿಂಗ್ ಮತ್ತು ಆತನ ಸಹಚರರು ವಾಹನಕ್ಕೆ ಬೆಂಕಿ ಹಚ್ಚಿದ್ದರು.
ಈ ತ್ರಿವಳಿ ಹತ್ಯೆಯ ಮುಖ್ಯ ಆರೋಪಿ ಸಿಂಗ್ಗೆ 2003ರಲ್ಲಿ ಸಿಬಿಐ ನ್ಯಾಯಾಲಯವು ಮರಣದಂಡನೆ ವಿಧಿಸಿತ್ತು. ಈತನ ಸಹಚರ ಮಹೇಂದ್ರ ಹೆಂಬ್ರಾಮ್ ಕೂಡ ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರೆ, ಇತರ 11 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಹೈಕೋರ್ಟ್ ಖುಲಾಸೆಗೊಳಿಸಿದೆ.

