HEALTH TIPS

'ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ' ಎಂದಿದ್ದ ಮನಮೋಹನ್‌ ಸಿಂಗ್

 ಮುಂಬೈ: 'ಚುನಾವಣಾ ಆಯೋಗವು ಕೇವಲ ಭಾರತದ ಹೆಮ್ಮೆಯಲ್ಲ, ಅದು ದೇಶದ ಪ್ರಜಾಪ್ರಭುತ್ವದ ಆತ್ಮ ಮತ್ತು ನಾವು ಅದನ್ನು ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಳ್ಳುತ್ತೇವೆ'.

- ದೇಶದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು 2012ರಲ್ಲಿ ಅಂದಿನ ಮುಖ್ಯ ಚುನಾವಣಾ ಆಯುಕ್ತರಾಗಿದ್ದ (ಸಿಇಸಿ) ಎಸ್‌.ವೈ ಖುರೇಷಿ ಅವರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ಹೇಳಿದ ಮಾತುಗಳಿವು. 


ಈ ಸಂಭಾಷಣೆ ವಿವರವನ್ನು ಖುರೇಷಿಯವರ ಮುಂಬರುವ ಪುಸ್ತಕ 'ಇಂಡಿಯಾ ಆಯಂಡ್‌ ಐ: ಎ ಹಂಡ್ರೆಡ್‌ ಮೆಮೊರೀಸ್‌, ನಾಟ್‌ ಎ ಮೆಮೊಯಿರ್‌'ನಲ್ಲಿ ದಾಖಲಿಸಲಾಗಿದೆ.

ಪುಸ್ತಕದಲ್ಲಿ ಏನಿದೆ?

2012ರ ಉತ್ತರ ಪ್ರದೇಶ ಚುನಾವಣಾ ರ್‍ಯಾಲಿಯಲ್ಲಿ ಆಗ ಕೇಂದ್ರದ ಕಾನೂನು ಸಚಿವರಾಗಿದ್ದ ಸಲ್ಮಾನ್‌ ಖುರ್ಷಿದ್‌ ಅವರು, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗದಲ್ಲಿ ಮುಸ್ಲಿಮರಿಗೆ ಇರುವ ಮೀಸಲಾತಿಯನ್ನು ಶೇಕಡ 4.5ರಿಂದ ಶೇ 9ಕ್ಕೆ ಹೆಚ್ಚಿಸುವುದಾಗಿ ಭರವಸೆ ನೀಡಿದ್ದರು.

'ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ಹೊಸ ಯೋಜನೆ ಘೋಷಿಸುವಂತಿಲ್ಲ' ಎಂದು ಆರೋಪಿಸಿದ ಬಿಜೆಪಿ, ಖುರ್ಷಿದ್ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಿಸಿತು.

ಈ ವಿಚಾರವಾಗಿ ಚುನಾವಣಾ ಆಯೋಗವು ವಿಚಾರಣೆ ನಡೆಸಿತು. ಕಾಂಗ್ರೆಸ್‌ ಪರವಾಗಿ ಅಭಿಷೇಕ್‌ ಮನು ಸಿಂಘ್ವಿ, ಬಿಜೆಪಿ ಪರವಾಗಿ ಅರುಣ್‌ ಜೇಟ್ಲಿ ವಾದ ಮಂಡಿಸಿದರು. ನಾಲ್ಕು ದಿನದ ಸುದೀರ್ಘ ವಿಚಾರಣೆ ನಂತರ ಅಂತಿಮವಾಗಿ ಖುರ್ಷಿದ್ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಯಿತು.

ಚುನಾವಣಾ ಆಯೋಗದ ತಮ್ಮ ವಿರುದ್ಧ ಕ್ರಮ ತೆಗೆದುಕೊಂಡಿದ್ದರ ವಿರುದ್ಧ ಅಸಮಾಧಾನಗೊಂಡ ಖುರ್ಷಿದ್‌, ಆಯೋಗದ ವಿರುದ್ಧ ಲಘು ಮಾತುಗಳನ್ನಾಡಿದರು. ದುರಂಹಕಾರಿ ಮತ್ತು ನಿರಂಕುಶವಾಗಿ ನಡೆದುಕೊಂಡಿದೆ ಎಂದೆಲ್ಲಾ ಟೀಕಿಸಿದರು.

ಆದರೆ, 'ಇಂತಹ ಟೀಕೆಗಳು ನನ್ನನ್ನು ಧೃತಿಗೆಡಿಸಲಿಲ್ಲ' ಎಂದು ಖುರೇಷಿ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.

ಇದಾದ ಕೆಲ ದಿನಗಳ ಬಳಿಕ ಆಯೋಗದಿಂದ ವಾರ್ಷಿಕ ಈದ್‌ ಕೂಟವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಪತ್ರಿಕಾ ಕಾರ್ಯದರ್ಶಿ ಹರೀಶ್‌ ಖರೆ ಕೂಡ ಬಂದಿದ್ದರು. ಈ ಸಂದರ್ಭದಲ್ಲಿ ಚುನಾವಣಾ ಆಯೋಗದ ಬಗ್ಗೆ ಕೆಲವರು ಆಡಿದ್ದ ಲಘು ಮಾತಿನ ಬಗ್ಗೆ ಖುರೇಷಿ ಅವರು ಹರೀಶ್‌ ಅವರ ಬಳಿ ಪ್ರಸ್ತಾಪಿಸಿದ್ದರು.

ಆಗ, 'ಇದನ್ನು ಪ್ರಧಾನಿ ಬಳಿ ಹೇಳಬೇಕೆ?' ಎಂದು ಹರೀಶ್‌ ಅವರು ಕೇಳಿದ್ದರು. 'ಅದಕ್ಕಾಗಿಯೇ ನಿಮ್ಮ ಬಳಿ ಹೇಳಿದ್ದು' ಎಂದು ಖುರೇಷಿ ಉತ್ತರಿಸಿದ್ದರು.

'ಮರುದಿನ ಆರ್‌ಎಎಕ್ಸ್‌ (ನಿರ್ಬಂಧಿತ ಕರೆ) ಫೋನ್‌ ರಿಂಗಾಯಿತು. ಅತ್ತ ಕಡೆಯಿಂದ ಪ್ರಧಾನಿ ನಿಮ್ಮೊಂದಿಗೆ ಮಾತನಾಡಲು ಬಯಸುತ್ತಾರೆ ಎಂದರು. ಕೆಲವು ಕ್ಷಣಗಳ ನಂತರ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಸಂಪರ್ಕಕ್ಕೆ ಬಂದರು. 'ಖುರೇಷಿ ಜೀ ನಾನು ನಿಮ್ಮನ್ನು ತುರ್ತಾಗಿ ಭೇಟಿಯಾಗಬಹುದೇ' ಎಂದರು. ಅವರ ಧ್ವನಿ ಆತಂಕದಿಂದ ಕೂಡಿತ್ತು. ನಾನು ಹೇಳಿದೆ, ಸರ್‌, ನೀವು ಪ್ರಧಾನಿ, ನೀವು ಹೇಳಿದ ಸಮಯಕ್ಕೆ ನಾನೇ ಬರುತ್ತೇನೆ ಎಂದೆ. ಅಂದು ಸಂಜೆ 7 ಗಂಟೆಗೆ ಸಮಯ ನಿಗದಿಯಾಯಿತು. ನಾನು ನಿಗದಿತ ಸಮಯಕ್ಕೆ ಪ್ರಧಾನಿ ನಿವಾಸ ತಲುಪಿದೆ' ಎಂದು ಖುರೇಷಿ ಅವರು ಪುಸ್ತಕದಲ್ಲಿ ವಿವರಿಸಿದ್ದಾರೆ.

'ಮನಮೋಹನ್‌ ಸಿಂಗ್‌ ಅವರು ನನಗಾಗಿ ಬಾಗಿಲಲ್ಲಿ ಕಾಯುತ್ತಿದ್ದರು. ಅವರು ನನ್ನನ್ನು ಒಳಗೆ ಕರೆದೊಯ್ದು, ನಾನಿನ್ನೂ ಕುರ್ಚಿಯಲ್ಲಿ ಕೂರುವ ಮೊದಲೇ, ನೋವಿನಿಂದ ಹೇಳಿದರು, 'ಪತ್ರಿಕಾ ಕಾರ್ಯದರ್ಶಿ ಹರೀಶ್‌ ಅವರು, ನೀವು ಹೇಳಿದ್ದೆಲ್ಲವನ್ನೂ ನನಗೆ ಹೇಳಿದರು. ಇದು ಕಳವಳಕಾರಿ ವಿಷಯ. ನೀವು ಹಾಗೆ ಭಾವಿಸಿದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ' ಎಂದರು. ಒಂದು ಕ್ಷಣ ನಾನು ದಂಗಾಗಿ ಹೋದೆ. ಏನು ಮಾತನಾಡಬೇಕೆಂದು ತೋಚಲಿಲ್ಲ' ಎಂದು ಖುರೇಷಿ ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.

ಮುಂದುವರಿದು ಮಾತನಾಡಿದ ಮನಮೋಹನ್‌ ಸಿಂಗ್, 'ಚುನಾವಣಾ ಆಯೋಗವು ಕೇವಲ ಭಾರತದ ಹೆಮ್ಮೆಯಲ್ಲ, ಅದು ದೇಶದ ಪ್ರಜಾಪ್ರಭುತ್ವದ ಆತ್ಮ, ನಾವು ಅದನ್ನು ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಳ್ಳುತ್ತೇವೆ' ಎಂದರು. ಈ ಮಾತು ಈಗಲೂ ನನ್ನ ಕಿವಿಯಲ್ಲಿ ಅನುರಣಿಸುತ್ತಿದೆ, ನಿಮಗೆ ಯಾವುದೇ ಸಂದರ್ಭದಲ್ಲಿ ಏನಾದರೂ ಹೇಳಬೇಕೆಂದಿದ್ದರೆ ಪೋನ್‌ ಎತ್ತಿಕೊಂಡು ನನಗೆ ಕರೆ ಮಾಡಿ' ಎಂದು ಹೇಳಿದರು.

'ನಾನು ಪ್ರಧಾನಿ ಅವರನ್ನು ಬೀಳ್ಕೊಟ್ಟು ಹೊರಟೆ. ತಕ್ಷಣ ಈ ವಿಷಯವನ್ನು ಪ್ರಧಾನಿ ಅವರ ಕಾರ್ಯದರ್ಶಿ ಟಿ.ಕೆ.ಎ. ನಾಯರ್‌ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್‌ ಮೆನನ್‌, ಪತ್ರಿಕಾ ಕಾರ್ಯದರ್ಶಿ ಹರೀಶ್‌ ಅವರೊಂದಿಗೆ ಹಂಚಿಕೊಂಡೆ. ನಮ್ಮಲ್ಲಿ ಯಾರೂ ಇದನ್ನು ರಹಸ್ಯವಾಗಿ ಪರಿಗಣಿಸಲಿಲ್ಲ. ನಮ್ಮ ದೇಶವನ್ನು ಮುನ್ನಡೆಸುತ್ತಿರುವ ವ್ಯಕ್ತಿಯ ಬಗ್ಗೆ ಇಂಥದೊಂದು ನೋಟ ತುಂಬಾ ಮುಖ್ಯವಾಗಿತ್ತು' ಎಂದು ಅವರು ವಿವರಿಸಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries