HEALTH TIPS

ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ | 'ಟ್ರಸ್ಟ್‌ನಲ್ಲಿ ಮುಸ್ಲಿಂ ಇದ್ದಿದ್ದರೆ ಎನ್‌ಕೌಂಟರ್ ಮಾಡಿ ಮನೆ ಕೆಡವುತ್ತಿದ್ದರು': ಅಸದುದ್ದೀನ್ ಉವೈಸಿ ವಾಗ್ದಾಳಿ

ಬಿಜ್ನೋರ್: ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಎಐಎಂಐಎಂ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಅವರು ಉತ್ತರ ಪ್ರದೇಶದ ಆದಿತ್ಯನಾಥ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪಶ್ಚಿಮ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಸೋಮವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಉವೈಸಿ, ರಾಮ ಮಂದಿರ ಟ್ರಸ್ಟ್‌ನಲ್ಲಿ ಮುಸ್ಲಿಂ ಸದಸ್ಯರೊಬ್ಬರು ಭಾಗಿಯಾಗಿದ್ದರೆ, ಸರಕಾರವು ಈಗಾಗಲೇ ಅವರನ್ನು ಎನ್‌ಕೌಂಟರ್ ಮಾಡಿ, ಅವರ ಮನೆಯನ್ನು ಬುಲ್ಡೋಝರ್ ಮೂಲಕ ನೆಲಸಮ ಮಾಡುತ್ತಿತ್ತು ಎಂದು ಆರೋಪಿಸಿದರು.

ಪ್ರಕರಣದ ತನಿಖೆಯಲ್ಲಿ ವಿಳಂಬವಾಗುತ್ತಿರುವುದನ್ನು ಪ್ರಶ್ನಿಸಿದ ಅವರು, ಪ್ರಮುಖ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗುತ್ತಿಲ್ಲ ಎಂದು ಹೇಳಿದರು.

'ಟ್ರಸ್ಟ್‌ನಲ್ಲಿ ಮುಸ್ಲಿಮನೊಬ್ಬ ಇದ್ದಿದ್ದರೆ, ಎನ್‌ಕೌಂಟರ್ ನಡೆಸಿ, ಅವರ ಮನೆಯನ್ನು ಬುಲ್ಡೋಝರ್ ಮೂಲಕ ಕೆಡವಿ ಪ್ರಕರಣವನ್ನು ಮುಚ್ಚಿಹಾಕುತ್ತಿದ್ದರು. ಆದರೆ ಈಗಿನ ಆರೋಪಿಗಳು ನಿರಾಳವಾಗಿದ್ದಾರೆ' ಎಂದು ಉವೈಸಿ ಹೇಳಿದರು.

ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ ಬೆಳಕಿಗೆ ಬಂದ ನಂತರ ರಾಜೀನಾಮೆ ನೀಡಿದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರನ್ನು ಉಲ್ಲೇಖಿಸಿ, 'ಚಂಪತ್ ರಾಯ್ ಈಗ ನಿರಾಳವಾಗಿದ್ದಾರೆ' ಎಂದು ಅವರು ಟೀಕಿಸಿದರು.

ಕೆಲವು ದಿನಗಳ ಹಿಂದೆಯೂ ಉವೈಸಿ, ರಾಜ್ಯದಲ್ಲಿ ಮುಸ್ಲಿಮರ ವಿರುದ್ಧ ಕೈಗೊಳ್ಳುವ ಕ್ರಮಗಳಂತೆಯೇ ಈ ಪ್ರಕರಣದ ಆರೋಪಿಗಳ ಮನೆಗಳ ಮೇಲೂ ಬುಲ್ಡೋಝರ್ ಕಾರ್ಯಾಚರಣೆ ನಡೆಸಲಾಗುತ್ತದೆಯೇ ಎಂದು ಉತ್ತರ ಪ್ರದೇಶ ಸರಕಾರವನ್ನು ಪ್ರಶ್ನಿಸಿದ್ದರು.

ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣವು ದೇಶದಾದ್ಯಂತ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ವಿರೋಧ ಪಕ್ಷಗಳು ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವದ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಎತ್ತಿದ ಪ್ರಶ್ನೆಗಳ ಬೆನ್ನಲ್ಲೇ, ರಾಜ್ಯ ಸರಕಾರದ ವಿಶೇಷ ತನಿಖಾ ತಂಡ (S I T) ತನಿಖೆ ಆರಂಭಿಸಿದೆ. ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಲೆಕ್ಕವಿಲ್ಲದ ನಗದು ವಶಪಡಿಸಿಕೊಳ್ಳಲಾಗಿದೆ. ದೇವಾಲಯದ ಸಿಬ್ಬಂದಿ ಮತ್ತು ಬ್ಯಾಂಕ್ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದು, ಟ್ರಸ್ಟಿ ಅನಿಲ್ ಮಿಶ್ರಾ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.

ಜೂನ್ 25ರಂದು ಟ್ರಸ್ಟ್ ಸದಸ್ಯ ಕೃಷ್ಣ ಮೋಹನ್ ಅವರ ದೂರಿನ ಆಧಾರದಲ್ಲಿ ಮೊದಲ FIR ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್‌ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಹಾಗೂ ರಾಮ್ ಶಂಕರ್ ಯಾದವ್ (ಟಿನ್ನು) ಸೇರಿದಂತೆ ಎಂಟು ಮಂದಿಯ ಹೆಸರಿದೆ. ಇವರೆಲ್ಲರೂ ರಾಮ ಮಂದಿರದ ದೇಣಿಗೆ ಎಣಿಕೆ ಸಿಬ್ಬಂದಿಯಾಗಿದ್ದು, ಅವರನ್ನು ಬಂಧಿಸಲಾಗಿದೆ. ಹಲವಾರು ಅಪರಿಚಿತ ವ್ಯಕ್ತಿಗಳ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಜೂನ್ 26ರಂದು ಮುಖ್ಯಮಂತ್ರಿ ಆದಿತ್ಯನಾಥ್, ಸಾರ್ವಜನಿಕ ನಂಬಿಕೆಗೆ ಧಕ್ಕೆ ಉಂಟುಮಾಡುವವರ ವಿರುದ್ಧ ರಾಜ್ಯ ಸರಕಾರವು ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸಲಿದೆ ಎಂದು ಹೇಳಿದ್ದರು.

ಕಳವಾಗಿರುವ ನಿಖರ ಮೊತ್ತ ಇನ್ನೂ ತಿಳಿದುಬಂದಿಲ್ಲ. ಆದರೆ, ದೇವಾಲಯದ ದಾಖಲೆಗಳ ಪ್ರಕಾರ ಸುಮಾರು 7ರಿಂದ 7.5 ಕೋಟಿ ರೂ. ನಗದು ಕಾಣೆಯಾಗಿದೆ ಎಂದು ಅಂದಾಜಿಸಲಾಗಿದೆ. ಇದುವರೆಗೆ ಆರೋಪಿಗಳಿಂದ ಸುಮಾರು 80 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries