ನವದೆಹಲಿ: ಬಾಂಗ್ಲಾದೇಶದಲ್ಲಿ ದಂಗೆ ಬಳಿಕ ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶ ತೊರೆದು ಎರಡು ವರ್ಷ ಕಳೆದಿದೆ. ಗಲಭೆ ಸಂಬಂಧಿತ ಪ್ರಕರಣದಲ್ಲಿ ಶೇಖ್ ಹಸೀನಾಗೆ ಅಲ್ಲಿನ ನ್ಯಾಯಾಲಯ ಮರಣ ದಂಡನೆ ವಿಧಿಸಿದ್ದು, ಅವರ ಪಕ್ಷ ಅವಾಮಿ ಲೀಗ್ ಅನ್ನು ನಿಷೇಧಿಸಲಾಗಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೂ ಈ ವರ್ಷ ಸ್ವದೇಶಕ್ಕೆ ಹಿಂದಿರುಗುವುದಾಗಿ ಅವರು ಹೇಳಿದ್ದಾರೆ.
ಎನ್‌ಡಿಟಿವಿಯ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಾನು ಈ ವರ್ಷ ಸ್ವದೆಶಕ್ಕೆ ಹಿಂದಿರುಗುತ್ತೇನೆ. ನಮ್ಮ ಪಕ್ಷ ಅವಾಮಿ ಲೀಗ್ ಪಕ್ಷ ಕೇವಲ ಒಂದು ಸಂಘಟನೆಯಲ್ಲ, ಅದೊಂದು ಪಡೆ ಎಂದು ಘೋಷಿಸಿದ್ದಾರೆ. ಅಲ್ಪಸಂಖ್ಯಾತರ ಮೇಲಿನ ಯಾವುದೇ ದಾಳಿಯು ಬಾಂಗ್ಲಾದೇಶದ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
ರಾಷ್ಟ್ರವ್ಯಾಪಿ ನಿಷೇಧವನ್ನು ಧಿಕ್ಕರಿಸಿ ಕಳೆದ ಮಂಗಳವಾರ(ಜೂನ್ 23) ಅವಾಮಿ ಲೀಗ್ ತನ್ನ 77ನೇ ಸಂಸ್ಥಾಪನಾ ದಿನವನ್ನು ಆಚರಿಸಿತ್ತು. ಈ ಸಂದರ್ಭ ಅವಾಮಿ ಲೀಗ್‌ನ ಹಲವು ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಬಾಂಗ್ಲಾದೇಶಕ್ಕೆ ಹಿಂದಿರುಗುವುದು ನನ್ನ ವೈಯಕ್ತಿಕ ಅಭಿಲಾಶೆಯಲ್ಲ. ಬಾಂಗ್ಲಾದೇಶದ ಜನರ ರಾಜಕೀಯ ಹಕ್ಕುಗಳನ್ನು ಕಾಪಾಡುವುದು, ಪ್ರಜಾಪ್ರಭುತ್ವದ ಪುನಶ್ಚೇತನ, ಕಾನೂನು ಮತ್ತು ಲಿಬರೇಶನ್ ಯುದ್ಧದ ಪ್ರೇರಣೆಯನ್ನು ಕಾಪಾಡುವ ವಿಷಯಗಳನ್ನು ಒಳಗೊಂಡಿದೆ ಎಂದಿದ್ದಾರೆ.
ನಾನು ಅಧಿಕಾರಕ್ಕಾಗಿ ರಾಜಕಾರಣ ಮಾಡುವುದಿಲ್ಲ. ದೇಶದ ಜನರ ಕಲ್ಯಾಣ ಮತ್ತು ರಾಷ್ಟ್ರಪಿತರ ಕನಸನ್ನು ನನಸು ಮಾಡುವುದು ನನ್ನ ಉದ್ದೇಶವಾಗಿದೆ. ಮರಣದಂಡನೆ ವಿಧಿಸಿರುವ ನನ್ನ ವಿರುದ್ಧದ ತೀರ್ಪು ನ್ಯಾಯವಲ್ಲ. ಅಕ್ರಮ, ಅಸಾಂವಿಧಾನಿಕ ಮತ್ತು ರಾಜಕೀಯ ಪ್ರೇರಿತ ಪ್ರಕ್ರಿಯೆಯಾಗಿದೆ ಎಂದಿದ್ದಾರೆ.
ಅವಾಮಿ ಲೀಗ್ ಪಕ್ಷವನ್ನು ನಾಯಕರಿಲ್ಲದಂತೆ ಮಾಡಲು ನ್ಯಾಯಾಂಗ ವ್ಯವಸ್ಥೆಯನ್ನು ರಾಜಕೀಯ ಸೇಡು ತೀರಿಸಿಕೊಳ್ಳುವ ಅಸ್ತ್ರವಾಗಿ ಬಳಸಲಾಗುತ್ತಿದೆ. ಈ ಹಿಂದೆಯೂ ಅಂತಹ ಪ್ರಯತ್ನ ನಡೆದಿದ್ದವು. ಆಗಲೂ ಅವರು ಸೋತಿದ್ದರು. ಈಗಲೂ ಸೋಲುತ್ತಾರೆ ಎಂದಿದ್ದಾರೆ.
ನಾನು ಸಾವಿಗೆ ಹೆದರುವವಳಲ್ಲ. 1975ರಲ್ಲಿ ನನ್ನ ಪೋಷಕರು, ಸಹೋದರರು ಸೇರಿ ಬಹುತೇಕ ಕುಟುಂಬವನ್ನು ಕಳೆದುಕೊಂಡೆ. ಗ್ರೆನೇಡ್ ಹಾಕಿ ನನ್ನ ಹತ್ಯೆಗೂ ಪ್ರಯತ್ನಿಸಲಾಗಿತ್ತು. ನನ್ನ ವಿರುದ್ಧ ಹಲವು ಸಂಚು ನಡೆದಿವೆ. ಎಲ್ಲ ಸಂಚುಗಳನ್ನು ಹಿಮ್ಮೆಟ್ಟಿಸಿ ಜನರ ಪರ ನಿಂತಿದ್ದೇನೆ. ಜನರಿಂದ ಐದು ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿದ್ದೇನೆ. ದೇಶದ ಅಭೂತಪೂರ್ವ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನನ್ನ ಸಂಪೂರ್ಣ ಜೀವನ ಬಾಂಗ್ಲಾ ಜನರು, ಅವಾಮಿ ಲೀಗ್, ಪ್ರಜಾಸತ್ತಾತ್ಮಕ ಹೋರಾಟ ಮತ್ತು ದೇಶದ ಅಭಿವೃದ್ಧಿಗೆ ಮೀಸಲಾಗಿದೆ. ಎಲ್ಲ ಅಡೆತಡೆಗಳು, ಸಂಚುಗಳನ್ನು ಮೆಟ್ಟಿನಿಂತು ದೇಶಕ್ಕೆ ಹಿಂದಿರುಗುತ್ತೇನೆ ಎಂದು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ ಎಂದಿದ್ದಾರೆ.
ಅವಾಮಿ ಲೀಗ್ ಕೇವಲ ಕಾಗದದ ಮೇಲಿನ ಸಂಘಟನೆಯಲ್ಲ. ಬಾಂಗ್ಲಾದ ಮಣ್ಣು, ಜನರ ಮನಸ್ಸು, ಬಾಂಗ್ಲಾ ಇತಿಹಾಸ ಮತ್ತು ದೇಶದ ಐಡೆಂಟಿಟಿಯಲ್ಲಿ ಬೇರೂರಿರುವ ರಾಜಕೀಯ ಶಕ್ತಿಯಾಗಿದೆ. 77 ವರ್ಷದ ಇತಿಹಾಸದಲ್ಲಿ ಹಲವು ಬಾರಿ ಪಕ್ಷದ ಮೇಲೆ ದಾಳಿ ನಡೆದಿದೆ. ಹಲವು ಬಾರಿ ರಕ್ತ ಚೆಲ್ಲಿದೆ. ಹಲವು ಬಾರಿ ನಿಷೇಧ ಎದುರಿಸಿದೆ. ಜನಶಕ್ತಿಯಿಂದ ಪ್ರತಿಬಾರಿ ಮೇಲೆದ್ದು ಬಂದಿದೆ ಎಂದಿದ್ದಾರೆ.

