ಮುಂಬೈ: ಮೊಹರಂ ಮೆರವಣಿಗೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ವಿಷಕಾರಿ ಮಾತ್ರೆಗಳನ್ನು ಹಂಚುತ್ತಿದ್ದ ಫಯಾಜ್ ಪ್ರೇಮ್ಜಿ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಬೈಕುಲ್ಲಾ ಪ್ರದೇಶದಲ್ಲಿ ಆರೋಪಿ ಪ್ರೇಮ್ಜಿಯನ್ನು ಮುಂಬೈ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಪೊಲೀಸರು ತಮ್ಮ ಸಮಯಪ್ರಜ್ಞೆಯಿಂದ ಆರೋಪಿಯನ್ನು ಬಂಧಿಸುವ ಮೂಲಕ ಭಾರಿ ದುರಂತವೊಂದನ್ನು ತಪ್ಪಿಸಿದ್ದಾರೆ.
ಶುಕ್ರವಾರ ನಡೆದ ಮೊಹರಂ ಮೆರವಣಿಗೆ ವೇಳೆ ಆರೋಪಿಯು 11 ಜನರಿಗೆ ಈ ಮಾತ್ರೆಗಳನ್ನು ನೀಡಿದ್ದ. ಮಾತ್ರೆಗಳನ್ನು ತಿಂದವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಆರೋಪಿ ನೀಡಿದ್ದ ಮಾತ್ರೆಗಳಲ್ಲಿ ಇಲಿ ಪಾಷಾಣಕ್ಕೆ ಬಳಸುವ 'ಜಿಂಕ್ ಫಾಸ್ಫೈಡ್' ಎಂಬ ಮಾರಣಾಂತಿಕ ರಾಸಾಯನಿಕ ಮಿಶ್ರಣವಾಗಿತ್ತು ಎಂದು ಪತ್ತೆಯಾಗಿದೆ. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸುಮಾರು 15 ಸಾವಿರ ಜನರಿಗೆ ವಿಷ ಉಣಿಸಿ ಕೊಲ್ಲುವುದು ತನ್ನ ಸಂಚಾಗಿತ್ತು ಎಂದು ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶಕ್ತಿ ವರ್ಧಕ ಮತ್ತು ನೋವು ನಿವಾರಕ ಮಾತ್ರೆಗಳು ಎಂದು ಜನರಿಗೆ ಸುಳ್ಳು ಹೇಳಿ ಮಾತ್ರೆಗಳನ್ನು ಹಂಚುತ್ತಿದ್ದ. ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಮಾತ್ರೆ ಹಂಚುವುದನ್ನು ಗಮನಿಸಿದ ಪೊಲೀಸರು ಸ್ಥಳದಲ್ಲೇ ಫಯಾಜ್ ಪ್ರೇಮ್ಜಿಯನ್ನು ಬಂಧಿಸಿದ್ದಾರೆ.
ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಬಳಿಯಿದ್ದ ಬರೋಬ್ಬರಿ 14,900 ವಿಷದ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆ ಕುರಿತಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

