ನವದೆಹಲಿ: ಪ್ರಧಾನ ಮಂತ್ರಿ ಹಾಗೂ ಇತರ ಪ್ರಮುಖರು ತಮ್ಮ ಖಾತೆಗಳ ಮೂಲಕ ಪೋಸ್ಟ್ ಮಾಡುವ ವಸ್ತು-ವಿಷಯಗಳ ಕುರಿತಾಗಿ ಬಹಳ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಮೆಟಾ ಕಂಪನಿಯು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಹಾಗೂ ಇತರ ಪ್ರಮುಖ ವ್ಯಕ್ತಿಗಳು ತಮ್ಮ ಖಾತೆಯ ಮೂಲಕ ಏನಾದರೂ ಪೋಸ್ಟ್ ಮಾಡಿದಾಗ ಅದರ ಬಗ್ಗೆ ಹೆಚ್ಚುವರಿಯಾದ ನಿಗಾ ಇರಿಸಲಾಗುತ್ತದೆ, ಕಂಪನಿಯ ಹಿರಿಯ ಅಧಿಕಾರಿಗಳು ಅವುಗಳನ್ನು ಹಲವು ಹಂತಗಳಲ್ಲಿ ಪರಿಶೀಲಿಸುತ್ತಾರೆ ಎಂದು ಅದು ಕೇಂದ್ರ ಐ.ಟಿ.
ಸಚಿವಾಲಯಕ್ಕೆ ತಿಳಿಸಿದೆ ಎಂಬ ಸಂಗತಿಯು ಮೂಲಗಳಿಂದ ಗೊತ್ತಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಫೇಸ್ಬುಕ್ನಲ್ಲಿ ವಿಡಿಯೊ ಒಂದನ್ನು ಜುಲೈ 23ರಂದು ಪ್ರಕಟಿಸಿದಾಗ ಅದನ್ನು ಕೆಲವು ಹೊತ್ತು ನಿರ್ಬಂಧಿಸಿದ ಪ್ರಕರಣದ ಕುರಿತಾಗಿ ಮೆಟಾ ಕಂಪನಿಯ ತಂಡವು ಕೇಂದ್ರದ ಹಿರಿಯ ಅಧಿಕಾರಿಗಳನ್ನು ಈ ವಾರದಲ್ಲಿ ಅಥವಾ ಮುಂದಿನ ವಾರದ ಆರಂಭದಲ್ಲಿ ಭೇಟಿ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈ ಕುರಿತಾಗಿ ಮೆಟಾ ಕಂಪನಿಯ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಪ್ರಧಾನಿ ಮೋದಿ ಅವರು ದೇಶದ ಯುವಜನರನ್ನು ಉದ್ದೇಶಿಸಿ ಪೋಸ್ಟ್ ಪ್ರಕಟಿಸಿದ್ದರು. ಆದರೆ ಇದನ್ನು ಫೇಸ್ಬುಕ್ ನಿರ್ಬಂಧಿಸಿತ್ತು. ತಾಂತ್ರಿಕ ಲೋಪದ ಕಾರಣದಿಂದಾಗಿ ಈ ರೀತಿ ಆಗಿತ್ತು ಎಂದು ಮೆಟಾ ಕಂಪನಿಯು ಹೇಳಿತ್ತಾದರೂ, ಅದು ಸಮರ್ಪಕವಾಗಿ ಇಲ್ಲ ಎಂದು ಐ.ಟಿ ಸಚಿವಾಲಯ ಹೇಳಿತ್ತು.

